ಮಹಿಳಾ ಟಿ20 ವಿಶ್ವಕಪ್: ಚಾಂಪಿಯನ್ ಪಟ್ಟಕ್ಕೇರಲು ಭಾರತಕ್ಕೆ ಬೇಕು ಇನ್ನೆರಡು ಗೆಲುವು: ಆದರೆ ಈ 3 ಅಂಶಗಳದ್ದೇ ಕಳವಳ!

ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತ ಉತ್ತಮ ಪ್ರದರ್ಶನ ನೀಡುತ್ತಿದ್ದು ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆದರೆ ಸೆಮಿಫೈನಲ್‌ನಲ್ಲಿ ಭಾರತಕ್ಕೆ ಕಠಿಣ ಸವಾಲು ಎದುರಾಗುವುದರಲ್ಲಿ ಅನುಮಾನವಿಲ್ಲ. ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಈ ಮಹತ್ವದ ಘಟ್ಟದಲ್ಲಿ ಭಾರತ ಎದುರಿಸಬೇಕಿದ್ದು ಗೆದ್ದರೆ ಮಾತ್ರವೇ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆಯಲಿದೆ. ಹಾಗಾಗಿ ಗುರುವಾರ ನಡೆಯಲಿರುವ ಈ ಪಂದ್ಯದ ಮೇಲೆ ಸಾಕಷ್ಟು ಕುತೂಹಲ ಮೂಡಿಸಿದೆ.
ಈ ವಿಶ್ವಕಪ್‌ನಲ್ಲಿ ಭಾರತ ಸೆಮಿಫೈನಲ್‌ಗೆ ಪ್ರವೇಶ ಪಡೆದಿದ್ದರೂ ಹಲವು ವಿಚಾರಗಳಲ್ಲಿ ಭಾರತ ತಂಡ ಸಾಕಷ್ಟು ಪ್ರಗತಿ ಸಾಧಿಸಬೇಕಿದೆ. ಲೀಗ್ ಹಂತದಲ್ಲಿ ಇಂಗ್ಲೆಂಡ್ ವಿರುದ್ಧ ಸೋಲು ಅನುಭವಿಸಿದ್ದ ಭಾರತ ಈ ಬಾರಿ ಪ್ರಶಸ್ತಿ ಗೆಲ್ಲುವ ಕನಸು ನನಸು ಮಾಡಿಕೊಳ್ಳಬೇಕಿದ್ದರೆ ಹಿಂದೆ ಮಾಡಿರುವ ತಪ್ಪುಗಳನ್ನು ತಿದ್ದಿಕೊಳ್ಳುವುದು ಅನಿವಾರ್ಯ.
ಇನ್ನು ಈ ವಿಶ್ವಕಪ್‌ನ ಸಂದರ್ಭದಲ್ಲಿ ಭಾರತ ತಂಡಕ್ಕೆ ಮೂರು ವಿಚಾರಗಳು ಹೆಚ್ಚು ಕಳವಳಕಾರಿಯಾಗಿದ್ದು ಇದನ್ನು ಸರಿಪಡಿಸಿಕೊಂಡರೆ ಮಾತ್ರವೇ ಆಸ್ಟ್ರೇಲಿಯಾದಂಥಾ ಬಲಿಷ್ಠ ತಂಡದ ವಿರುದ್ಧ ಗೆದ್ದು ಫೈನಲ್‌ಗೆ ಪ್ರವೇಶ ಪಡೆಯಲು ಸಾಧ್ಯ. ಹಾಗಾದರೆ ಭಾರತಕ್ಕೆ ಕಳವಳಕಾರಿಯಾಗಿರುವ ಆ ಮೂರು ಸಂಗತಿಗಳು ಯಾವುದು? ಮುಂದೆ ಓದಿ..

ಸ್ಮೃತಿ ಮಂಧಾನ ಮೇಲೆ ಅತಿಯಾದ ಅವಲಂಬನೆ
ಭಾರತದ ಆರಂಭಿಕ ಆಟಗಾರ್ತಿ ಹಾಗೂ ಉಪನಾಯಕಿ ಸ್ಮೃತಿ ಮಂಧಾನ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿ 87 ರನ್‌ಗಳ ಕೊಡುಗೆ ನೀಡಿದ್ದು ನಾಕೌಟ್ ಪಂದ್ಯಕ್ಕೂ ಮುನ್ನ ಭಾರತ ತಂಡದ ಆತ್ಮ ವಿಶ್ವಾಸ ಹೆಚ್ಚಿಸಿದೆ. ಆದರೆ ಅಗ್ರ ಕ್ರಮಾಂಕದ ಇತರ ಬ್ಯಾಟರ್‌ಗಳ ಪ್ರದರ್ಶನ ಅಷ್ಟೇ ಕಳವಳ ಮೂಡಿಸಿದೆ. ಇಂಗ್ಲೆಂಡ್ ವಿರುದ್ಧ ಅನುಭವಿಸಿದ 11 ರನ್‌ಗಳ ಸೋಲು ಭಾರತದ ಕಳಪೆ ಸ್ಟ್ರೈಕ್‌ರೇಟ್‌ನ ಪರಿಣಾಮದ ಫಲಿತಾಂಶ ಎಂಬುದು ಕೂಡ ಸ್ಪಷ್ಟವಾಗಿದೆ. ದಕ್ಷಿಣ ಆಫ್ರಿಕಾ ನೆಲದಲ್ಲಿ ಶಫಾಲಿ ವರ್ಮ ತಮ್ಮ ಸಹಜ ಶೈಲಿಯಲ್ಲಿ ಬ್ಯಾಟ್ ಬೀಸಲು ಸಾಧ್ಯವಾಗಬೇಕಿದೆ. ನಾಯಕಿ ಹರ್ಮನ್ ಪ್ರೀತ್ ಕೌರ್ ಬ್ಯಾಟ್‌ನಿಂದಲೂ ಸರಾಗವಾಗಿ ರನ್‌ಹರಿದು ಬರುವ ಅಗತ್ಯವಿದೆ.

ಮಧ್ಯಮ ಕ್ರಮಾಂಕದಲ್ಲಿ ರಿಚಾ ಘೋಷ್‌ಗೆ ಸಿಗುತ್ತಿಲ್ಲ ಬೆಂಬಲ
ರಿಚಾ ಘೋಷ್ ಈ ಟೂರ್ನಿಯಲ್ಲಿ ಭಾರತದ ಪರವಾಗಿ ಅದ್ಭುತ ಪ್ರದರ್ಶನ ನೀಡಿದ ಆಟಗಾರ್ತಿ. ಒತ್ತಡದ ಸಂದರ್ಭದಲ್ಲಿಯೂ ರಿಚಾ ಅದ್ಭುತವಾಗಿ ಬ್ಯಾಟಿಂಗ್ ಪ್ರದರ್ಶಿಸಿ ಗಮನಸೆಳೆದಿದ್ದಾರೆ. ಮೊದಲ ಎರಡು ಪಂದ್ಯಗಳಲ್ಲಿ ಪಾಕಿಸ್ತಾನ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಗೆಲುವಿನಲ್ಲಿ ರಿಚಾ ಪಾತ್ರ ಮಹತ್ವದ್ದಾಗಿತ್ತು. ಐದನೇ ಕ್ರಮಾಂಕದಲ್ಲಿ ರಿಚಾ ಅದ್ಭುತವಾಗಿ ಪ್ರದರ್ಶನ ನಿಡುತ್ತಿದ್ದಾರೆ. ಆದರೆ ಅವರಿಗೆ ಮಧ್ಯಮ ಕ್ರಮಾಂಕದಲ್ಲಿ ಇತರ ಬ್ಯಾಟರ್‌ಗಳಿಂದ ನೆರವು ದೊರೆಯುತ್ತಿಲ್ಲ ಎಂಬುದು ಕೂಡ ಅಷ್ಟೇ ನಿಜ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 14 ಎಸೆತಗಳಲ್ಲಿ 34 ರನ್‌ಗಳನ್ನು ಗಳಿಸುವ ಸವಾಲು ಭಾರತದ ಮುಂದಿದ್ದಾಗ ಭಾರತ ಮುಂದಿನ 8 ಎಸೆತಗಳಲ್ಲಿ ಗಳಿಸಿದ್ದು ಕೇವಲ 3 ರನ್ ಮಾತ್ರ. ಕೆಳ ಮಧ್ಯಮ ಕ್ರಮಾಂಕದ ಈ ಪ್ರದರ್ಶನ ನಿಜಕ್ಕೂ ಆತಂಕ ಮೂಡಿಸಿದೆ. ಇನ್ನು ಆಲ್‌ರೌಂಡರ್‌ಗಳಾದ ದೀಪ್ತಿ ಶರ್ಮಾ ಹಾಗು ಪೂಜಾ ವಸ್ತ್ರಾಕರ್ ಬ್ಯಾಟಿಂಗ್‌ನಲ್ಲಿಯೂ ನೆರವಿಗೆ ನಿಲ್ಲುವ ಅಗತ್ಯವನ್ನು ಅರ್ಥ ಮಾಡಿಕೊಳ್ಳಬೇಕಿದೆ.

ಸ್ಪಿನ್ನರ್‌ಗಳ ಅಸ್ಥಿರ ಪ್ರದರ್ಶನ
ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಮಹಿಳಾ ವಿಶ್ವಕಪ್‌ನಲ್ಲಿ ಇತರ ಬಹುತೇಕ ರಾಷ್ಟ್ರಗಳ ಸ್ಪಿನ್ನರ್‌ಗಳು ಅದ್ಭುತ ಪ್ರದರ್ಶನ ನೀಡಕೊಂಡು ಬಂದಿದ್ದಾರೆ. ಆದರೆ ಭಾರತದ ಸ್ಪಿನ್ನರ್‌ಗಳ ಪ್ರದರ್ಶನ ಮಾತ್ರ ಅಸ್ಥಿರವಾಗಿರುವುದು ತಂಡಕ್ಕೆ ದೊಡ್ಡ ಹಿನ್ನಡೆ. ಎಡಹೈ ಸ್ಪಿನ್ನರ್ ರಾಜೇರ್ಶರಿ ಗಾಯಕ್ವಾಡ್ ಈ ಟೂರ್ನಿಯಲ್ಲಿ ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಿಲ್ಲ. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ದೀಪ್ತಿ ಶರ್ಮಾ ಅದ್ಭುತ ಪ್ರದರ್ಶನ ನೀಡಿದ್ದರು ಕೂಡ ಇಂಗ್ಲೆಂಡ್ ವಿರುದ್ಧ ನಾಲ್ಕು ಓವರ್‌ಗಳಲ್ಲಿ 37 ರನ್ ನೀಡಿ ದುಬಾರಿಯಾಗಿದ್ದರು. ರಾಧಾ ಯಾದವ್ ಗಮನಸೆಳೆದಿದ್ದರು ಕೂಡ ಉಳಿದ ಸ್ಪಿನ್ನರ್‌ಗಳ ಪ್ರದರ್ಶನ ಪ್ರಶ್ನೆಗಳನ್ನುಂಟು ಮಾಡಿದ್ದು ಸ್ನೇಹ್ ರಾಣಾ ಅವರಂತಾ ಆಟಗಾರ್ತಿ ಆಡುವ ಬಳಗದಿಂದ ಹೊರಗುಳಿಯುವಂತಾಗಿರುವುದು ವಿಪರ್ಯಾಸ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications