
ಗುವಾಹಟಿ, ಮಾರ್ಚ್ 9: ಗುವಾಹಟಿಯ ಬರ್ಸಪರ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ (ಮಾರ್ಚ್ 9) ನಡೆದ ಭಾರತದ ಮಹಿಳೆಯರು ಮತ್ತು ಇಂಗ್ಲೆಂಡ್ ಮಹಿಳೆಯರ ನಡುವಿನ ಮೂರನೇ ಮತ್ತು ಕೊನೆಯ ಟಿ20 ಪಂದ್ಯದಲ್ಲಿ ಆತಿಥೇಯ ಭಾರತ ಕೇವಲ ಒಂದು ರನ್ನಿನಿಂದ ತಲೆ ಬಾಗಿದೆ. ಅಲ್ಲದೆ ಮೂರು ಪಂದ್ಯಗಳ ಈ ಟಿ20 ಸರಣಿಯಲ್ಲಿ 3-0ಯಿಂದ ವೈಟ್ ವಾಷ್ ಮುಖಭಂಗ ಅನುಭವಿಸಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಆಂಗ್ಲ ವನಿತೆಯರು, ಆರಂಭಿಕ ಆಟಗಾರ್ತಿ ಡೇನಿಯಲ್ ವ್ಯಾಟ್ 24, ಟಮ್ಮಿ ಬ್ಯೂಮಾಂಟ್ 29, ಆಮಿ ಎಲೆನ್ ಜೋನ್ಸ್ 26 ರನ್ ಬೆಂಬಲದೊಂದಿಗೆ 20 ಓವರ್‌ಗೆ 6 ವಿಕೆಟ್ ಕಳೆದು 119 ರನ್ ಬಾರಿಸಿದರು. ಭಾರತದ ಅಂಜು ಪಾಟಿಲ್ ಮತ್ತು ಹರ್ಲೀನ್ ಡಿಯೋಲ್ ತಲಾ 2 ವಿಕೆಟ್ ಪಡೆದು ಎದುರಾಳಿಯನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು.
120 ರನ್ ಗುರಿ ಬೆನ್ನತ್ತಿದ ಭಾರತದ ವನಿತೆಯರು ನಾಯಕ ಸ್ಮೃತಿ ಮಂಧಾನ ಅರ್ಧಶತಕ (58), ಮಿಥಾಲಿ ರಾಜ್ ಅಜೇಯ 30 ರನ್ ಹೊರತಾಗಿಯೂ 20 ಓವರ್‌ಗೆ 6 ವಿಕೆಟ್ ಕಳೆದು 118 ರನ್ ಪೇರಿಸಲಷ್ಟೇ ಶಕ್ತವಾದರು. ಇಂಗ್ಲೆಂಡ್ ನ ಕೇಟ್ ಕ್ರಾಸ್‌ಗೆ ಪಂದ್ಯಶ್ರೇಷ್ಠೆ, ಡೇನಿಯಲ್ ವ್ಯಾಟ್‌ಗೆ ಸರಣಿ ಶ್ರೇಷ್ಠೆ ಪ್ರಶಸ್ತಿ ಲಭಿಸಿತು.