
ಸೌಥಂಪ್ಟನ್, ಜೂನ್ 20: ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಹೆಬ್ಬೆರಳಿನ ಮೂಳೆ ಮುರಿತದ ಸಮಸ್ಯೆ ಎದುರಿಸಿ ವಿಶ್ವಕಪ್ ಟೂರ್ನಿಯಿಂದಲೇ ನಿರ್ಗಮಿಸಿರುವುದು ಟೀಮ್ ಇಂಡಿಯಾಗೆ ಭಾರಿ ಆಘಾತ ತಂದೊಡ್ಡಿರುವ ಬೆನ್ನಲ್ಲೇ ಇದೀಗ ಉದಯೋನ್ಮುಖ ಆಲ್‌ರೌಂಡರ್ ವಿಜಯ್ ಶಂಕರ್ ಕೂಡ ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ
ಅಫಘಾನಿಸ್ತಾನ ವಿರುದ್ಧ ಜೂನ್ 22ರಂದು ಇಲ್ಲಿನ ರೋಸ್ ಬೌಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ವಿಶ್ವಕಪ್ ಪಂದ್ಯದ ಸಲುವಾಗಿ ಟೀಮ್ ಇಂಡಿಯಾ ಬುಧವಾರ ನೆಟ್ಸ್ ಅಭ್ಯಾಸ ನಡೆಸುವ ವೇಳೆ ವಿಜಯ್ ಶಂಕರ್ ಗಾಯದ ಸಮಸ್ಯೆ ಎದುರಿಸಿದ್ದಾರೆ.
ಒಡಿಐ ಕ್ರಿಕೆಟ್‌ನ ನಂ.1 ಬೌಲರ್ ಜಸ್‌ಪ್ರೀತ್ ಬುಮ್ರಾ ಅವರ ಅಪಾಯಕಾರಿ ಯಾರ್ಕರ್ ಎಸೆತವು ವಿಜಯ್ ಶಂಕರ್ ಅವರ ಪಾದಕ್ಕೆ ಅಪ್ಪಳಿಸಿದ್ದು, ತಕ್ಷಣಕ್ಕೆ ವಿಜಯ್ ಭಾರಿ ನೋವಿನಿಂದ ನರಳಿದ್ದರು ಎಂದು ವರದಿಯಾಗಿದೆ. ತಂಡದ ವೈದ್ಯಾಧಿಕಾರಿಗಳ ಪ್ರಾಥಮಿಕ ವರದಿ ಪ್ರಕಾರ ಸದ್ಯಕ್ಕೆ ಯಾವುದೇ ಆತಂಕ ಇಲ್ಲವಾಗಿದೆ.
"ಹೌದು. ವಿಜಯ್ ನೋವಿನಿಂದ ನರಳಿದ್ದಾರೆ. ಆದರೆ ಸಂಜೆ ಹೊತ್ತಿಗೆ ನೋವು ಕಡಿಮೆಯಾಗಿದ್ದು ಚೇತರಿಸಿದ್ದಾರೆ. ಹೆಚ್ಚೇನು ಗಂಭೀರ ಸ್ವರೂಪದ ಗಾಯ ಸಂಭವಿಸಿಲ್ಲ ಎಂದು ಆಶಿಸುತ್ತೇವೆ,'' ಎಂದು ತಂಡದ ವೈದ್ಯಾಧಿಕಾರಿಗಳ ವಿಭಾಗಕ್ಕೆ ಹತ್ತಿರದ ಮೂಲಗಳು ಸುದ್ದಿ ಸಂಸ್ಥೆಗೆ ತಿಳಿಸಿವೆ.
ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿ ಪಂದ್ಯಶ್ರೇಷ್ಠ ಗೌರವ ಪಡೆದ ಶಿಖರ್ ಧವನ್, ಅದೇ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್ ಅವರ ಬೌಲಿಂಗ್‌ನಲ್ಲಿ ಎಡಗೈ ಹೆಬ್ಬರೆಳಿನ ಭಾಗಕ್ಕೆ ಬೌನ್ಸರ್ ಒಂದರಲ್ಲಿ ಭಾರಿ ಹೊಡೆತ ತಿಂದಿದ್ದರು. ಬಳಿಕ ಅವರ ಸ್ಥಾನದಲ್ಲಿ ಟೀಮ್ ಇಂಡಿಯಾ ಪರ 4ನೇ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ ವಿಶ್ವಕಪ್‌ಗೆ ಪದಾರ್ಪಣೆ ಮಾಡಿದ ವಿಜಯ್ ಶಂಕರ್, ಪಾಕಿಸ್ತಾನ ವಿರುದ್ಧ ಉಪಯುಕ್ತ ರನ್‌ಗಳ ಕಾಣಿಕೆ ನೀಡಿದರಲ್ಲದೆ, ಬೌಲಿಂಗ್‌ನಲ್ಲೂ ಎರಡು ವಿಕೆಟ್ ಉರುಳಿಸಿ ಒಂದು ಕ್ಯಾಚ್ ಕೂಡ ಪಡೆದು ಗಮನಾರ್ಹ ಪ್ರದರ್ಶನ ನೀಡಿದ್ದರು.
ಟೀಮ್ ಇಂಡಿಯಾಗೆ ಉಪಯುಕ್ತ ಸಲಹೆ ನೀಡಿದ ಹರ್ಭಜನ್ ಸಿಂಗ್!
ಇದೇ ವೇಳೆ ವೇಗಿ ಭುವನೇಶ್ವರ್ ಕುಮಾರ್ ಕೂಡ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಸ್ನಾಯು ಸೆಳೆತದ ಸಮಸ್ಯೆಗೆ ತುತ್ತಾಗಿದ್ದು, ಚೇತರಿಕೆಯ ಹಾದಿಯಲ್ಲಿದ್ದಾರೆ. ಹೀಗಿರುವಾಗ ವಿಜಯ್ ಶಂಕರ್ ಕೂಡ ಗಾಯಗೊಂಡರೆ ಟೀಮ್ ಇಂಡಿಯಾಗೆ ಭಾರಿ ಹಿನ್ನಡೆ ಎದುರಾಗಲಿದೆ. ಒಂದು ವೇಳೆ ಭುವನೇಶ್ವರ್ ಕುಮಾರ್ ಚೇತರಿಸಲು ವಿಫಲರಾದರೆ ಅವರ ಸ್ಥಾನಕ್ಕೆ ಕಾಯ್ದಿರಿಸಲ್ಪಟ್ಟ ಆಟಗಾರ ಎಡಗೈ ವೇಗಿ ಖಲೀಲ್ ಅಹ್ಮದ್ ತಂಡ ಸೇರಿಕೊಳ್ಳಲಿದ್ದಾರೆ. ಅನುಭವಿ ಇಶಾಂತ್ ಶರ್ಮಾ ಕೂಡ ಈ ಪಟ್ಟಿಯಲ್ಲಿದ್ದಾರೆ.