ಕ್ರಿಕೆಟ್‌ನಲ್ಲಿ ಬಳಸಲಾಗುವ ಬೇಲ್ಸ್ ಬಗ್ಗೆ ನಿಮಗೆಷ್ಟು ತಿಳಿದಿದೆ?

ಬೆಂಗಳೂರು: ಪ್ರಸಕ್ತ ಏಕದಿನ ವಿಶ್ವಕಪ್ ಟೂರ್ನಿ ಕ್ರಿಕೆಟ್ ಅಭಿಮಾನಿಗಳಿಗೆ ಹಲವು ರೀತಿಯಲ್ಲಿ ಬೇಸರ ತಂದಿದೆ. ಮೊದಲಿಗೆ ಇಂಗ್ಲೆಂಡ್‌ನಲ್ಲಿನ ಹವಾಮಾನ ವೈಪರೀತ್ಯದಿಂದಾಗಿ ಈಗಾಗಲೇ ನಾಲ್ಕು ಪಂದ್ಯಗಳು ರದ್ದಾಗಿರುವುದು ಕ್ರಿಕೆಟ್ ಪ್ರಿಯರ ಉತ್ಸಾಹಕ್ಕೆ ತಣ್ಣೀರೆರಚಿದರೆ, ಮತ್ತೊಂದೆಡೆ ಪ್ರಮುಖ ಆಟಗಾರರು ಗಾಯದ ಸಮಸ್ಯೆಗಳು ಕೂಡ ಅಭಿಮಾನಿಗಳಿಗೆ ಜಿಗುಪ್ಸೆ ತಂದೊಡ್ಡಿದೆ.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ
ಇವೆಲ್ಲದಕ್ಕೂ ಮಿಗಿಲಾಗಿ ಆಟಗಾರರಿಗೂ ಕೂಡ ಒಂದು ಸಂಗತಿ ಬಹುವಾಗಿ ಕಾಡುತ್ತಿದೆ. ಅದೇನೆಂದರೆ ಸ್ಟಂಪ್ಸ್ ಮೇಲೆ ಬಳಸಲಾಗುವ ಬೇಲ್ಸ್. ಈ ಬಾರಿಯ ವಿಶ್ವಕಪ್‌ನ ಹಲವು ಪಂದ್ಯದಲ್ಲಿ ಚೆಂಡು ಸ್ಪಂಪ್ಸ್‌ಗೆ ತಾಗಿದರೂ ಬೇಲ್ಸ್ ಕೆಳಗೆ ಬೀಳದೇ ಇರುವುದು ಈಗಾಗಲೇ ಸಾಕಷ್ಟು ಟೀಕೆಗಳಿಗೂ ಗುರಿಯಾಗಿದೆ. ಜೊತೆಗೆ ಅಂಪೈರ್‌ಗಳಿಗೆ, ಬೌಲರ್‌ಗಳಿಗೆ ಮತ್ತು ಫೀಲ್ಡರ್‌ಗಳಿಗೆ ಈ ನೂತನ ತಂತ್ರಜ್ಞಾನದ ಬೇಲ್ಸ್ ಭಾರಿ ತಲೆ ಬಿಸಿ ತಂದೊಡ್ಡಿದೆ.
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಹಲವು ತಂಡದ ನಾಯಕರು ಈಗಾಗಲೇ ವಿಶ್ವಕಪ್‌ನಲ್ಲಿ ಬಳಸಲಾಗುತ್ತಿರುವ ಬೇಲ್ಸ್ ಕುರಿತಾಗಿ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಪಂದ್ಯದಲ್ಲಿ ಜಸ್‌ಪ್ರೀತ್ ಬುಮ್ರಾ ಬೌಲಿಂಗ್‌ನಲ್ಲಿ ಡೇವಿಡ್ ವಾರ್ನರ್ ಬೌಲ್ಡ್‌ಔಟ್ ಆಗಿದ್ದರೂ ಬೇಲ್ಸ್ ಕೆಳಗೆ ಬೀಳದ ಕಾರಣ ವಾರ್ನರ್‌ಗೆ ಜೀವದಾನ ಲಭ್ಯವಾಗಿತ್ತು. ಇನ್ನು ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ನಡುವಣ ಪಂದ್ಯದಲ್ಲೂ ಇಂಥದ್ದೇ ಘಟನೆ ನಡೆದು ಮಿಚೆಲ್ ಸ್ಟಾರ್ಕ್ ಬೌಲಿಂಗ್‌ನಲ್ಲಿ ಚೆಂಡು ಸ್ಟಂಪ್ಸ್‌ಗೆ ತಾಗಿದರೂ ಬೇಲ್ಸ್ ಬೀಳದೇ ಇದ್ದ ಪರಿಣಾಮ ಕ್ರಿಸ್ ಗೇಲ್ ನಾಟ್‌ಔಟ್ ಆದರು.
ಹೀಗೆ ಪ್ರಸಕ್ತ ವಿಶ್ವಕಪ್‌ನಲ್ಲಿ ಐಸಿಸಿ ಬಳಕೆ ಮಾಡುತ್ತಿರುವ ನೂತನ ಝಿಂಗ್ ಬೇಲ್ಸ್ ವ್ಯಾಪಕ ಟೀಕೆಗೆ ಗುರಿಯಾಗಿದೆ. ಆದರೂ, ಬೇಲ್ಸ್ ಬದಲಾಯಿಸುವ ಮಾತೇ ಇಲ್ಲ ಎಂದಿರುವ ಐಸಿಸಿ, ಕಳೆದ ನಾಲ್ಕೈದು ವರ್ಷಗಳಿಂದ ನೂತನ ಝಿಂಗ್ ಸ್ಟಂಪ್ಸ್ ಮತ್ತು ಬೇಲ್ಸ್ ಬಳಕೆ ಮಾಡಲಾಗುತ್ತಿದ್ದು, ಯಾವುದೇ ಸಮಸ್ಯೆಗಳು ಕಂಡುಬಂದಿಲ್ಲ. ಗುಣಮಟ್ಟದ ಪರೀಕ್ಷೆ ಬಳಿಕವೇ ಇವನ್ನು ಅಳವಡಿಸಲಾಗಿದೆ. ಹೀಗಾಗಿ ಟೂರ್ನಿಯ ಮಧ್ಯದಲ್ಲಿ ಈ ರೀತಿ ಬದಲಾವಣೆ ಮಾಡಿದರೆ ಅದು ಟೂರ್ನಿಗೆ ಘನತೆ ತರುವ ಕೆಲಸವಲ್ಲ ಎಂದು ಐಸಿಸಿ ಹೇಳಿಕೆ ನೀಡಿದೆ.

ಝಿಂಗ್ ಬೇಲ್ಸ್ ಕಂಡುಹಿಡಿದವರು ಯಾರು
ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ ಇತಿಹಾಸದಲ್ಲಿ 2015ರಲ್ಲಿ ಮೊದಲ ಬಾರಿ ಝಿಂಗ್ ಬೇಲ್ಸ್ ಮತ್ತು ಸ್ಟಂಪ್ಸ್ ಬಳಕೆ ಮಾಡಲಾಗಿತ್ತು. ಇದಕ್ಕೂ ಮೊದಲು 2014ರ ಟಿ20 ವಿಶ್ವಕಪ್‌ನಲ್ಲೂ ಎಲ್‌ಇಡಿ ತಂತ್ರಜ್ಞಾನವನ್ನು ಒಳಗೊಂಡ ಝಿಂಗ್ ಬೇಲ್ಸ್ ಮತ್ತು ಸ್ಟಂಪ್ಸ್‌ಗಳ ಬಳಕೆಯಾಗಿತ್ತು. ಅಂದಹಾಗೆ ಈ ವಿನೂತನ ತಂತ್ರಜ್ಞಾನದ ಆವಿಷ್ಕಾರ ಮಾಡಿದ್ದು, ಆಸ್ಟ್ರೇಲಿಯಾ ಮೂಲದ ಮೆಕಾನಿಕಲ್ ಇಂಡಸ್ಟ್ರಿಯಲ್ ಡಿಸೈನರ್ ಬ್ರಾಂನ್ಟ್ ಎಕರ್ಮನ್. ಅಂದಹಾಗೆ ಝಿಂಗ್ ಸ್ಟಂಪ್ಸ್ ಮತ್ತು ಬೇಲ್ಸ್‌ಗಳು ಮೊದಲ ಬಾರಿ ಬಳಕೆಯಾಗಿದ್ದು ಕೂಡ ಆಸ್ಟ್ರೇಲಿಯಾದಲ್ಲೇ. 2012ರ ಬಿಗ್‌ಬ್ಯಾಷ್ ಟಿ20 ಟೂರ್ನಿ ವೇಳೆ ಚೆಂಡು ತಾಗುತ್ತಿದ್ದಂತೆಯೇ ಫಳ ಫಳ ಬೆಳಕು ಚೆಲ್ಲುವ ಈ ಸ್ಟಂಪ್ಸ್ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ಬಳಿಕ ಇಂಡಿಯನ್ ಪ್ರೀಮಿಯರ್ ಲೀಗ್ ಮೂಲಕ ಹೆಚ್ಚು ಜನಪ್ರಿಯತೆ ಗಿಟ್ಟಿಸಿತು. ಸೌತ್ ಆಸ್ಟ್ರೇಲಿಯಾದ ಝಿಂಗ್ ಇಂಟರ್‌ನ್ಯಾಷನಲ್ ಸಂಸ್ಥೆಯು ಈ ಸ್ಟಂಪ್ಸ್‌ಗಳನ್ನು ಉತ್ಪಾದಿಸುತ್ತದೆ. ಇದರ ಅಧಿಕೃತ ಹೆಸರು ಝಿಂಗ್ ವಿಕೆಟ್ ಸ್ಟಿಸ್ಟಮ್.

ಬೆಲೆ ಎಷ್ಟು ಗೊತ್ತಾ?!
ಟೀಮ್ ಇಂಡಿಯಾದ ಮಾಜಿ ನಾಯಕ ಎಂ.ಎಸ್ ಧೋನಿ ಅವರಿಗೆ ತಾವು ಗೆದ್ದ ಪಂದ್ಯದಲ್ಲಿ ಸ್ಟಂಪ್ ಒಂದನ್ನು ಮನೆಗೊಯ್ಯುವ ಅಭ್ಯಾಸವಿತ್ತು. ಆದರೆ, ಧೋನಿ ಅವರ ಸ್ಪಂಪ್ಸ್ ಅಪಹರಣಕ್ಕೆ ಐಸಿಸಿ ಈಗ ಬ್ರೇಕ್ ಹಾಕಿದೆ. ಕಾರಣ ಐಸಿಸಿ ತನ್ನ ಪ್ರಮುಖ ಟೂರ್ನಿಗಳ ಪಂದ್ಯವೊಂದಕ್ಕೆ ಬಳಕೆ ಮಾಡುತ್ತಿರುವ ವಿನೂತನ ತಂತ್ರಜ್ಞಾನದ ಝಿಂಗ್ ಸ್ಟಂಪ್ಸ್ ಮತ್ತು ಬೇಲ್ಸ್‌ಗಳ ಒಂದು ಸಂಪೂರ್ಣ ಸೆಟ್‌ನ ಬೆಲೆ 42 ಲಕ್ಷ ರೂ. ಹೀಗಾಗಿ ಯಾವ ಆಟಗಾರನಿಗೂ ಸ್ಟಂಪ್ಸ್ ಮನೆಗೊಯ್ಯುವ ಅನುಮತಿ ಇಲ್ಲ. ಮೂರು ವರ್ಷಗಳ ಸುದೀರ್ಘಾವಧಿಯ ಅಧ್ಯನದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ, ಸಾಂಪ್ರದಾಯಿಕ ಮರದ ಸ್ಟಂಪ್ಸ್‌ಗಳ ಬದಲಾಗಿ ನೂತನ ಝಿಂಗ್ ಸ್ಟಂಪ್ಸ್ ಬಳಸಲು 2014ರಲ್ಲಿ ಮುಂದಾಗಿತ್ತು. ಅಂದಹಾಗೆ ಎರಡು ಝಿಂಗ್ ಬೇಲ್ಸ್‌ನ ಬೆಲೆಯಲ್ಲಿ ಒಂದು ಅತ್ಯಾಧುನಿಕ ಐ-ಫೋನ್ ಖರೀಧಿಸಬಹುದು.

ಕ್ರಿಕೆಟ್‌ಗೆ ತಂತ್ರಜ್ಞಾನದ ಟಚ್
ಹಿಂದೆಲ್ಲಾ ಮರದ ಬೇಲ್ಸ್ ಬಳಕೆ ಮಾಡುವ ಸಂದರ್ಭದಲ್ಲಿ ರನ್‌ಔಟ್ ಮತ್ತು ಸ್ಟಂಪಿಂಗ್ ವೇಳೆ ಬೇಲ್ಸ್ ಎಗರಿದೆಯೇ ಎಂಬುದನ್ನು ಅಂದಾಜಿಸುವುದು ಅಂಪೈರ್‌ಗಳಿಗೆ ಬಹಳ ಕಷ್ಟದ ಕೆಲಸವಾಗುತ್ತಿತ್ತು. ಆದರೀಗ ಈ ಕೆಲಸವನ್ನು ಝಿಂಗ್ ಬೇಲ್ಸ್ ಸುಲಭವನ್ನಾಗಿಸಿದೆ. ಚೆಂಡು ತಾಗುತ್ತಿದಂತೆಯೇ ಎಲ್‌ಇಡಿ ಲೈಟ್‌ಗಳು ಹೊಳೆಯುವುದರಿಂದ ಅಂಪೈರ್‌ಗಳಿಗೆ ತಮ್ಮ ನಿರ್ಧಾರ ಪ್ರಕಟಿಸುವುದು ಸುಲಭ. ಈ ಸ್ಟಂಪ್ಸ್ ಮತ್ತು ಬೇಲ್ಸ್‌ಗಳಲ್ಲಿ ಕಡಿಮೆ ವೋಲ್ಟೇಜ್‌ನ ಬ್ಯಾಟರಿಗಳನ್ನು ಅಳವಡಿಸಲಾಗಿರುತ್ತದೆ. ಜೊತೆಗೆ ಎರಡೂ ಬೇಲ್ಸ್‌ಗಳಲ್ಲಿ ಮೈಕ್ರೊ ಪ್ರೊಸೆಸರ್‌ಗಳನ್ನು ಅಳವಡಿಸಲಾಗಿದ್ದು, ಸ್ಟಂಪ್ಸ್‌ನ ತುದಿಯಿಂದ ಬೇಲ್ಸ್ ಸರಿದ ಕೂಡಲೇ ಲೈಟ್ ಹೊಳೆಯಲಾರಂಭಿಸುತ್ತದೆ. ಲೈಟ್ ಹೊಳೆದರೆ ಸ್ಟಂಪ್ಸ್‌ನಿಂದ ಬೇಲ್ಸ್ ಎಗರಿದೆ ಎಂದರ್ಥ. ಕಾಂಪೊಸಿಟ್ ಪ್ಲಾಸ್ಟಿಕ್‌ನಿಂದ ಮಾಡಲಾಗಿರುವ ಈ ಸ್ಟಂಪ್ 1000ದಲ್ಲಿ ಒಂದಷ್ಟೇ ಮುರಿಯುವ ಸಾಧ್ಯತೆ ಹೊಂದಿದೆ.

ಮೊದಲ ಬಾರಿ ಸಾಂಪ್ರದಾಯಿಕ ಬೇಲ್ಸ್ ಬಳಕೆ
ಕ್ರಿಕೆಟ್ ಕ್ರೀಡೆಯ ಉದಯದ ಕಾಲದಲ್ಲಿ ಕೇವಲ ಎರಡು ಸ್ಟಂಪ್‌ಗಳು ಮತ್ತು ಒಂದು ಬೇಲ್ ಅಷ್ಟೇ ಬಳಕೆ ಮಾಡಲಾಗುತ್ತಿತ್ತು. ಒಂದು ರೀತಿ ಗೇಟ್ ಆಕಾರದಲ್ಲಿ ಸ್ಟಂಪ್ ನಿಲ್ಲಿಸಲಾಗುತ್ತಿತ್ತು. ಆದರೆ, 1775ರಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿತ್ತು. ಜಾನ್ ಸ್ಮಾಲ್ ಎಂಬಾತ ಸ್ಟಂಪ್ಸ್‌ನ ಮಧ್ಯವಾಗದಲ್ಲಿ ಇರುವ ಜಾಗದಲ್ಲಿ ಚೆಂಡನ್ನು ಸತತ ಮೂರು ಬಾರಿ ನುಸುಳುವಂತೆ ಮಾಡಿದ್ದರು. ಈ ಘಟನೆಯ ಬಳಿಕ ಮೂರನೇ ಸ್ಟಂಪ್ (ಮಧ್ಯದ) ಬಳಕೆಗೆ ತರಲಾಯಿತು. ಅಂತೆಯೇ ಮೊದಲ ಬಾರಿ 2 ಸ್ಟಂಪ್ಸ್‌ಗಳನ್ನು ಬಳಕೆ ಮಾಡಲಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications