
ಲಂಡನ್, ಜೂನ್ 29: ಲಂಡನ್‌ನ ಲಾರ್ಡ್ಸ್ ಸ್ಟೇಡಿಯಂ ಶನಿವಾರ (ಜೂನ್ 29) ನಡೆದ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಪಂದ್ಯದಲ್ಲಿ ಕಾಂಗರೂ ಬಳಗ 86 ರನ್ ಜಯ ಗಳಿಸಿದೆ. ಮಿಚೆಲ್ ಸ್ಟಾರ್ಕ್ ಮಾರಕ ಬೌಲಿಂಗ್ ದಾಳಿ ಮತ್ತು ಉಸ್ಮಾನ್ ಖವಾಜಾ, ಅಲೆಕ್ಸ್ ಕ್ಯಾರಿ ಅರ್ಧಶತಕದ ಬೆಂಬಲದೊಂದಿಗೆ ಆಸೀಸ್ ಗೆಲುವನ್ನಾಚರಿಸಿತು.
ಆರಂಭಿಕ ಇನ್ನಿಂಗ್ಸ್ ಆಡಿದ ಆಸ್ಟ್ರೇಲಿಯಾ ಪ್ರಮುಖ ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡಿತು. ಆ್ಯನ್ ಫಿಂಚ್ 16, ಡೇವಿಡ್ ವಾರ್ನರ್ 8, ಸ್ಟೀವನ್ ಸ್ಮಿತ್ 5, ಮಾರ್ಕಸ್ ಸ್ಟೋಯ್ನಿಸ್ 21, ಗ್ಲೆನ್ ಮ್ಯಾಕ್ಸ್‌ವೆಲ್ 1, ಪ್ಯಾಟ್ ಕಮಿನ್ಸ್ 23 ರನ್ ಕೊಡುಗೆ ನೀಡಿದರು. ಆದರೆ ಆಸೀಸ್ ತಂಡವನ್ನು ರನ್ ಕುಸಿತದಿಂದ ಪಾರು ಮಾಡಿದ್ದು ಉಸ್ಮಾನ್ ಖವಾಜಾ ಮತ್ತು ಅಲೆಕ್ಸ್ ಕ್ಯಾರಿಯ ಅರ್ಧಶತಕದಾಟ.
ನ್ಯೂಜಿಲೆಂಡ್ vs ಆಸ್ಟ್ರೇಲಿಯಾ, ಜೂನ್ 29, ಸ್ಕೋರ್‌ಕಾರ್ಡ್
ಖವಾಜಾ 88, ಕ್ಯಾರಿ 71 ರನ್ ಸೇರಿಸಿದ್ದರಿಂದ ಆ್ಯರನ್ ಫಿಂಚ್ ಪಡೆ 50 ಓವರ್‌ಗೆ 9 ವಿಕೆಟ್ ನಷ್ಟದಲ್ಲಿ 243 ರನ್ ಕಲೆ ಹಾಕಿತು. ಆಸೀಸ್ ಇನ್ನಿಂಗ್ಸ್‌ನಲ್ಲಿ ಕಿವೀಸ್‌ನ ಟ್ರೆಂಟ್ ಬೌಲ್ಟ್ 4, ಲಾಕಿ ಫಾರ್ಗುಸನ್ ಮತ್ತು ಜೇಮ್ಸ್ ನೀಶಮ್ ತಲಾ 2, ಕೇನ್ ವಿಲಿಯಮ್ಸನ್ 1 ವಿಕೆಟ್ ಪಡೆದರು.
ಆಡಿರುವ 7ರಲ್ಲಿ 5 ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ಖಾತೆಯಲ್ಲಿ 11 ಅಂಕಗಳಿವೆ. ಸೆಮಿಫೈನಲ್ ಖಾತ್ರಿಯಾಗಲು ಕಿವೀಸ್‌ಗೆ ಇನ್ನೊಂದೇ ಗೆಲುವು ಬೇಕು. ಹೀಗಾಗಿ ಇಂದಿನ ಪಂದ್ಯವನ್ನು ಗೆಲ್ಲಲು ಕಿವೀಸ್ ಶತಾಯ ಗತಾಯ ಪ್ರಯತ್ನಿಸಲಿದೆ. ಆಸೀಸ್ ಪಾಲಿಗೆ ಒಂದರ್ಥದಲ್ಲಿ ಇದು ಔಪಚಾರಿಕ ಪಂದ್ಯ.
ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ಮಾರ್ಟಿನ್ ಗಪ್ಟಿಲ್ 20, ಹೆನ್ರಿ ನಿಕೋಲ್ಸ್ 8, ಕೇನ್ ವಿಲಿಯಮ್ಸನ್ 40, ರಾಸ್ ಟೇಲರ್ 30, ಟಾಮ್ ಲಾಥಮ್ 14, ಜೇಮ್ಸ್ ನೀಶಮ್ 9, ಮಿಚೆಲ್ ಸ್ಯಾಂಟ್ನರ್ 12, ಇಶ್ ಸೋಧಿ 5, ಲಾಕಿ ಫರ್ಗುಸನ್ , ಟ್ರೆಂಟ್ ಬೌಲ್ಟ್ 2 ರನ್‌ನೊಂದಿಗೆ 43.4 ಓವರ್‌ಗೆ ಸರ್ವ ಪತನ ಕಂಡು 157 ಬಾರಿಸಿ ಶರಣಾಯಿತು.
ಕಿವೀಸ್ ಇನ್ನಿಂಗ್ಸ್ ವೇಳೆ ಆಸೀಸ್ ನ ಮಿಚೆಲ್ ಸ್ಟಾರ್ಕ್ 26 ರನ್‌ಗೆ 5, ಜೇಸನ್ ಬೆಹ್ರೆಂಡೋರ್ಫ್ 31 ರನ್‌ಗೆ 2, ಪ್ಯಾಟ್ ಕಮಿನ್ಸ್, ನಾಥನ್ ಲಿಯಾನ್ ಮತ್ತು ಸ್ಟೀವ್ ಸ್ಮಿತ್ ತಲಾ 1 ವಿಕೆಟ್ ಪಡೆದರು. ಅಲೆಕ್ಸ್ ಕ್ಯಾರಿ ಪಂದ್ಯಶ್ರೇಷ್ಠರೆನಿಸಿದರು. ಸೆಮಿಫೈನಲ್ ಪ್ರವೇಶಕ್ಕೆ ನ್ಯೂಜಿಲೆಂಡ್‌ಗೆ ಒಂದೇ ಗೆಲುವಿನ ಅಗತ್ಯವಿದ್ದು, ಸತತ 2 ಸೋಲಿನಿಂದ ಕೇನ್ ವಿಲಿಯಮ್ಸ್ ಪಡೆ ಕಂಗೆಡುವಂತಾಗಿದೆ.
ನ್ಯೂಜಿಲೆಂಡ್ ತಂಡ: ಮಾರ್ಟಿನ್ ಗಪ್ಟಿಲ್, ಹೆನ್ರಿ ನಿಕೋಲ್ಸ್, ಕೇನ್ ವಿಲಿಯಮ್ಸನ್ (ಸಿ), ರಾಸ್ ಟೇಲರ್, ಟಾಮ್ ಲಾಥಮ್ (ವಿಕೆ), ಜೇಮ್ಸ್ ನೀಶಮ್, ಕಾಲಿನ್ ಡೆ ಗ್ರ್ಯಾಂಡ್‌ಹೋಮ್, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್.
ಆಸ್ಟ್ರೇಲಿಯಾ ತಂಡ: ಆ್ಯರನ್ ಫಿಂಚ್ (ಸಿ), ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್ ವೆಲ್, ಮಾರ್ಕಸ್ ಸ್ಟೋಯಿನಿಸ್, ಅಲೆಕ್ಸ್ ಕ್ಯಾರಿ (ವಿಕೆ), ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಜೇಸನ್ ಬೆಹ್ರೆಂಡೋರ್ಫ್.