ಜುಲೈ 13 ಶನಿವಾರ, 2007ರ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ನಲ್ಲಿ ಭಾರತದ ಗೆಲುವಿನ ಹೀರೋ ಆಗಿದ್ದ ಯುವರಾಜ್ ಸಿಂಗ್ ಮತ್ತೊಮ್ಮೆ ಕ್ರಿಕೆಟ್ ಮೈದಾನದಲ್ಲಿ ತಮ್ಮ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ.
ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್‌ನ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಯುವರಾಜ್ ಸಿಂಗ್ ಅಬ್ಬರಿಸಿದ್ದಾರೆ. ಪರಿಣಾಮ ಟೀಮ್ ಇಂಡಿಯಾ ಎದುರು ಆಸ್ಟ್ರೇಲಿಯಾ ತಂಡ ಸೋಲನುಭವಿಸಿತ್ತು.

ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ ಯುವರಾಜ್ ಸಿಂಗ್ 210.71 ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ್ದಾರೆ. 28 ಎಸೆತಗಳಲ್ಲಿ 59 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ ಯುವರಾಜ್ ಸಿಂಗ್ ಆರ್ಕಷಕ 5 ಸಿಕ್ಸರ್ ಮತ್ತು 4 ಬೌಂಡರಿಗಳನ್ನು ಬಾರಿಸಿದರು.
ಮೊದಲು ಬ್ಯಾಟ್ ಮಾಡಿದ ಭಾರತ ಚಾಂಪಿಯನ್ಸ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 254 ರನ್ ಗಳಿಸಿತು. ಭಾರತ ಚಾಂಪಿಯನ್ಸ್ ಪರ ರಾಬಿನ್ ಉತ್ತಪ್ಪ (35 ಎಸೆತಗಳಲ್ಲಿ 65 ರನ್), ಯುವರಾಜ್ ಸಿಂಗ್ (28 ಎಸೆತಗಳಲ್ಲಿ 59 ರನ್), ಯೂಸುಫ್ ಪಠಾಣ್ (23 ಎಸೆತಗಳಲ್ಲಿ 51 ರನ್) ಮತ್ತು ಇರ್ಫಾನ್ ಪಠಾಣ್ (19 ಎಸೆತಗಳಲ್ಲಿ 50 ರನ್) ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದರು.
ಭಾರತ ನೀಡಿದ 255 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ಚಾಂಪಿಯನ್ಸ್ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಲಷ್ಟೇ ಶಕ್ತವಾಯಿತು. ಇತ್ತ ಭರ್ಜರಿ ಜಯ ಸಾಧಿಸಿದ ಭಾರತ ಫೈನಲ್‌ಗೆ ಎಂಟ್ರಿ ಕೊಟ್ಟಿದೆ. ಫೈನಲ್‌ನಲ್ಲಿ ಸಾಂಪ್ರಾದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಭಾರತ ಎದುರಿಸಲಿದೆ.
ಯುವರಾಜ್ ಸಿಂಗ್ ಅವರು ಹಲವು ಬಾರಿ ಆಸ್ಟ್ರೇಲಿಯಾ ವಿರುದ್ಧ ಬೊಂಬಾಟ್ ಬ್ಯಾಟಿಂಗ್ ಮಾಡಿದ್ದಾರೆ. 2007ರ ಚೊಚ್ಚಲ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಯುವರಾಜ್ ಸಿಂಗ್ 30 ಎಸೆತಗಳಲ್ಲಿ 70 ರನ್ ಗಳಿಸಿದ್ದರು.
ಇದಲ್ಲದೇ, ಯುವರಾಜ್ ಸಿಂಗ್ 2011ರ ಏಕದಿನ ವಿಶ್ವಕಪ್‌ನ ಕ್ವಾರ್ಟರ್‌ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 65 ಎಸೆತಗಳಲ್ಲಿ 57 ರನ್‌ಗಳ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ್ದರು. ಯುವರಾಜ್ ಸಿಂಗ್ ಅಬ್ಬರದಿಂದಾಗಿ ಆಸ್ಟ್ರೇಲಿಯಾ ಈ ಎರಡೂ ಪ್ರತಿಷ್ಠಿತ ಟೂರ್ನಿಗಳಲ್ಲಿ ಸೋಲನ್ನು ಎದುರಿಸಬೇಕಾಯಿತು.
ಯುವರಾಜ್ ಸಿಂಗ್ ಟೀಮ್ ಇಂಡಿಯಾದಲ್ಲಿ ಆಲ್ ರೌಂಡರ್ ಪಾತ್ರವನ್ನು ನಿರ್ವಹಿಸುತ್ತಿದ್ದರು. ಯುವಿ ಬ್ಯಾಟಿಂಗ್ ಜೊತೆಗೆ ಎಡಗೈ ಸ್ಪಿನ್ ಬೌಲ್ ಮಾಡುತ್ತಿದ್ದರು. ಇದರಿಂದಾಗಿ 2007ರ ಟಿ-20 ವಿಶ್ವಕಪ್ ಮತ್ತು 2011ರ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಸಾಕಷ್ಟು ಲಾಭ ಪಡೆದಿತ್ತು.
ಯುವರಾಜ್ ಸಿಂಗ್ 304 ಏಕದಿನ ಪಂದ್ಯಗಳಲ್ಲಿ 36.55 ಸರಾಸರಿಯಲ್ಲಿ 8701 ರನ್ ಗಳಿಸಿದ್ದಾರೆ. ಇದರಲ್ಲಿ 14 ಶತಕಗಳು ಮತ್ತು 52 ಅರ್ಧ ಶತಕಗಳು ಸೇರಿವೆ. ಯುವಿ ಅವರ ಅತ್ಯುತ್ತಮ ಸ್ಕೋರ್ 150 ರನ್ ಆಗಿದೆ.
ಯುವರಾಜ್ ಸಿಂಗ್ ಏಕದಿನ ಕ್ರಿಕೆಟ್‌ನಲ್ಲಿ 111 ವಿಕೆಟ್‌ಗಳನ್ನು ಪಡೆದಿದ್ದಾರೆ. ಬೌಲಿಂಗ್‌ನಲ್ಲಿ ಯುವಿ ಅತ್ಯುತ್ತಮ ಪ್ರದರ್ಶನವೆಂದರೆ 31 ರನ್‌ಗಳಿಗೆ 5 ವಿಕೆಟ್ ಉರುಳಿಸಿರುವುದು.
ಇನ್ನು 40 ಟೆಸ್ಟ್ ಪಂದ್ಯಗಳಿಂದ 33.92 ಸರಾಸರಿಯಲ್ಲಿ 1900 ರನ್ ಗಳಿಸಿರುವ ಯುವಿ 3 ಶತಕಗಳು ಮತ್ತು 11 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಅತ್ಯುತ್ತಮ ಸ್ಕೋರ್ 169 ರನ್ ಆಗಿದೆ. ಟೆಸ್ಟ್‌ನಲ್ಲಿ 9 ವಿಕೆಟ್‌ಗಳನ್ನು ಪಡೆದಿದ್ದು, 9 ರನ್‌ಗಳಿಗೆ 2 ವಿಕೆಟ್ ಅತ್ಯುತ್ತಮ ಪ್ರದರ್ಶನವಾಗಿದೆ.
ಅಲ್ಲದೆ ಟಿ20 ಕ್ರಿಕೆಟ್‌ನಲ್ಲಿ ಇತಿಹಾಸ ನಿರ್ಮಿಸಿರುವ ಯುವಿ 58 ಪಂದ್ಯಗಳನ್ನು ಆಡಿದ್ದಾರೆ. 28.02 ಸರಾಸರಿಯಲ್ಲಿ 8 ಅರ್ಧಶತಕಗಳನ್ನು ಒಳಗೊಂಡಂತೆ 1177 ರನ್ ಗಳಿಸಿದ್ದಾರೆ. ಅಜೇಯ 77 ರನ್ ಯುವಿಯ ಅತ್ಯುತ್ತಮ ಗರಿಷ್ಠ ಸ್ಕೋರ್ ಆಗಿದೆ.
ಯುವರಾಜ್ ಸಿಂಗ್ ಟಿ-20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 28 ವಿಕೆಟ್‌ಗಳನ್ನು ಪಡೆದಿದ್ದು, ಅತ್ಯುತ್ತಮ ಪ್ರದರ್ಶನವೆಂದರೆ 17 ರನ್‌ಗಳಿಗೆ 3 ವಿಕೆಟ್.