
ಸೌಥಂಪ್ಟನ್, ಜೂನ್ 21: ಕಳೆದ ಹತ್ತು ದಿನಗಳಲ್ಲಿ ಮೊದಲ ಬಾರಿ ಇಂಗ್ಲೆಂಡ್‌ನಲ್ಲಿ ಸೂರ್ಯ ಹೆಚ್ಚು ಪ್ರಕಾಶಮಾನವಾಗಿ ಹೊಳೆಯಲಾರಂಭಿಸಿದ್ದು, ಕ್ರಿಕೆಟ್ ಆಟಕ್ಕೆ ಹೇಳಿಮಾಡಿಸಿದ ವಾತಾವರಣ ನಿರ್ಮಾಣವಾಗಿದೆ.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ
ಇದಕ್ಕೂ ಮೊದಲು ಮಳೆಯಿಂದಾಗಿ ಕ್ರಿಕೆಟ್ ಪ್ರಿಯರ ವಿಶ್ವಕಪ್ ಆಸಕ್ತಿಗೆ ತಣ್ಣೀರೆರಚಿದಂತಾಗಿತ್ತು. ಅಂದಹಾಗೆ ಶುಕ್ರವಾರ ಕ್ರಿಕೆಟ್ ಆಟಕ್ಕೆ ಎಲ್ಲವೂ ಸೂಕ್ತವಾಗಿದ್ದ ದಿನ. ಆದರೂ ಇಲ್ಲಿನ ರೋಸ್ ಬೌಲ್ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿರುವ ಭಾರತ ಮತ್ತು ಅಫಘಾನಿಸ್ತಾನ ನಡುವಣ ಪಂದ್ಯಕ್ಕೆ ವಾತಾವರಣ ಇದೇ ಇರೀತಿ ಇರುವುದೇ ಎಂಬುದನ್ನು ಕಾದು ನೋಡಬೇಕಿದೆ.
ಅಂದಹಾಗೆ ಪಂದ್ಯಕ್ಕೆ ಮುನ್ನಾದಿನ ತಂಡವೊಂದು ತನ್ನ ಅಭ್ಯಾಸವನ್ನು ಮುಂದೂಡುವುದು ಸಾಮಾನ್ಯ ಸಂಗತಿಯಲ್ಲ. ಅಂದಹಾಗೆ ಇದು ತೀರಾ ವಿಚಿತ್ರ ಸಂಗತಿಯೂ ಅಲ್ಲ. ಭಾನುವಾರ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಜಯ ದಾಖಲಿಸಿ ಸೌಥಂಪ್ಟನ್‌ಗೆ ಬಂದಿಳಿದ ಟೀಮ್ ಇಂಡಿಯಾ ಸತತ ಎರಡು ದಿನಗಳ ಕಾಲ ನೆಟ್ಸ್‌ನಲ್ಲಿ ಬೆವರಿಳಿಸಿತ್ತು. ಆದರೆ, ಅಫಘಾನಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನಾದಿನವಾದ ಶುಕ್ರವಾರ ವಿಶ್ರಾಂತಿ ಮೊರೆಹೋಗಿ, ಕ್ರಿಕೆಟ್ ಅಲ್ಲದ ಚಟುವಟಿಕೆಗಳಲ್ಲಿ ಪಾಲ್ಗೊಂಡಿತ್ತು.
ಇದರರ್ಥ ಕ್ರಿಕೆಟ್ ಕೂಸು ಅಫಘಾನಿಸ್ತಾನ ವಿರುದ್ಧದ ಪಂದ್ಯವಾದ ಕಾರಣ ಅಭ್ಯಾಸವನ್ನು ಕೈಬಿಟ್ಟು ಭಾರತ ತಂಡ ಅತಿಯಾದ ಆತ್ಮವಿಶ್ವಾಸ ಪ್ರದಶರ್ಶಿಸಿದೆ ಅಥವಾ ಎದುರಾಳಿಯನ್ನು ಅಗೌರವಿಸಿದೆ ಎಂದಲ್ಲ. ಈ ರೀತಿಯ ದೊಡ್ಡ ಟೂರ್ನಿಗಳಲ್ಲಿ ಆಟಗಾರರು ಬಹು ಸಮಯವನ್ನು ಪ್ರಯಾಣದಲ್ಲೇ ಕಳೆದಿರುತ್ತಾರೆ. ಹೀಗಾಗಿ ಅಭ್ಯಾಸ ಮತ್ತು ವಿಶ್ರಾಂತಿಯನ್ನು ಸರಿದೂಗುವಂತ ಪಕ್ಕಾ ಫಾರ್ಮುಲಾ ಕಂಡುಕೊಳ್ಳುವ ಅಗತ್ಯವಿರುತ್ತದೆ.
ಭಾರತ ತಂಡ ಕಳೆದ ಕೆಲ ವರ್ಷಗಳಿಂದ ಅಭ್ಯಾಸ ಮತ್ತು ವಿಶ್ರಾಂತಿ ನಡುವಣ ಸಮತೋಲನವನ್ನು ಸರಿಯಾಗಿ ಕಾಯ್ದುಕೊಂಡು ಬಂದಿದೆ. ಈ ಮೂಲಕ ಪಂದ್ಯದಲ್ಲಿ ಕಣಕ್ಕಿಳಿಯುವ ಸಂದರ್ಭದಲ್ಲಿ ಆಟಗಾರರು ಮಾನಸಿಕವಾಗಿ ಮತ್ತು ದೈಹಿಕವಾಗಿ ದಣಿವು ಎದುರಿಸದಂತೆ ನೋಡಿಕೊಂಡಿದೆ.
ಜೂನ್ 9ರಂದು ಆಸ್ಟ್ರೇಲಿಯಾ ವಿರುದ್ಧ ಜಯ ದಾಖಲಿಸಿದ ಬಳಿಕ ಭಾರತ ತಂಡ ಈವರೆಗೆ ಒಂದು ಪಂದ್ಯವನ್ನಷ್ಟೇ ಆಡಿದ್ದು, ಮಳೆ ಅಡಚಣೆಗೆ ಒಳಗಾದ ಬಹು ನಿರೀಕ್ಷಿತ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಸುಲಭ ಜಯ ದಾಖಲಿಸಿತ್ತು. ಇದಕ್ಕೂ ಮುನ್ನ ನಾಟಿಂಗ್‌ಹ್ಯಾಮ್‌ನಲ್ಲಿ ಟಾಸ್ ಕೂಡ ಸಾಧ್ಯವಾಗದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ವೇಳೆ ಎಡೆ ಬಿಡದೆ ಸುರಿದ ಧಾರಾಕಾರ ಮಳೆಯನ್ನೂ ಟೀಮ್ ಇಂಡಿಯಾ ವೀಕ್ಷಿಸಿತ್ತು.
ಕಳೆದ 12 ದಿನಗಳಲ್ಲಿ ಭಾರತ ತಂಡ ಹೆಚ್ಚು ಸಮಯ ಕೋಣೆಯೊಳಗೇ ಕಳೆಯುವಂತಾಗಿದೆ. ಮಳೆಯ ಕಾರಣ ಪೂರ್ಣ ಪ್ರಮಾಣದ ಅಭ್ಯಾಸ ನಡೆಸಲು ತಂಡಕ್ಕೆ ಸಾಧ್ಯವಾಗಲಿಲ್ಲ. ಆದರೂ, ಸಿಕ್ಕ ಅಲ್ಪ ಅವಕಾಶಗಳನ್ನು ಕಿಂಚಿತ್ತೂ ವ್ಯಯ ಮಾಡದೆ ಸಂಪೂರ್ಣವಾಗಿ ಬಳಸಿಕೊಂಡಿರುವ ವಿರಾಟ್ ಕೊಹ್ಲಿ ಪಡೆ ಕಠಿಣ ಅಭ್ಯಾಸವನ್ನು ನಡೆಸಿ ಬೆವರು ಹರಿಸಿದೆ.
ಅನಿಲ್ ಕುಂಬ್ಳೆ 2007ರಲ್ಲಿ ಒಂದು ಮಾತು ಹೇಳಿದ್ದರು. ಹೆಚ್ಚುವರಿ ಅಭ್ಯಾಸದಿಂದ ಯಾವುದೇ ತಂಡಕ್ಕೆ ತಕ್ಷಣಕ್ಕೆ ಲಾಭ ಸಿಗುವುದಿಲ್ಲ ಎಂದು. ಅಂದು ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಕೇವಲ 4 ದಿನಗಳಲ್ಲಿ ಸೋತಿತ್ತು. ಈ ಸಂದರ್ಭದಲ್ಲಿ ಪಂದ್ಯದ 5ನೇ ದಿನದಂದು ತಂಡ ಖಡ್ಡಾಯವಾಗಿ ಪಾಲ್ಗೊಳ್ಳಬೇಕಿದ್ದ ನೆಟ್ಸ್ ಅಭ್ಯಾಸವನ್ನು ಸಂಪೂರ್ಣವಾಗಿ ಕಿತ್ತೊಗೆಯುವಂತೆ ಅಂದಿನ ನಾಯಕ ಕುಂಬ್ಳೆ ಆಜ್ಞಾಪಿಸಿದ್ದರು. ಅಷ್ಟೇ ಅಲ್ಲದೆ ಈ ಸಂದರ್ಭದಲ್ಲಿ ಒಂದೆರಡು ದಿನಗಳ ಕಾಲ ಆಟಗಾರರೆಲ್ಲಾ ಕ್ರಿಕೆಟ್‌ನಿಂದ ಹೊರಬಂದು ತಮ್ಮ ಮನಸ್ಸನ್ನು ಹಗುರ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದ್ದರು. ಏಕೆಂದರೆ ತಂಡದ ಸೋಲಿಗೆ ಆಟಗಾರರಲ್ಲಿನ ಸಾಮರ್ಥ್ಯದ ಕೊರತೆ ಕಾರಣವಾಗಿರಲಿಲ್ಲ.
ಉನ್ನತ ಮಟ್ಟದ ಕ್ರಿಕೆಟ್ ಪಂದ್ಯಗಳನ್ನು ಕೇವಲ ಕ್ರಿಕೆಟ್ ತಂತ್ರಗಾರಿಕೆಯಿಂದ ಮಾತ್ರವೇ ಗೆಲ್ಲಲು ಸಾಧ್ಯವಿಲ್ಲ; ಇದನ್ನೇ ಅನಿಲ್ ಕುಂಬ್ಳೆ ಕೂಡ ಹೇಳಲು ಹೊರಟಿದ್ದರು.
ಅದು ಕುಂಬ್ಳೆ ಮತ್ತು ಗ್ಯಾರಿ ಕರ್ಸ್ಟನ್ ಅವರ ಕಾಲವದು. ಟೀಮ್ ಇಂಡಿಯಾದಲ್ಲಿ "ನಿರ್ಭಂದವಿಲ್ಲದ ಅಭ್ಯಾಸ" (ಆಪ್ಷನಲ್ ಪ್ರಾಕ್ಟೀಸ್) ಎಂಬ ಹೊಸ ಪದ್ದತಿಯನ್ನು ತರಲಾಗಿತ್ತು. ಈ ಹೊಸ ಪದ್ದತಿಯ ಅನುಸಾರ ಆಟಗಾರರಿಗೆ ನಿತ್ಯದ ತರಬೇತಿ ಚಟುವಟಿಕೆಗಳಿಂದ ಕೆಲವೊಮ್ಮೆ ವಿಶ್ರಾಂತಿ ತೆಗೆದುಕೊಳ್ಳುವ ಅನುಮತಿ ನೀಡಲಾಗಿತ್ತು.
ಆದರೂ, ವಿಶ್ರಾಂತಿ ಸಂದರ್ಭದಲ್ಲೂ ಅವರಿಗೆ ಮುಂದೆ ಎದುರಾಗುವ ಸವಾಲುಗಳಿಗೆ ಸಜ್ಜಾಗುವಂತೆ ಎಚ್ಚರಿಸಲಾಗುತ್ತಿತ್ತು. ಏಕೆಂದರೆ ಈ ರೀತಿಯ ಸ್ವಾತಂತ್ರ್ಯ ಸಿಕ್ಕಾಗ ಅಷ್ಟೇ ಪ್ರಮಾಣದ ಜವಾಬ್ದಾರಿಯನ್ನೂ ಹೊರಬೇಕಾಗುತ್ತದೆ. ಈ ಫಾರ್ಮುಲಾದಿಂದಲೇ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಭಾರತ ತಂಡದ ಬಹುತೇಕ ಆಟಗಾರರು ತಮ್ಮ ಪೂರ್ಣ ಪ್ರಮಾಣದ ಸಾಮರ್ಥ್ಯದೊಂದಿಗೆ ಆಟವಾಡಲು ಸಾಧ್ಯವಾಗಿದೆ. ಯಾವಾಗ ಅಭ್ಯಾಸ ಮಾಡಬೇಕು ಯಾವಾಗ ಬೇಡ ಎಂದು ಪದೇ ಪದೇ ಆಟಗಾರರಿಗೆ ಹೇಳುವ ಅಗತ್ಯವೂ ಈಗ ಇಲ್ಲವಾಗಿದೆ.
ಇದೀಗ ಟೀಮ್ ಇಂಡಿಯಾದಲ್ಲಿ ಈ ಪ್ರವೃತ್ತಿ ಮತ್ತೊಂದು ಹಂತಕ್ಕೆ ತಲುಪಿದೆ. ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ಕೋಚ್ ರವಿ ಶಾಸ್ತ್ರಿ ತಂಡಕ್ಕೆ ಬೇಕಿರುವ ಅಭ್ಯಾಸ ಮತ್ತು ವಿಶ್ರಾಂತಿಯ ಪಕ್ಕಾ ಫಾರ್ಮುಲಾ ಕಂಡುಕೊಂಡಿದ್ದಾರೆ. ಈ ಮೂಲಕ ಆಟಗಾರರನ್ನು ಅರ್ಥಮಾಡಿಕೊಳ್ಳುವುದು ಕೂಡ ಸುಲಭ ಸಾಧ್ಯವಾಗಿದ್ದು, ಮುಂದಿನ ಸವಾಲುಗಳನ್ನು ಎದುರಿಸಲು ಅವರು ಸಿದ್ಧರಾಗಿದ್ದಾರೆಯೇ ಎಂಬುದು ತಿಳಿದುಬಿಡುತ್ತದೆ.
ಎಲ್ಲಾ ಆಟಗಾರರು ಸುದೀರ್ಘಾವಧಿಯ ಐಪಿಎಲ್ ಟೂರ್ನಿಯಲ್ಲಿ 14 ಹೈವೋಲ್ಟೇಜ್ ಪಂದ್ಯಗಳನ್ನಾಡಿ, ಸಾಕಷ್ಟು ಪ್ರಯಾಣ ಬೆಳೆಸಿ ಹಾಗೂ ತಡರಾತ್ರಿಯವರೆಗೂ ನಿದ್ರೆ ತಡೆದು ವಿವಿಧ ಪ್ರಾಯೋಜಕ ಚಟುವಟಿಕೆಗಳಲ್ಲಿ ಪಾಲ್ಗೊಂಡು ದಣಿದಿದ್ದರು. ಹೀಗಾಗಿ ಆಟಗಾರರ ನಿರ್ವಹಣೆಗೆ ಅಗತ್ಯದ ವಿಶ್ರಾಂತಿ ಮತ್ತು ಪಂದ್ಯಕ್ಕೆ ತಕ್ಕ ಪೂರ್ವ ಸಿದ್ಧತೆಯ ನಡುವಣ ಸಮತೋಲನ ಅನಿವಾರ್ಯವಾಗಿತ್ತು.
ಅಂದಹಾಗೆ ವಿಶ್ವಕಪ್‌ನಂತಹ ದೊಡ್ಡ ಟೂರ್ನಿಗಳಲ್ಲಿ ಸಮಯ ಸಿಗುವುದು ಕಡಿಮೆ. ಆದರೆ, ಈ ಬಾರಿಯ ವೇಳಾಪಟ್ಟಿ ಅನುಸಾರ ಭಾರತಕ್ಕೆ ಹೆಚ್ಚು ವಿಶ್ರಾಂತಿ ಸಿಕ್ಕಿರುವುದು ಅದೃಷ್ಟವೇ ಸರಿ. ಇದರಿಂದಾಗಿ ಆಟಗಾರರಿಗೆ ದಣಿವಿನಿಂದ ಚೇತರಿಸಿಕೊಳ್ಳಲು ಸಾಧ್ಯವಾಗಿದೆ. ಜೊತೆಗೆ ನಾಲ್ಕು ಪಂದ್ಯಗಳಿಂದ 7 ಅಂಕಗಳನ್ನು ಗಳಿಸಿರುವುದು ತಂಡಕ್ಕೆ ಯಾವುದೇ ಆತಂಕವನ್ನೂ ತಂದೊಡ್ಡಿಲ್ಲ.
ಪಂದ್ಯವಾಗಲಿ ಅಥವಾ ಟೂರ್ನಿಗಳಾಗಲಿ ಕೇವಲ ಸಾಮರ್ಥ್ಯದಿಂದ ಮಾತ್ರವೇ ಗೆಲ್ಲಲು ಸಾಧ್ಯವಿಲ್ಲ. ಗೆಲುವಿಗೆ ಚಾಣಾಕ್ಷತೆಯೂ ಬೇಕು. ಟೀಮ್ ಇಂಡಿಯಾಗೆ ಇಂತಹ ಚಾಣಾಕ್ಷತೆಯ ಅನಿವಾರ್ಯತೆ ಇದೆ ಎಂದು ಈವರೆಗೆ ಎಲ್ಲಿಯೂ ಅನ್ನಿಸಿಲ್ಲ.