2024ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿ ಬಾಂಗ್ಲಾದೇಶದಿಂದ ಯುಎಇ ಗೆ ಸ್ಥಳಾಂತರಗೊಂಡಿದೆ. ಬಾಂಗ್ಲಾದೇಶದಲ್ಲಿ ಮೀಸಲಾತಿ ಹಿಂಸಾಚಾರದಿಂದಾಗಿ ಐಸಿಸಿ ಈ ನಿರ್ಧಾರವನ್ನು ತೆಗೆದುಕೊಂಡಿತ್ತು. ಇದೀಗ ಯುಎಇಯಲ್ಲಿ ವಿಶ್ವಕಪ್ ಸಿದ್ಧತೆಗಳು ಬರದಿಂದ ಸಾಗಿವೆ.
ಮುಂದಿನ ತಿಂಗಳು ಅಕ್ಟೋಬರ್‌ನಲ್ಲಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿ ಆರಂಭವಾಗಲಿದೆ. ಅಕ್ಟೋಬರ್ 4 ರಂದು ನ್ಯೂಜಿಲೆಂಡ್ ವಿರುದ್ಧದ ಭಾರತ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಇದರ ನಂತರ ಅಕ್ಟೋಬರ್ 6 ರಂದು ಸಾಂಪ್ರಾದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.

ಕ್ರಿಕೆಟ್ ಪ್ರೇಮಿಗಳು ಟೂರ್ನಿಯ ಆರಂಭಕ್ಕಾಗಿ ಕಾತರದಿಂದ ಕಾಯುತ್ತಿದ್ದು, ಭಾರತ ಮಹಿಳಾ ತಂಡ ವಿಶ್ವ ಚಾಂಪಿಯನ್ ಆಗುವ ತನ್ನ ಕನಸನ್ನು ನನಸಾಗಿಸಲು ತೀವ್ರ ಪ್ರಯತ್ನ ನಡೆಸುತ್ತಿದೆ. ಕಳೆದ ಕೆಲವು ವರ್ಷಗಳಿಂದ ಭಾರತ ವನಿತೆಯರ ತಂಡ ಉತ್ತಮ ಪ್ರದರ್ಶನ ನೀಡುವ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಸಾಧಿಸಿದೆ. ಆದರೆ ಐಸಿಸಿ ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆಲ್ಲುವ ಕನಸು ಇನ್ನೂ ಈಡೇರಿಲ್ಲ.
ಭಾರತ ವನಿತೆಯರು ಈ ಬಾರಿ ಟಿ20 ವಿಶ್ವಕಪ್ ಗೆಲ್ಲುವ ನಿರೀಕ್ಷೆಯಿಟ್ಟುಕೊಂಡಿದ್ದಾರೆ. ಆದ್ದರಿಂದ ಅವರ ಮೇಲಿನ ಒತ್ತಡವು ಹೆಚ್ಚಾಗುವ ಸಾಧ್ಯತೆಯಿದೆ. ಆಟಗಾರ್ತಿಯರ ಪ್ರದರ್ಶನವಾಗಲಿ ಅಥವಾ ಅಭಿಮಾನಿಗಳ ಬೆಂಬಲವಾಗಲಿ, ಮಹಿಳಾ ಕ್ರಿಕೆಟ್‌ನಲ್ಲಿ ಎಲ್ಲವೂ ನಿಧಾನವಾಗಿ ಬದಲಾಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ವನಿತೆಯರು ವಿಶ್ವ ಚಾಂಪಿಯನ್ ಆಗುವ ಕನಸನ್ನು ನನಸು ಮಾಡಿಕೊಳ್ಳುವತ್ತ ಹೆಜ್ಜೆ ಹಾಕಿದ್ದಾರೆ.
ಟಿ20 ವಿಶ್ವಕಪ್ ಗೆಲ್ಲುವ ರೇಸ್‌ನಲ್ಲಿ ಹರ್ಮನ್‌ಪ್ರೀತ್ ಕೌರ್ ಪಡೆಗೆ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಪ್ರಬಲ ಸ್ಪರ್ಧಿಗಳಾಗಿವೆ. ಅನುಭವಿ ಆಟಗಾರ್ತಿಯರಿಂದ ಕಂಗೊಳಿಸುತ್ತಿರುವ ಭಾರತ ತಂಡವೂ ರೇಸ್‌ನಲ್ಲಿ ಮುಂಚೂಣಿಯಲ್ಲಿದೆ. ಆದರೆ, ಭಾರತಕ್ಕೆ ಯಶಸ್ಸು ಬೇಕಾದರೆ ತಂಡದ ಎಲ್ಲ ಆಟಗಾರರು ಬಲಿಷ್ಠ ಪ್ರದರ್ಶನ ತೋರಬೇಕು.
2024ರ ಮಹಿಳಾ ಟಿ20 ವಿಶ್ವಕಪ್‌ಗಾಗಿ 15 ಸದಸ್ಯರ ಭಾರತ ವನಿತೆಯರ ತಂಡವನ್ನು ಬಿಸಿಸಿಐ ಪ್ರಕಟಿಸಿದೆ.
ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಜೆಮಿಮಾ ರಾಡ್ರಿಗಸ್, ರಿಚಾ ಘೋಷ್, ಯಾಸ್ತಿಕಾ ಭಾಟಿಯಾ, ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್ ಠಾಕೂರ್, ದಯಾಳನ್ ಹೇಮಲತಾ, ಆಶಾ ಸೋಭಾನ, ರಾಧಾ ಯಾದವ್, ಎಸ್., ಸಜನಾ ಸಜೀವನ್, ಶ್ರೇಯಾಂಕ ಪಾಟೀಲ್