ಸೋಮವಾರ, ನವೆಂಬರ್ 6ರಂದು ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನ 38ನೇ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶ ತಂಡ 3 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತು.
ಗಮನಾರ್ಹವಾಗಿ, ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಶ್ರೀಲಂಕಾ ತಂಡದ ವಿರುದ್ಧ ಬಾಂಗ್ಲಾದೇಶ ತಂಡ ಚೊಚ್ಚಲ ಬಾರಿಗೆ ಗೆಲುವು ದಾಖಲಿಸಿತು.
ಈ ಪಂದ್ಯದ ಸೋಲಿನ ಮೂಲಕ ಶ್ರೀಲಂಕಾ ತಂಡ ಅಧಿಕೃತವಾಗಿ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯಿಂದ ಹೊರಬಿದ್ದಿದೆ. ಇನ್ನು ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೂ, ಈಗಾಗಲೇ ಬಾಂಗ್ಲಾದೇಶ ತಂಡ ವಿಶ್ವಕಪ್ ಟೂರ್ನಿಯಿಂದ ಔಟ್ ಆಗಿತ್ತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ಚರಿತ್ ಅಸಲಂಕಾ ಅವರ ಭರ್ಜರಿ ಶತಕದ ನೆರವಿನಿಂದ ನಿಗದಿತ 49.3 ಓವರ್‌ಗಳಲ್ಲಿ279 ರನ್‌ಗಳಿಗೆ ಸರ್ವಪತನ ಕಂಡಿತು.
280 ರನ್‌ಗಳ ಕಠಿಣ ಗೆಲುವಿನ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ತಂಡ ನಜ್ಮುಲ್ ಹೊಸೈನ್ ಶಾಂಟೊ ಹಾಗೂ ಶಕೀಬ್ ಅಲ್ ಹಸನ್ ಅವರ ಭರ್ಜರಿ ಅರ್ಧಶತಕಗಳ ನೆರವಿನಿಂದ 41.1 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು ಗೆಲುವಿನ ಗಡಿ ತಲುಪಿತು.
ಈ ಪಂದ್ಯದ ನಂತರ ಉಭಯ ತಂಡಗಳು ಆಡಿದ 8 ಪಂದ್ಯಗಳಲ್ಲಿ ತಲಾ 2 ಗೆಲುವು ಮತ್ತು 6 ಸೋಲುಗಳೊಂದಿಗೆ ತಲಾ 4 ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ ಬಾಂಗ್ಲಾದೇಶ ತಂಡ 7ನೇ ಸ್ಥಾನದಲ್ಲಿದ್ದರೆ, ಶ್ರೀಲಂಕಾ 8ನೇ ಸ್ಥಾನದಲ್ಲಿದ್ದಾರೆ.
ಬಾಂಗ್ಲಾದೇಶ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ತಂಝಿದ್ ಹಸನ್ 9 ರನ್ ಗಳಿಸಿ ಔಟಾದರೆ, ಲಿಟ್ಟನ್ ದಾಸ್ 23 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ನಂತರ ಜೊತೆಯಾದ ನಜ್ಮುಲ್ ಹೊಸೈನ್ ಶಾಂಟೊ ಮತ್ತು ಶಕೀಬ್ ಅಲ್ ಹಸನ್ ಮೂರನೇ ವಿಕೆಟ್‌ಗೆ 169 ರನ್‌ಗಳ ಜೊತೆಯಾಟ ನಿರ್ಮಿಸಿ ತಂಡದ ಗೆಲುವಿಗೆ ಮುನ್ನುಡಿ ಬರೆದರು.
ಶಕೀಬ್ ಅಲ್ ಹಸನ್ 65 ಎಸೆತಗಳಲ್ಲಿ 12 ಬೌಂಡರಿ ಹಾಗೂ 2 ಸಿಕ್ಸರ್‌ಗಳ ಮೂಲಕ 82 ರನ್ ಗಳಿಸಿದರೆ, ನಜ್ಮುಲ್ ಹೊಸೈನ್ ಶಾಂಟೊ 101 ಎಸೆತಗಳಲ್ಲಿ 12 ಬೌಂಡರಿಗಳ ಸಮೇತ 90 ರನ್ ಬಾರಿಸಿ ಇಬ್ಬರೂ ಬ್ಯಾಟರ್‌ಗಳು ಏಂಜೆಲೊ ಮ್ಯಾಥ್ಯೂಸ್‌ಗೆ ವಿಕೆಟ್ ಒಪ್ಪಿಸಿದರು.
ನಂತರ ಬಂದ ಮುಹಮ್ಮದುಲ್ಲಾ 22 ರನ್, ಮುಶ್ಫಿಕರ್ ರಹೀಂ 10 ರನ್, ತೌಹೀದ್ ಹೃದೋಯ್ 15 ರನ್, ಮಹಿದಿ ಹಸನ್ ಮಿರಾಜ್ 3 ರನ್ ಮತ್ತು ತಂಝಿಮ್ ಹಸನ್ ಸಕಿಬ್ 5 ರನ್ ಗಳಿಸಿ ತಂಡವನ್ನು ಗೆಲ್ಲಿಸಿದರು.
ಶ್ರೀಲಂಕಾ ತಂಡದ ಪರ ಬೌಲಿಂಗ್‌ನಲ್ಲಿ ದಿಲ್ಶಾನ್ ಮಧುಶಂಕ 10 ಓವರ್‌ಗಳಲ್ಲಿ 69 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ಮಹೀಶ್ ತೀಕ್ಷಣ 9 ಓವರ್‌ಗಳಲ್ಲಿ 44 ರನ್ ನೀಡಿ 2 ವಿಕೆಟ್ ಪಡೆದರು. ಇನ್ನು ಏಂಜೆಲೊ ಮ್ಯಾಥ್ಯೂಸ್ 7.1 ಓವರ್‌ಗಳಲ್ಲಿ 35 ರನ್ ನೀಡಿ 2 ವಿಕೆಟ್ ಪಡೆದರು.

ಇದಕ್ಕೂ ಮುನ್ನ ಶ್ರೀಲಂಕಾದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಪಾಥುಮ್ ನಿಸ್ಸಾಂಕ ಮತ್ತು ಕುಸಲ್ ಪೆರೇರಾ ಉತ್ತಮ ಆರಂಭ ಒದಗಿಸಲು ವಿಫಲರಾದರು. ತಂಡದ 5 ರನ್‌ಗಳಾಗಿದ್ದಾಗ ಕುಸಲ್ ಪೆರೇರಾ ಕೇವಲ 4 ರನ್ ಗಳಿಸಿ ಔಟಾದರು.
ನಂತರ ಬಂದ ನಾಯಕ ಕುಸಲ್ ಮೆಂಡೀಸ್ ಜೊತೆ ಸೇರಿ ಪಾಥುಮ್ ನಿಸ್ಸಾಂಕ ಎರಡನೇ ವಿಕೆಟ್‌ಗೆ 61 ರನ್‌ಗಳ ಜೊತೆಯಾಟ ನೀಡಿದರು. ಈ ವೇಳೆ ಕುಸಲ್ ಮೆಂಡೀಸ್ 19 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಅನಂತರ ಪಾಥುಮ್ ನಿಸ್ಸಾಂಕ 36 ಎಸೆತಗಳಲ್ಲಿ 8 ಬೌಂಡರಿ ಸಮೇತ 41 ರನ್ ಔಟಾದರು.
ಮಧ್ಯಮ ಕ್ರಮಾಂಕದಲ್ಲಿ ಸದೀರ ಸಮರವಿಕ್ರಮ 42 ಎಸೆತಗಳಲ್ಲಿ 4 ಬೌಂಡರಿಗಳ ಮೂಲಕ 41 ರನ್ ಗಳಿಸಿ ತಂಡಕ್ಕೆ ನೆರವಾದರು. ನಂತರ ಬಂದ ಏಂಜೆಲೊ ಮ್ಯಾಥ್ಯೂಸ್ ಒಂದೂ ಎಸೆತ ಎದುರಿಸದೇ ಟೈಮ್ಡ್ ಔಟ್ ಮೂಲಕ ಹೊರನಡೆಯಬೇಕಾಯಿತು.

ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ನೆಲಕಚ್ಚಿ ಆಡಿದ ಚರಿತ್ ಅಸಲಂಕಾ 105 ಎಸೆತಗಳಲ್ಲಿ 6 ಬೌಂಡರಿ ಹಾಗೂ 5 ಸಿಕ್ಸರ್ ಸಮೇತ 106 ರನ್ ಬಾರಿಸಿ ಕೊನೆಯಲ್ಲಿ ಔಟಾದರು. ಇವರಿಗೆ ಸಾಥ್ ನೀಡಿದ ಧನಂಜಯ್ ಡಿ ಸಿಲ್ವಾ 36 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ 34 ರನ್ ಗಳಿಸಿದರು.
ಉಳಿದಂತೆ ಮಹೀಶ್ ತೀಕ್ಷಣ 31 ಎಸೆತಗಳಲ್ಲಿ 3 ಬೌಂಡರಿಗಳ ನೆರವಿನಿಂದ 22 ರನ್ ಗಳಿಸಿದರೆ, ದುಶ್ಮಂತ್ ಚಮೀರ 4 ರನ್ ಗಳಿಸಿದರು.
ಬೌಲಿಂಗ್‌ನಲ್ಲಿ ಬಾಂಗ್ಲಾದೇಶ ತಂಡದ ಪರ ತಂಝಿಮ್ ಹಸನ್ ಸಕಿಬ್ 10 ಓವರ್‌ಗಳಲ್ಲಿ 80 ರನ್ ನೀಡಿ 3 ವಿಕೆಟ್ ಪಡೆದರೆ, ಶಕೀಬ್ ಅಲ್ ಹಸನ್ 10 ಓವರ್‌ಗಳಲ್ಲಿ 57 ರನ್ ನೀಡಿ 2 ವಿಕೆಟ್ ಕಬಳಿಸಿದರೆ, ಶೋರಿಫುಲ್ ಇಸ್ಲಾಂ 9.3 ಓವರ್‌ಗಳಲ್ಲಿ 52 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ಮಹಿದಿ ಹಸನ್ ಮಿರಾಜ್ ಒಂದು ವಿಕೆಟ್ ತಮ್ಮದಾಗಿಸಿಕೊಂಡರು.