ಮಹಿಳಾ ಟಿ20 ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 9 ರನ್ ಸೋಲು ಕಂಡಿದೆ. ಈ ಮೂಲಕ ಭಾರತ ಪ್ರಸಕ್ತ ವಿಶ್ವಕಪ್‌ನಲ್ಲಿ ಸೆಮಿಫೈನಲ್ಸ್ ಪ್ರವೇಶಿಸುವ ಕನಸು ದೂರ ಸರಿದಂತೆ ಆಗಿದೆ.
ಭಾನುವಾರ ಶಾರ್ಜಾದಲ್ಲಿ ನಡೆದ ಗ್ರುಪ್ ಎ ಹಂತದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸೀಸ್ 20 ಓವರ್ ಗಳಲ್ಲಿ 8 ವಿಕೆಟ್ ಗೆ 158 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಭಾರತ 20 ಓವರ್ ಗಳಲ್ಲಿ 9 ವಿಕೆಟ್ ಗೆ 142 ರನ್ ಬಾರಿಸಿ ಸೋಲು ಕಂಡಿತು. ಈ ಟೂರ್ನಿಯಲ್ಲಿ ಭಾರತ ಎರಡನೇ ಸೋಲನ್ನು ಕಂಡು ನಿರಾಸೆ ಅನುಭವಿಸಿದೆ. ರೋಚಕ ಪಂದ್ಯದಲ್ಲಿ ಆಸೀಸ್ ಭರ್ಜರಿ ಜಯ ದಾಖಲಿಸಿ 6ನೇ ಬಾರಿ ವಿಶ್ವಕಪ್ ಸೆಮಿಫೈನಲ್ಸ್ ಪ್ರವೇಶಿಸಿದೆ.

ಭಾರತಕ್ಕೆ ಪಂದ್ಯದ ಕೊನೆಯ ಓವರ್ ನಲ್ಲಿ ಗೆಲ್ಲಲು 14 ರನ್ ಅವಶ್ಯಕತೆ ಇತ್ತು. ಆದರೆ ಈ ವೇಳೆ ಆಸೀಸ್ ಬೌಲರ್ ಮೊನಚಾದ ದಾಳಿ ಸಂಘಟಿಸಿದರು. ಅಲ್ಲದೆ ಭಾರತಕ್ಕೆ ಬೇಕಿದ್ದ ಅಗತ್ಯ ರನ್ ಗಳನ್ನು ನೀಡದೆ ವಿಕೆಟ್ ಬೇಟೆ ನಡೆಸಿದರು. ಪರಿಣಾಮ ಭಾರತದ ಸೆಮೀಸ್ ಕನಸಿಗೆ ಕೊಳ್ಳೆ ಇಟ್ಟರು.
ಈಗಲೂ ಭಾರತಕ್ಕೆ ಮಹಿಳಾ ಟಿ20 ವಿಶ್ವಕಪ್ ಪಂದ್ಯದಲ್ಲಿ ಸೆಮಿಫೈನಲ್ಸ್ ಹಂತ ಪ್ರವೇಶಿಸುವ ಅವಕಾಶ ಇದೆ. ಇದಕ್ಕಾಗಿ ಭಾರತ ಇಂದು ನಡೆಯಲಿರುವ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ನಡುವಣ ಪಂದ್ಯದ ಮೇಲೆ ಚಿತ್ತ ನೆಟ್ಟಿದೆ. ಈ ಪಂದ್ಯದಲ್ಲಿ ಕಿವೀಸ್ ಸುಲಭವಾಗಿ ಪಂದ್ಯ ಗೆದ್ದರೂ ಭಾರತದ ಸೆಮಿಫೈನಲ್ಸ್ ಆಸೆ ನುಚ್ಚು ನೂರಾಗುತ್ತದೆ. ಒಂದು ವೇಳೆ ಪಾಕ್ ಈ ಪಂದ್ಯದಲ್ಲಿ ಗೆಲುವು ದಾಖಲಿಸಿದರೆ ಭಾರತ ಸೆಮಿಫೈನಲ್ಸ್ ಪ್ರವೇಶಿಸಬಹುದಾಗಿದೆ. ಏಕೆಂದರೆ ಭಾರತದ ನೆಟ್ ರನ್ ರೇಟ್ ಪಾಕ್ ಗಿಂತಲೂ ಉತ್ತಮವಾಗಿದೆ.
ಪಾಕ್ ಈ ಪಂದ್ಯ ಗೆದ್ದಲ್ಲಿ ನ್ಯೂಜಿಲೆಂಡ್, ಭಾರತ, ಪಾಕಿಸ್ತಾನ ತಂಡಗಳು ತಲಾ ನಾಲ್ಕು ಅಂಕವನ್ನು ಕಲೆ ಹಾಕುತ್ತವೆ. ಆಗ ಉಪಾಂತ್ಯದ ಲೆಕ್ಕಾಚಾರವೆಲ್ಲಾ ರನ್ ರೇಟ್ ಆಧಾರದ ಮೇಲೆ ನಿಂತಿರುತ್ತದೆ. ಪ್ರಸ್ತುತ ಭಾರತೀಯ ಮಹಿಳಾ ತಂಡದ ರನ್ ರೇಟ್ +0.322 ಆಗಿದೆ. ಆದರೆ ಪಾಕಿಸ್ತಾನದ ರನ್ ರೇಟ್ -0.488 ಆಗಿದ್ದು, ನ್ಯೂಜಿಲೆಂಡ್‌ನ ರನ್ ರೇಟ್ +0.282 ಆಗಿದೆ. ಒಂದು ವೇಳೆ ಪಾಕ್ ಈ ಪಂದ್ಯದಲ್ಲಿ ಗೆದ್ದು ಸೆಮಿಫೈನಲ್ಸ್ ಪ್ರವೇಶಿಸಬೇಕಾದಲ್ಲಿ ದೊಡ್ಡ ಅಂತರದ ಗೆಲುವಿನ ಅವಶ್ಯಕತೆ ಇದೆ.
ಆಸ್ಟ್ರೇಲಿಯಾ ಮಹಿಳಾ ತಂಡದ ವಿರುದ್ಧದ ಈ ಸೋಲಿನ ನಂತರ, ಹರ್ಮನ್‌ಪ್ರೀತ್ ಕೌರ್ ಈ ಪಂದ್ಯದ ಬಗ್ಗೆ ತಮ್ಮ ಅನಿಸಿಕೆ ತಿಳಿಸಿದ್ದಾರೆ. ಆಸೀಸ್ ತಂಡ ಸಂಘಟಿತ ಪ್ರದರ್ಶನ ನೀಡಿದೆ. ಅವರು ಒಬ್ಬರು ಅಥವಾ ಇಬ್ಬರು ಆಟಗಾರರನ್ನು ಅವಲಂಬಿಸಿಲ್ಲ. ಅವರ ತಂಡದಲ್ಲಿ ಗೆಲುವಿನಲ್ಲಿ ಮಿಂಚಬಲ್ಲ ಅನೇಕ ಆಲ್‌ರೌಂಡರ್‌ಗಳು ಇದ್ದಾರೆ. ಸರಿಯಾದ ಸಮಯದಲ್ಲಿ ಸರಿಯಾದ ಪ್ಲ್ಯಾನಿಂಗ್ ಮಾಡಿದ ಎದುರಾಳಿ ತಂಡ ಗೆಲುವು ದಾಖಲಿಸಿದೆ ಎಂದಿದ್ದಾರೆ.