
ಮಹಿಳಾ ವಿಶ್ವಕಪ್ 2022ಕ್ಕೆ ದಿನಗಣನೆ ಆರಂಭವಾಗಿದೆ. ಆದರೆ ಈ ಬಾರಿಯ ಮಹಿಳಾ ವಿಶ್ವಕಪ್ ನಿಗದಿಯಾಗಿರುವ ನ್ಯೂಜಿಲೆಂಡ್‌ನಲ್ಲಿ ಕೊರೊನಾವೈರಸ್‌ನ ಒಮೈಕ್ರಾನ್ ವೈರಸ್ ಅಬ್ಬರ ಹೆಚ್ಚಾಗಿದೆ. ಹೀಗಾಗಿ ಮಹಿಳಾ ವಿಶ್ವಕಪ್ ನಿಗದಿತ ದಿನಾಂಕದಂದು ನಡೆಯುವ ಬಗ್ಗೆ ಅನುಮಾನಗಳು ಮೂಡಿತ್ತು. ಆದರೆ ಈ ಅನುಮಾನಗಳಿಗೆ ಆಯೋಜಕರು ಸ್ಪಷ್ಟನೆಯನ್ನು ನೀಡಿದೆ. ಒಮೈಕ್ರಾನ್ ರೂಪಾಂತರಿಯ ಮಧ್ಯೆಯೂ ನಿಗದಿತ ದಿನಾಂಕದಂದೇ ಮಹಿಳಾ ವಿಶ್ವಕಪ್ ಆಯೋಜನೆಯಾಗಲಿದೆ ಎಂದು ಅಧಿಕೃತ ಮಾಹಿತಿ ಲಭ್ಯವಾಗಿದೆ.
ಮಹಿಳಾ ವಿಶ್ವಕಪ್ ಟೂರ್ನಿ ಮಾರ್ಚ್ 4 ರಂದು ಪ್ರಾರಂಭವಾಗಲಿದ್ದು ಮತ್ತು ಆರು ವಿವಿಧ ತಾಣಗಳಲ್ಲಿ ಆಯೋಜನೆಯಾಗಲಿದೆ. ರಾಯ್ಟರ್ಸ್ ವರದಿಯ ಪ್ರಕಾರ ನ್ಯೂಜಿಲೆಂಡ್ ಸರ್ಕಾರ ಕೊರೊನಾವೈರಸ್‌ನ ಕಾರಣದಿಂದಾಗಿ ಹೊಸ ನಿರ್ಬಂಧಗಳನ್ನು ರೂಪಿಸಿದೆ. ಆದರೆ ಈ ನಿಯಮಗಳು ವಿಶ್ವಕಪ್ ಟೂರ್ನಮೆಂಟ್‌ನ ವೇಳಾಪಟ್ಟಿಯ ಮೇಲೆ ಪರಿಣಾಮ ಬೀರಲಾರದು" ಎಂದಿದೆ.
"ನಾವು ಕಳೆದ 12 ತಿಂಗಳುಗಳಲ್ಲಿ ಸಾಕಷ್ಟು ಪರ್ಯಾಯ ಯೋಜನೆಗಳನ್ನು ನೋಡಿದ್ದೇವೆ. ಆದರೆ ಈಗಾಗಲೇ ನಿರ್ಧರಿಸಿರುವ ಆರು ತಾಣಗಳಲ್ಲಿಯೇ ವೇಳಾಪಟ್ಟಿಯನ್ನು ಉಳಿಸಿಕೊಳ್ಳುವುದು ಈಗಿನ ಯೋಜನೆಯಾಗಿದೆ. ಈ ಆರು ತಾಣಗಳು ಸಾಕಷ್ಟು ಕಡಿಮೆ ಪ್ರಯಾಣದ ವೇಳಾಪಟ್ಟಿಯಾಗಿದೆ"ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಂಡ್ರಿಯಾ ನೆಲ್ಸನ್ ವರ್ಚುವಲ್ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ.
ಪ್ರೇಕ್ಷಕರ ಪಾಲ್ಗೊಳ್ಳುವಿಕೆ ಬಗ್ಗೆ ಇನ್ನೂ ನಿರ್ಧಾರವಿಲ್ಲ: ಇನ್ನು ವಿಶ್ವಕಪ್ ಆಯೋಜನೆಯ ಬಗ್ಗೆ ಆಯೋಜಕರು ಈಗಾಗಲೇ ನಿರ್ಧಾರವನ್ನು ಕೈಗೊಳ್ಳಲು ಯಶಸ್ವಿಯಾಗಿದ್ದಾರೆ. ಆದರೆ ಪಂದ್ಯದ ಸಂದರ್ಭದಲ್ಲಿ ಪ್ರೇಕ್ಷಕರಿಗೆ ಅವಕಾಶ ನೀಡುವ ಬಗ್ಗೆ ಇನ್ನೂ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ. ಕಡಿಮೆ ಪ್ರಮಾಣದಲ್ಲಿ ಪ್ರೇಕ್ಷಕರಿಗೆ ಅವಕಾಶ ನೀಡುವ ಬಗ್ಗೆಯೂ ಮಾಹಿತಿಗಳು ಲಭ್ಯವಾಗಿಲ್ಲ. ಜಗತ್ತಿನಲ್ಲಿ ನಡೆಯುತ್ತಿರುವ ಬಹುತೇಕ ಕ್ರೀಡಾ ಟೂರ್ನಿಗಳು ಸದ್ಯ ಶೇ. 50 ರಷ್ಟು ಪ್ರೇಕ್ಷಕರ ಸಮ್ಮುಖದಲ್ಲಿ ನಡೆಯುತ್ತಿದೆ.
"ನಾವು ಈ ಕ್ರೀಡಾಕೂಟವನ್ನು ಆಯೋಜಿಸಲು ಮುಂದಾದಾಗ ಮಹಿಳಾ ಕ್ರೀಡೆಯ ಜಾಗತಿಕ ಬೆಳವಣಿಗೆಯನ್ನು ಪ್ರದರ್ಶಿಸುವುದು ಮತ್ತು ನ್ಯೂಜಿಲೆಂಡ್‌ನಲ್ಲಿ ಮತ್ತು ಪ್ರಪಂಚದಾದ್ಯಂತ ವಿಶ್ವದ ಅತ್ಯುತ್ತಮ ಕ್ರೀಡಾಪಟುಗಳ ಜೊತೆಗೆ ಜನರನ್ನು ಪ್ರೇರೇಪಿಸುವುದು ನಮ್ಮ ಪ್ರಮುಖ ಆದ್ಯತೆಯಾಗಿತ್ತು. ಕ್ರೀಡಾಂಗಣದೊಳಗೆ ಪ್ರೇಕ್ಷಕರನ್ನು ನಿರ್ಭಂಧಿಸಿದರೆ ಕೂಡ ಆ ನಿಟ್ಟಿನಲ್ಲಿ ನಾವು ಮತ್ತಷ್ಟು ಪ್ರಯತ್ನಗಳನ್ನು ಮಾಡಲಿದ್ದೇವೆ" ಎಂದು ಆಂಡ್ರಿಯಾ ನೆಲ್ಸನ್ ಪ್ರತಿಕ್ರಿಯೆ ನೀಡಿದ್ದಾರೆ.