
ಐಪಿಎಲ್ 14ನೇ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಪ್ಲೇಆಫ್‌ಗೆ ಪ್ರವೇಶ ಪಡೆದಿದ್ದ ಆರ್‌ಸಿಬಿ ಈ ಹಂತದಲ್ಲಿ ಎಡವಿ ತನ್ನ ಹೋರಾಟವನ್ನು ಅಂತ್ಯಗೊಳಿಸಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಆರ್‌ಸಿಬಿ ತೀವ್ರ ಪೈಪೋಟಿ ನೀಡಿದ ಹೊರತಾಗಿಯೂ ಸೋಲು ಕಾಣುವಂತಾಯಿತು. ಈ ಸೋಲು ಆಟಗಾರರು ಹಾಗೂ ಆರ್‌ಸಿಬಿ ಅಭಿಮಾನಿಗಳನ್ನು ಸಾಕಷ್ಟು ನಿರಾಸೆಗೆ ದೂಡಿದೆ.
ಆರ್‌ಸಿಬಿ ತಂಡದ ಈ ಆಘಾತಕಾರಿ ಸೋಲಿನ ನಂತರ ಆರ್‌ಸಿಬಿ ತಂಡದ ಆಟಗಾರರು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ನಿಂದನೆಗೆ ಗುರಿಯಾಗಿದ್ದಾರೆ. ಅದರಲ್ಲೂ ಆರ್‌ಸಿಬಿ ತಮಡದ ಆಲ್‌ರೌಂಡರ್ ಡೇನಿಯಲ್ ಕ್ರಿಶ್ಚಿಯನ್ ಈ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ ಕಾರಣಕ್ಕೆ ಭಾರೀ ಪ್ರಮಾಣದಲ್ಲಿ ನಿಂದನೆಗಳು ವ್ಯಕ್ತವಾಗಿದೆ. ಈ ವರ್ತನೆಯ ಬಗ್ಗೆ ಆರ್‌ಸಿಬಿ ಆಟಗಾರರಾದ ಮ್ಯಾಕ್ಸ್‌ವೆಲ್ ಹಾಗೂ ಸ್ವತಃ ಡೇನಿಯಲ್ ಕ್ರಿಶ್ಚಿಯನ್ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದು ಆಘಾತ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇಂತಾ ಕಠಿಣ ಸಂದರ್ಭದಲ್ಲಿಯೂ ಬೆಂಬಲವನ್ನು ವ್ಯಕ್ತಪಡಿಸಿದ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಈ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿರುವ ನಿಂದನೆಗಳ ವಿಚಾರವಾಗಿ ಆರ್‌ಸಿಬಿ ಫ್ರಾಂಚೈಸಿ ಪ್ರತಿಕ್ರಿಯೆ ನೀಡಿದ್ದು ಆಟಗಾರನ ಪರವಾಗಿ ನಿಂತಿದೆ. ಆಟಗಾರ ಹಾಗೂ ಆತನ ಆಪ್ತರ ಬಗ್ಗೆ ಇಂತಾ ನಿಂದನೆಗಳನ್ನು ನಿಲ್ಲಿಸಲು ಸಾಧ್ಯವಿಲ್ಲ. ಆಟಗಾರನ ಜೊತೆಗೆ ಫ್ರಾಂಚೈಸಿ ನೂರು ಪ್ರತಿಶತ ಬೆಂಬಲವಾಗಿ ನಿಲ್ಲಲಿದೆ ಎಂದಿದ್ದಾರೆ.
"ಡೇನಿಯನ್ ಕ್ರಿಶ್ಚಿಯನ್ ನಾವು ನಿಮ್ಮೊಂದಿಗೆ 100% ಇದ್ದೇವೆ. ಆಟಗಾರರು ಹಾಗೂ ಅವರ ಕುಟುಂಬ ಮತ್ತು ಪ್ರೀತಿಪಾತ್ರರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಿಂದಿಸುವುದನ್ನು ಯಾವ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ" ಎಂದು ಆರ್‌ಸಿಬಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದೆ.
"ನಾವೆಲ್ಲಾ ತುಂಬಾ ಪ್ರೀತಿಸುವ ಆಟವಾಗಿರುವ ಕ್ರಿಕೆಟ್‌ನಲ್ಲಿ ಸೋಲು ಗೆಲುವು ಸಾಮಾನ್ಯ. ನಮ್ಮ ಆಟಗಾರರು ಯಾವುದೇ ದಿನದಲ್ಲಾದರೂ ತಮ್ಮ ಸಂಪೂರ್ಣ ಪ್ರದರ್ಶನ ನೀಡಲು ಬಯಸುತ್ತಾರೆ. ಆಟಗಾರರೆಲ್ಲರೂ ತಂಡದ ಗೆಲುವಿಗಾಗಿ ತಮ್ಮ ಎಲ್ಲಾ ಶ್ರಮವನ್ನು ಕೂಡ ನೀಡಿದ್ದಾರೆ" ಎಂದು ಆರ್‌ಸಿಬಿ ಟ್ವಿಟ್ ಮಾಡಿದೆ.