
ಮ್ಯಾನ್ಚೆಸ್ಟರ್, ಜೂನ್ 26: ದಾಖಲೆ ಮೇಲೆ ದಾಖಲೆ ನಿರ್ಮಿಸುತ್ತಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಮತ್ತೊಂದು ವಿಶ್ವದಾಖಲೆ ಬರೆಯಲು ಕೇವಲ 37 ರನ್ ಬೇಕಿದೆ. ಮ್ಯಾನ್ಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ಗುರುವಾರ (ಜೂನ್ 27) ನಡೆಯುವ ವೆಸ್ಟ್ ಇಂಡೀಸ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಕೊಹ್ಲಿಗೆ ವಿಶ್ವದಾಖಲೆ ನಿರ್ಮಿಸಲು ಅವಕಾಶವಿದೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ವೆಸ್ಟ್ ಇಂಡೀಸ್ ವಿರುದ್ಧ ಕೊಹ್ಲಿಯೇನಾದರೂ 37 ರನ್ ಬಾರಿಸಿದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 20,000 ರನ್ ಬಾರಿಸಿದ ಆಟಗಾರರಾಗಿ ಗುರುತಿಸಿಕೊಳ್ಳಲಿದ್ದಾರೆ. ಅಷ್ಟೇ ಅಲ್ಲ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗವಾಗಿ 20,000 ರನ್ ಪೂರೈಸಿದ ಹಿರಿಮೆಯೂ ಭಾರತದ ನಾಯಕನದ್ದಾಗಲಿದೆ.
ಸದ್ಯ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 19,963 ರನ್ ಸಂಪಾದಿಸಿದ್ದಾರೆ. ಇನ್ನು 37 ರನ್ ಲಭಿಸಿದರೆ, ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 20,000 ರನ್ ಪೂರೈಸಿದ ವಿಶ್ವದ 12ನೇ ಆಟಗಾರರಾಗಿ ಮತ್ತು ಭಾರತದ 3ನೇ ಆಟಗಾರರಾಗಿ ಕೊಹ್ಲಿ ದಾಖಲೆ ನಿರ್ಮಿಸಲಿದ್ದಾರೆ. ಈ ಮೊದಲು ಭಾರತದ ಪರ ಸಚಿನ್ ತೆಂಡೂಲ್ಕರ್ (34,357 ರನ್) ಮತ್ತು ಕನ್ನಡಿಗ ರಾಹುಲ್ ದ್ರಾವಿಡ್ (24,208 ರನ್) ಈ ಸಾಧನೆ ಮಾಡಿದ್ದರು.
ಕೊಹ್ಲಿ ಅಂತಾರಾಷ್ಟ್ರೀಯ ಏಕದಿನದಲ್ಲಿ 11087 ರನ್, ಟೆಸ್ಟ್ ನಲ್ಲಿ 6613 ರನ್ ಮತ್ತು ಅಂತಾಷ್ಟ್ರೀಯ ಟಿ20ಗಳಲ್ಲಿ 2263 ರನ್ ಕಲೆ ಹಾಕಿದ್ದಾರೆ. ಅಂತಾರಾಷ್ಟ್ರೀಯ 20,000 ರನ್ ಬಾರಿಸಲು ಸಚಿನ್ ಮತ್ತು ವೆಸ್ಟ್ ಇಂಡೀಸ್‌ನ ಬ್ರಿಯಾನ್ ಲಾರಾಗೆ 453 ಇನ್ನಿಂಗ್ಸ್‌ಗಳು ಬೇಕಾಗಿದ್ದವು.
ಕೊಹ್ಲಿ 131 ಟೆಸ್ಟ್, 223 ಏಕದಿನ ಮತ್ತು 62 ಟಿ20 ಇನ್ನಿಂಗ್ಸ್‌ಗಳು ಸೇರಿ ಈವರೆಗೆ ಒಟ್ಟು 416 ಅಂತಾರಾಷ್ಟ್ರೀಯ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಸಚಿನ್, ಲಾರಾ ಬಿಟ್ಟರೆ ಅಂತಾರಾಷ್ಟ್ರೀಯ ವೇಗದ 20 ಸಾವಿರ ರನ್ ಸಾಧನೆಯಲ್ಲಿ ತೃತೀಯ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಈ ಸಾಧನೆಗಾಗಿ 468 ಇನ್ನಿಂಗ್ಸ್ ಬಳಸಿಕೊಂಡಿದ್ದರು.