For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್‌ ವಿರುದ್ಧ ನ್ಯೂಜಿಲೆಂಡ್‌ ಸೋಲಿಗೆ ಅಂಪೈರ್‌ ಪ್ರಮಾದ ಕಾರಣ?

ICC World Cup 2019 : ಫೈನಲ್ ಪಂದ್ಯದಲ್ಲು ಎಡವಟ್ಟು ಮಾಡಿದ್ದು ಅಂಪೈರ್ ಗಳೇ..? | Ben Stokes | Oneindia Kannada
World Cup 2019: There was judgment error on overthrow, says Simon Taufel

ಮೆಲ್ಬೋರ್ನ್‌, ಜುಲೈ 15: ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ಚೊಚ್ಚಲ ಟ್ರೋಫಿ ಮುಡಿಗೇರಿಸಿದ ಬೆನ್ನಲ್ಲೇ ಆಸ್ಟ್ರೇಲಿಯಾದ ಮಾಜಿ ಅಂತಾರಾಷ್ಟ್ರೀಯ ಅಂಪೈರ್‌ ಸೈಮನ್‌ ಟಾಫಲ್‌ ನ್ಯೂಜಿಲೆಂಡ್‌ ತಂಡದ ಸೋಲಿಗೆ ಅಂಪೈರ್‌ಗಳಿಂದಾದ ಪ್ರಮಾದ ಕಾರಣವಾದದ್ದು ಹೇಗೆ ಎಂಬುದನ್ನು ವಿವರಿಸಿದ್ದಾರೆ.

ಹೈ ವೋಲ್ಟೇಜ್‌ ಫೈನಲ್‌ ಪಂದ್ಯದಲ್ಲಿ 242 ರನ್‌ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್‌ ತಂಡಕ್ಕೆ ಕೊನೆಯ ಎಸೆತದಲ್ಲಿ 2 ರನ್‌ ಅಗತ್ಯವಿತ್ತು. ಆದರೆ ಎರಡನೇ ರನ್‌ ಗಳಿಸುವ ಪ್ರಯತ್ನದಲ್ಲಿ ಮಾರ್ಕ್‌ ವುಡ್‌ ರನ್‌ಔಟ್‌ ಆಗಿದ್ದರು. ಈ ಮೂಲಕ ಪಂದ್ಯ ಟೈಗೊಂಡು ಫಲಿತಾಂಶ ಶಲುವಾಗಿ ಸೂಪರ್‌ ಓವರ್‌ ಕಡೆಗೆ ಸಾಗಿತು.

ಆದರೆ, ಇದಕ್ಕೂ ಮುನ್ನ ನಾಟಕೀಯ ಘಟನೆ ನಡೆದು ಇಂಗ್ಲೆಂಡ್‌ ತಂಡಕ್ಕೆ ಎದುರಾಗಬೇಕಿದ್ದ ಸೋಲು ತಪ್ಪಿತ್ತು. ಕೊನೆಯ ಓವರ್‌ನಲ್ಲಿ ಮಾರ್ಟಿನ್‌ ಗಪ್ಟಿಲ್‌ ಬೌಂಡರಿ ಗೆರೆಯಿಂದ ಎಸೆದ ಚೆಂಡು ಕ್ರೀಸ್‌ ತಲುಪುವ ಪ್ರಯತ್ನದಲ್ಲಿದ್ದ ಇಂಗ್ಲೆಂಡ್‌ನ ಬ್ಯಾಟ್ಸ್‌ಮನ್‌ ಬೆನ್‌ ಸ್ಟೋಕ್ಸ್‌ ಅವರ ಬ್ಯಾಟ್‌ಗೆ ತಾಗಿ ಓವರ್‌ಥ್ರೋ ರೂಪದಲ್ಲಿ ಬೌಂಡರಿ ಗೆರೆ ಮುಟ್ಟಿತ್ತು. ಆನ್‌ಫೀಲ್ಡ್‌ ಅಂಪೈರ್‌ಗಳಾದ ಮರಾಯಿಸ್‌ ಎರಾಸ್ಮಸ್‌ ಮತ್ತು ಕುಮಾರ ಧರ್ಮ ಸೇನಾ ಇಂಗ್ಲೆಂಡ್‌ಗೆ ಒಟ್ಟು 6 ರನ್‌ಗಳನ್ನು ಈ ಮೂಲಕ ಕರುಣಿಸಿದ್ದರು.

ಆದರೆ, ವಿಶ್ವ ಶ್ರೇಷ್ಠ ಅಂಪೈರ್‌ ಆಗಿ ಗುರುತಿಸಿಕೊಂಡಿದ್ದ ಸೈಮನ್‌ ಟಾಫಲ್‌ ಅವರ ಪ್ರಕಾರ ಇಂಗ್ಲೆಂಡ್‌ಗೆ ಇಲ್ಲಿ 6 ರನ್‌ಗಳನ್ನು ನೀಡಿದ್ದು ತಪ್ಪು. ಗರಿಷ್ಠ 5 ರನ್‌ಗಳನ್ನು ಮಾತ್ರವೇ ನೀಡಬೇಕಿತ್ತು ಎಂದು ತಮ್ಮ ಅಭಿಪ್ರಾಯವನ್ನು ಸೋಮವಾರ ಹೊರಹಾಕಿದ್ದಾರೆ.

"ಫೈನಲ್‌ ಪಂದ್ಯದಲ್ಲಿ ನಡೆದ ಓವರ್‌ಥ್ರೋ ಘಟನೆಯಲ್ಲಿ ನೀಡಲಾದ ತೀರ್ಪಿನಲ್ಲಿ ತಪ್ಪಾಗಿದೆ. ಓವರ್‌ ಥ್ರೋ ಆಗುವುದು ಫೀಲ್ಡರ್‌ ಚೆಂಡನ್ನು ಹಿಡಿದು ಎಸೆದ ಸಂದರ್ಭದಿಂದ ಪರಿಗಣಿಸಬೇಕಾಗುತ್ತದೆ. ಫೀಲ್ಡರ್‌ ಚೆಂಡನ್ನು ಎಸೆದ ಸಂದರ್ಭದಲ್ಲಿ ಬ್ಯಾಟ್ಸ್‌ಮನ್‌ಗಳು ಎಷ್ಟು ರನ್‌ ಗಳಿಸಿದ್ದಾರೆ. ಬಳಿಕ ಚೆಂಡು ಬೌಂಡರಿ ಗೆರೆ ಮುಟ್ಟಿದ್ದರೆ ಅಷ್ಟನ್ನು ಪರಿಗಣಿಸಬೇಕು. ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ಗಳು ಫೀಲ್ಡರ್‌ ಚೆಂಡನ್ನು ಹಿಡಿದು ಎಸೆಯುವ ಸಂದರ್ಭದಲ್ಲಿ ಒಂದು ರನ್‌ ಪೂರೈಸಿ 2ನೇ ರನ್‌ ಗಳಿಸುವ ಪ್ರಯತ್ನದಲ್ಲಿದ್ದರು. ಹೀಗಾಗಿ ಓವರ್‌ ಥ್ರೋನ 4 ರನ್‌ ಸೇರಿಸಿದರೆ ಒಟ್ಟು 5 ರನ್‌ ಮಾತ್ರವೇ ನೀಡಬೇಕಿತ್ತು," ಎಂದು ಟಾಫಲ್‌ ವಿವರಿಸಿದ್ದಾರೆ.

ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ಗಳಾದ ಆದಿಲ್‌ ರಶೀದ್‌ ಮತ್ತು ಬೆನ್‌ ಸ್ಟೋಕ್ಸ್‌ ಫೀಲ್ಡರ್‌ ಚೆಂಡನ್ನು ಎಸೆದ ಸಂದರ್ಭದಲ್ಲಿ ಎರಡನೇ ರನ್‌ ಗಳಿಸುವಾಗ ಒಬ್ಬರನ್ನೊಬ್ಬರು ಇನ್ನೂ ದಾಟಿರಲಿಲ್ಲ. ಹೀಗಾಗಿ ಓವರ್‌ ಥ್ರೋಗೆ 1+4 ರನ್‌ ಮಾತ್ರವೇ ಪರಿಗಣಿಸಬೇಕಿತ್ತು. ಒಂದು ವೇಳೆ ಇಬ್ಬರೂ ಬ್ಯಾಟ್ಸ್‌ಮನ್‌ಗಳು 2ನೇ ರನ್‌ ಗಳಿಸುವ ಸಂದರ್ಭದಲ್ಲಿ ಒಬ್ಬರನ್ನೊಬ್ಬರು ದಾಟಿದ್ದರೆ (ಫೀಲ್ಡರ್‌ ಚೆಂಡನ್ನು ಎಸೆಯುವ ಮುನ್ನ) ಮಾತ್ರವೇ 6 ರನ್‌ ನೀಡಲು ಸಾಧ್ಯ. ಆದರೆ, ಆನ್‌ಫೀಲ್ಡ್‌ ಅಂಪೈರ್‌ಗಳು ಇದನ್ನು ನಿರ್ಧರಿಸುವಲ್ಲಿ ವಿಫಲರಾದರು. ಇದೇ ವೇಳೆ ಅಂಪೈರ್‌ಗಳ ಈ ನಿರ್ಧಾರವನ್ನು ಕೂಡ 2011ರ ವಿಶ್ವಕಪ್‌ ಫೈನಲ್‌ನಲ್ಲಿ ಅಂಪೈರ್‌ ಜವಾಬ್ದಾರಿ ನಿಭಾಯಿಸಿದ್ದ ಟಾಫಲ್‌ ಸಮರ್ಥಿಸಿಕೊಂಡಿದ್ದಾರೆ.

"ಇಂತಹ ಸಂದರ್ಭದಲ್ಲಿ ಅಂಪೈರ್‌ಗಳಿಗೆ ಹೆಚ್ಚು ಅಂಶಗಳ ಕಡೆಗೆ ಗಮನ ನೀಡುವ ಒತ್ತಡವಿರುತ್ತದೆ. ಮೊದಲಿಗೆ ನೋಬಾಲ್‌ ಗಮನಿಸಬೇಕು. ಬಳಿಕ ಬ್ಯಾಟ್ಸ್‌ಮನ್‌ ಮೊದಲ ರನ್‌ ಪೂರೈಸಿರುವುದನ್ನು, ಬಳಿಕ ಫೀಲ್ಡರ್‌ ಚೆಂಡನ್ನು ಫೀಲ್ಡ್‌ ಮಾಡಿರುವುದನ್ನು. ಓವರ್‌ ಥ್ರೋ ಸಂಭವಿಸಿದರೆ ಎಂದು ಫೀಲ್ಡರ್‌ ಚೆಂಡನ್ನು ಎಸೆದ ಸಂದರ್ಭವನ್ನೂ ಅಂಪೈರ್‌ಗಳು ಗಮನಿಸಬೇಕಾಗಿರುತ್ತದೆ. ಇಷ್ಟೆಲ್ಲಾ ಅಂಶಗಳನ್ನು ಒಟ್ಟಿಗೆ ಮಾಡುವ ಸಂದರ್ಭದಲ್ಲಿ ಇಂತಹ ತಪ್ಪಾಗುವ ಸಾಧ್ಯತೆ ಇರುತ್ತದೆ," ಎಂದು ಸಮರ್ಥಿಸಿದ್ದಾರೆ.

ಟಾಫಲ್‌ 2004ರಿಂದ 2008ರವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ನೀಡುವ ಅತ್ಯುತ್ತಮ ಅಂತಾರಾಷ್ಟ್ರೀಯ ಅಂಪೈರ್‌ ಪ್ರಶಸ್ತಿಗೆ ಭಾಜನರಾಗಿದ್ದರು.

"ಅಂಪೈರ್‌ಗಳು ಕೇವಲ ಔಟ್‌ ಮತ್ತು ನಾಟ್‌ಔಟ್‌ ನಿರ್ಧಾರ ಮಾಡಲಷ್ಟೇ ಇದ್ದಾರೆ ಎಂದು ಹಲವರು ನಂಬಿರುವುದು ವಿಪರ್ಯಾಸ. ಆದರೆ ದಿನವೊಂದರಲ್ಲಿ ಅವರು 1000ಕ್ಕೂ ಹೆಚ್ಚು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಿರುತ್ತದೆ. ಇದನ್ನು ಮೊದಲು ಅರ್ಥಮಾಡಿಕೊಳ್ಳಬೇಕು. ಫೈನಲ್‌ ಪಂದ್ಯದಲ್ಲಿ ಕಾರ್ಯ ನಿರ್ವಹಿಸಿದ ಇಬ್ಬರೂ ಅಂಪೈರ್‌ಗಳು ಕೂಡ ಫೈನಲ್‌ನಲ್ಲಿ ಆಡಿದ ತಂಡಗಳಷ್ಟೇ ಪರಿಶ್ರಮ ವಹಿಸಿರುತ್ತಾರೆ. ಹೀಗಾಗಿ ಅಂಪೈರ್‌ ಪ್ರಮಾದವೇ ಎಲ್ಲದಕ್ಕೂ ಕಾರಣ ಎಂದು ಹೇಳುವುದು ತಪ್ಪಾಗುತ್ತದೆ. ಏಕೆಂದರೆ ಒಂದು ಪಂದ್ಯದಲ್ಲಿ 600 ಎಸೆತಗಳಿರುತ್ತವೆ. ಇದರಲ್ಲಿ ಏನೆಲ್ಲಾ ಆಗಿರಬಹುದು ಅಲ್ಲವೆ," ಎಂದು ಅಂಪೈರ್‌ಗಳ ಪರವಾಗಿಯೂ ಟಾಫಲ್‌ ಬ್ಯಾಟಿಂಗ್‌ ಮಾಡಿದ್ದಾರೆ.

Story first published: Monday, July 15, 2019, 20:35 [IST]
Other articles published on Jul 15, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+