ವಿಶ್ವಕಪ್: 4ನೇ ಕ್ರಮಾಂಕದಲ್ಲಿ ವಿಜಯ್ ಶಂಕರ್ ಆಡುವುದು ಎಷ್ಟು ಸರಿ?

ಬೆಂಗಳೂರು, ಜೂನ್ 28: ಇಂಗ್ಲೆಂಡ್ ಮತ್ತು ವೇಲ್ಸ್ ಆತಿಥ್ಯದಲ್ಲಿ ನಡೆಯುತ್ತಿರುವ ಪ್ರಸಕ್ತ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಆಜೇಯವಾಗಿ ಸೆಮಿಫೈನಲ್ಸ್ ಕಡೆಗೆ ಹೆಜ್ಜೆಯಿಟ್ಟಿರುವ ಟೀಮ್ ಇಂಡಿಯಾ, ಕಳೆದ ಎರಡು ಪಂದ್ಯಗಳಲ್ಲಿ ನಿರೀಕ್ಷಿತ ಮಟ್ಟದ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ
ಪ್ರಮುಖವಾಗಿ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಗಾಯಗೊಂಡು ಟೂರ್ನಿಯಿಂದ ನಿರ್ಗಮಿಸಿರುವುದು ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ ಅನಿವಾರ್ಯವಾಗಿ ಬದಲಾವಣೆ ತರುವಂತೆ ಮಾಡಿತು. ಪರಿಣಾಮ 4ನೇ ಕ್ರಮಾಂಕದಲ್ಲಿ ಆಡುತ್ತಿದ್ದ ಕೆ.ಎಲ್ ರಾಹುಲ್ ಇನಿಂಗ್ಸ್ ಆರಂಭಿಸುವ ಭಾರ ಹೊರುವಂತಾಗಿದೆ.
ರಾಹುಲ್ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಬಡ್ತಿ ಪಡೆದರೆ ಖಾಲಿಯಾದ ನಾಲ್ಕನೇ ಕ್ರಮಾಂಕದಲ್ಲಿ ಆಡಿಸುವುದಾದರೂ ಯಾರನ್ನು ಎಂದೆಲ್ಲಾ ಈ ಮೊದಲು ಚರ್ಚೆಯಾಗಿತ್ತು. ಅನುಭವಿ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಈ ಜವಾಬ್ದಾರಿ ಹೊರಬಲ್ಲರು. ಅವರು ತಂಡದಲ್ಲಿ ಸ್ಥಾನ ಪಡೆದಿರುವುದೇ ಇಂಥದ್ದೊಂದು ಜವಾಬ್ದಾರಿ ನಿಭಾಯಿಸಲು ಎಂದು ಹಲವರು ಹೇಳಿದರೆ, 3 ಡೈಮೆನ್ಷನ್ ಆಟಗಾರನಾಗಿ ವಿಶ್ವಕಪ್ ತಂಡ ಸೇರಿರುವ ಆಲ್‌ರೌಂಡರ್ ವಿಜಯ್ ಶಂಕರ್ ಸೂಕ್ತ ಎಂಬುದು ಮತ್ತೂ ಕೆಲವರ ವಾದವಾಗಿತ್ತು.
ಆದರೆ, ಕಳೆದ ಎರಡು ಪಂದ್ಯಗಳಲ್ಲಿ 4ನೇ ಕ್ರಮಾಂಕದಲ್ಲಿ ವಿಜಯ್ ಶಂಕರ್ ಅವರ ಬ್ಯಾಟಿಂಗ್ ವೀಕ್ಷಿಸಿದ ಬಳಿಕ ಕ್ರಿಕೆಟ್ ಅಭಿಮಾನಿಗಳಲ್ಲಿ ಕಾಡುತ್ತಿರುವ ಪ್ರಶ್ನೆ, ವಿಜಯ್‌ಗೆ 4ನೇ ಕ್ರಮಾಂಕದಲ್ಲಿ ಆಡುವಂತೆ ಮಾಡಿರುವುದು ಎಷ್ಟು ಸರಿ? ಎಂದು. ಅದರಲ್ಲೂ ವಿಶ್ವಕಪ್‌ನಂತಹ ಒತ್ತಡ ಟೂರ್ನಿಯಲ್ಲಿ ಒಬ್ಬ ಯುವ ಆಟಗಾರನಿಗೆ ಇಷ್ಟು ದೊಡ್ಡ ಜವಾಬ್ದಾರಿ ವಹಿಸಿರುವುದು ಸರಿಯೇ ಎಂದೆಲ್ಲಾ ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆಯಾಗುತ್ತಿದೆ.
ಇದಕ್ಕೆ ಬಲವಾದ ಕಾರಣವೂ ಇದೆ. ಟೂರ್ನಿಯಲ್ಲಿ ಉಳಿದ ತಂಡಗಳಲ್ಲಿ ರಾಸ್ ಟೇಲರ್, ಸ್ಟೀವ್ ಸ್ಮಿತ್, ಐಯಾನ್ ಮಾರ್ಗನ್, ಫಾಫ್ ಡು'ಪ್ಲೆಸಿಸ್ ಮತ್ತು ಮೊಹಮ್ಮದ್ ಹಫೀಝ್ ಅವರಂತಹ ಅತ್ಯಂತ ಅನುಭವಿ ಬ್ಯಾಟ್ಸ್‌ಮನ್‌ಗಳು ತಮ್ಮ ತಮ್ಮ ತಂಡಗಳಲ್ಲಿ 4ನೇ ಕ್ರಮಾಂಕದ ಒತ್ತಡವನ್ನು ನಿಭಾಯಿಸುತ್ತಿದ್ದಾರೆ. ಆದರೆ, ಪ್ರಶಸ್ತಿ ಫೇವರಿಟ್ಸ್ ಟೀಮ್ ಇಂಡಿಯಾ ಮಾತ್ರ ಅನನುಭವಿ ಯುವ ಆಟಗಾರನಿಗೆ ಇಂಥದ್ದೊದು ಜವಾಬ್ದಾರಿ ವಹಿಸಿರುವುದು ಅಭಿಮಾನಿಗಳಿಗೆ ಆತಂಕ ತಂದೊಡ್ಡಿದೆ.
ಧವನ್ ನಿರ್ಗಮನದ ಬಳಿಕ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ವಿಜಯ್ ಶಂಕರ್ ಅವರನ್ನು ಮೊದಲ ಬಾರಿ ಆಡಿಸಲಾಯಿತು. ಪಾಕ್ ವಿರುದ್ಧ ವಿಕೆಟ್ ಪಡೆದು, ಬ್ಯಾಟ್‌ನಲ್ಲೂ ರನ್‌ಗಳಿಸಿ ಕ್ಷೇತ್ರ ರಕ್ಷಣೆಯಲ್ಲೂ ಗಮನ ಸೆಳೆದಿದ್ದ ಆಲ್‌ರೌಂಡರ್, ಬಳಿಕ ಅಫಘಾನಿಸ್ತಾನ ಮತ್ತು ವೆಸ್ಟ್ ಇಂಡೀಸ್ ಎದುರು ನಿರಾಸೆ ಮೂಡಿಸಿದ್ದರು. ಇದೇ ವೇಳೆ 4ನೇ ಕ್ರಮಾಂಕದಲ್ಲಿ ವಿಜಯ್ ಬದಲಾಗಿ ಸ್ಫೋಟಕ ಎಡಗೈ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರನ್ನು ಆಡಿಸಿದರೆ ಉತ್ತಮ ಎಂದು ಹಲವು ಕ್ರಿಕೆಟ್ ಪಂದಿತರು ಕೂಡ ಅಭಿಪ್ರಾಯ ಪಟ್ಟಿದ್ದಾರೆ.
ಆದರೂ, ಭಾರತ ತಂಡದ ಮ್ಯಾನೇಜ್ಮೆಂಟ್ ವಿಜಯ್ ಶಂಕರ್ ಅವರ ಮೇಲೆ ಹೆಚ್ಚಿನ ಒಲವು ಹೊಂದಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ತಂಡದ ಯಶಸ್ಸಿಗೆ ಬೇಕಿರುವ ಅಗತ್ಯದ ಸಂಯೋಜನೆ ಟೀಮ್ ಮ್ಯಾನೇಜ್ಮೆಂಟ್ ಮೊದಲ ಆದ್ಯತೆ ನೀಡುವ ಅನಿವಾರ್ಯತೆ ಇದೆ. ಸತತ ಎರಡು ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವ ಭಾರತ ತಂಡಕ್ಕೆ ಹೆಚ್ಚಿನ ಬಲ ಒದಗಿಸಲು ಪಂತ್ ಅವರಂತಹ ಸಮರ್ಥ ಹಾಗೂ ಪಂದ್ಯದ ದಿಕ್ಕು ಬದಲಾಯಿಸುವ ಸಾಮರ್ಥ್ಯ ಹೊಂದಿರುವ ಆಟಗಾರನಿಗೆ ಅವಕಾಶ ನೀಡಬೇಕೆಂಬುದು ಅಭಿಮಾನಿಗಳ ಒತ್ತಾಸೆ.
ನಿಧಾಸ್ ಕಪ್ ಫೈನಲ್ ಪಂದ್ಯದಲ್ಲಿ ತಿಣುಕಾಡಿ ಬಾಂಗ್ಲಾ ವಿರುದ್ಧ ಸೋಲುವಂತೆ ಮಾಡಿದ್ದ ವಿಜಯ್ ಶಂಕರ್ ಅವರಿಗಿಂತಲೂ ಕೊನೆಯ ಬಾಲ್‌ನಲ್ಲಿ ಸಿಕ್ಸರ್ ಸಿಡಿಸಿ ತಂಡಕ್ಕೆ ಟ್ರೋಫಿ ಗೆದ್ದುಕೊಟ್ಟ ದಿನೇಶ್ ಕಾರ್ತಿಕ್ ಅವರನ್ನು ಆಡಿಸುವುದು ಉತ್ತಮ ಎಂಬುದು ಕ್ರಿಕೆಟ್ ಪ್ರಿಯ ಅಭಿಪ್ರಾಯ.
ಭಾರತ ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಆಡಿದ ಆರು ಪಂದ್ಯಗಳಿಂದ 11 ಅಂಕಗಳನ್ನು ಗಳಿಸಿದ್ದು, ಇನ್ನೊಂದು ಗೆಲುವು ಸಾಧ್ಯವಾದರೆ ಅಂತಿಮ ನಾಲ್ಕರ ಘಟ್ಟಕ್ಕೆ ಕಾಲಿಡಲಿದೆ. ಇದೀಗ ಇದೇ ಭಾನುವಾರ (ಜೂನ್ 30) ನಡೆಯಲಿರುವ ಪಂದ್ಯದಲ್ಲಿ ಟೀಮ್ ಇಂಡಿಯಾ ಆತಿಥೇಯ ಇಂಗ್ಲೆಂಡ್ ವಿರುದ್ಧ ಪೈಪೋಟಿ ನಡೆಸಲಿದ್ದು, ಈ ಪಂದ್ಯದಲ್ಲಿ ಕೊಹ್ಲಿ ಪಡೆ ಗೆದ್ದರೆ ಇಂಗ್ಲೆಂಡ್ ತಂಡದ ವಿಶ್ವಕಪ್ ಅಭಿಯಾನ ಅಂತ್ಯಗೊಳ್ಳಲಿದೆ.
ವಿವಿಧ ತಂಡಗಳಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಿರುವ ಬ್ಯಾಟ್ಸ್‌ಮನ್‌ಗಳ ಸಾಧನೆ

ವಿಜಯ್ ಶಂಕರ್ (ಟೀಮ್ ಇಂಡಿಯಾ)
ಒಡಿಐನಲ್ಲಿ ವಿಜಯ್ ಶಂಕರ್ ಸಾಧನೆ
12 ಪಂದ್ಯ
223 ರನ್
46 ಗರಿಷ್ಠ
31.85 ಸರಾಸರಿ
90.65 ಸ್ಟ್ರೈಕ್ ರೇಟ್
00 ಶತಕ
00 ಅರ್ಧಶತಕ
ದಿನೇಶ್ ಕಾರ್ತಿಕ್ ಒಡಿಐ ಸಾಧನೆ
91 ಪಂದ್ಯ
1738 ರನ್
79 ಗರಿಷ್ಠ
31.03 ಸರಾಸರಿ
73.70 ಸ್ಟ್ರೈಕ್ ರೇಟ್
00 ಶತಕ
09 ಅರ್ಧಶತಕ

ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ)
ಒಡಿಐನಲ್ಲಿ ಸ್ಟೀವ್ ಸ್ಮಿತ್ ಸಾಧನೆ
115 ಪಂದ್ಯ
3713 ರನ್
164 ಗರಿಷ್ಠ
41.71 ಸರಾಸರಿ
86.73 ಸ್ಟ್ರೈಕ್ ರೇಟ್
08 ಶತಕ
22 ಅರ್ಧಶತಕ

ರಾಸ್ ಟೇಲರ್ (ನ್ಯೂಜಿಲೆಂಡ್)
ಒಡಿಐನಲ್ಲಿ ರಾಸ್ ಟೇಲರ್ ಸಾಧನೆ
224 ಪಂದ್ಯ
8229 ರನ್
181* ಗರಿಷ್ಠ
48.12 ಸರಾಸರಿ
83.34 ಸ್ಟ್ರೈಕ್ ರೇಟ್
20 ಶತಕ
49 ಅರ್ಧಶತಕ

ಐಯಾನ್ ಮಾರ್ಗನ್ (ಇಂಗ್ಲೆಂಡ್)
ಒಡಿಐನಲ್ಲಿ ಐಯಾನ್ ಮಾರ್ಗನ್ ಸಾಧನೆ
229 ಪಂದ್ಯ
7251 ರನ್
148 ಗರಿಷ್ಠ
39.84 ಸರಾಸರಿ
91.28 ಸ್ಟ್ರೈಕ್‌ರೇಟ್
13 ಶತಕ
46 ಅರ್ಧಶತಕ

ಮೊಹಮ್ಮದ್ ಹಫೀಝ್ (ಪಾಕಿಸ್ತಾನ)
ಒಡಿಐನಲ್ಲಿ ಮೊಹಮ್ಮದ್ ಹಫೀಝ್ ಸಾಧನೆ
216 ಪಂದ್ಯ
6568 ರನ್
140* ಗರಿಷ್ಠ
33.00 ಸರಾಸರಿ
76.61 ಸ್ಟ್ರೈಕ್ ರೇಟ್
11 ಶತಕ
38 ಅರ್ಧಶತಕ

ಫಾಫ್ ಡು'ಪ್ಲೆಸಿಸ್ (ದಕ್ಷಿಣ ಆಫ್ರಿಕಾ)
ಒಡಿಐನಲ್ಲಿ ಫಾಫ್ ಡು'ಪ್ಲೆಸಿಸ್ ಸಾಧನೆ
141 ಪಂದ್ಯ
5311 ರನ್
185 ಗರಿಷ್ಠ
46.18 ಸರಾಸರಿ
88.25 ಸ್ಟ್ರೈಕ್ ರೇಟ್
11 ಶತಕ
34 ಅರ್ಧಶತಕ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications