ವೆಸ್ಟ್ ಇಂಡೀಸ್‌ನ ದಿಗ್ಗಜ ಕ್ರಿಕೆಟಿಗ ಕ್ರಿಸ್ ಗೇಲ್ ವಿಶ್ವಕಪ್ ಟೂರ್ನಿಯ ಹಿನ್ನೆಲೆಯಲ್ಲಿ ಮಾಜಿ ಆರ್‌ಸಿಬಿ ಸಹಪಾಠಿ ಆಪ್ತ ಗೆಳೆಯ ವಿರಾಟ್ ಕೊಹ್ಲಿ ಬಗ್ಗೆ ಭಾರೀ ವಿಶ್ವಾಸದ ಮಾತುಗಳನ್ನಾಡಿದ್ದಾರೆ. ಈ ವರ್ಷ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಅಬ್ಬರಿಸಲಿದ್ದಾರೆ ಎಂದು ಕ್ರಿಸ್ ಗೇಲ್ ಭವಿಷ್ಯ ನುಡಿದಿದ್ದಾರೆ. ಅಕ್ಟೋಬರ್ 5 ರಿಂದ ಆರಂಭವಾಗಲಿರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ತಮ್ಮ ಫಾರ್ಮ್‌ನ ಅತ್ಯುನ್ನತ ಮಟ್ಟಕ್ಕೆ ತಲುಪಲಿದ್ದಾರೆ ಎಂದು ಗೇಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿರಾಟ್ ಕೊಹ್ಲಿ ಈ ವರ್ಷ ಅತ್ಯುತ್ತಮ ಫಾರ್ಮ್‌ನಲ್ಲಿದ್ದು ಕಳೆದ ಐಪಿಎಲ್ ಆವೃತ್ತಿಯಲ್ಲಿ 14 ಪಂದ್ಯಗಳಲ್ಲಿ ಎರಡು ಶತಕಗಳ ಸಹಿತ 639 ರನ್‌ಗಳನ್ನು ಬಾರಿಸಿದರು. ಕಳೆದ ಎಲ್ಲಾ ಮಾದರಿಯಲ್ಲಿಯೂ ಫಾರ್ಮ್ ಕಂಡುಕೊಳ್ಳಲು ಹೆಣಗಾಡುತ್ತಿದ್ದ ವಿರಾಟ್ ಕೊಹ್ಲಿ ಬಳಿಕ ಫಾರ್ಮ್ ಕಂಡುಕೊಂಡು ಮತ್ತೆ ಹಿಂದಿನ ಲಯಕ್ಕೆ ಮರಳಿ ಅದ್ಭುತ ಪ್ರದರ್ಶನ ನಿಡುತ್ತಿದ್ದಾರೆ. ಕಳೆದ ಡಿಸೆಂಬರ್ ಚಟ್ಟೋಗ್ರಾಮ್‌ನಲ್ಲಿ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ 2 ವರ್ಷಗಳ ನಂತರ ಏಕದಿನ ಮಾದರಿಯಲ್ಲಿ ಶತಕ ಸಿಡಿಸಿ ಏಕದಿನ ಮಾದರಿಯ ಶತಕದ ಬರ ನೀಗಿಸಿಕೊಂಡಿದ್ದರು.

ಅದಾದ ಬಳಿಕ ಟೀಮ್ ಇಂಡಿಯಾದಮಾಜಿ ನಾಯಕ ಕೇವಲ 9 ಪಂದ್ಯಗಳಲ್ಲಿ 2 ಶತಕಗಳನ್ನು ಬಾರಿಸಿದ್ದು 53.37 ಸರಾಸರಿಯಲ್ಲಿ 427 ರನ್ ಗಳಿಸಿದ್ದಾರೆ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ 113 ರನ್ ಬಾರಿಸುವ ಮೂಲಕ ಈ ವರ್ಷವನ್ನು ಭರ್ಜರಿಯಾಗಿ ಪ್ರಾರಂಭಿಸಿದ ಕೊಹ್ಲಿ ನಂತರ ತಿರುವನಂತಪುರದಲ್ಲಿ ಲಂಕಾ ವಿರುದ್ಧವೇ ನಡೆದ ಪಂದ್ಯದಲ್ಲಿ 166 ರನ್ ಗಳಿಸಿದರು. ಇನ್ನು ಐಪಿಎಲ್ 2023ರ ಟೂರ್ನಿಯ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಅರ್ಧ ಶತಕವನ್ನು ಕೂಡ ಬಾರಿಸಿದ್ದಾರೆ ಕೊಹ್ಲಿ. ಆದರೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಇಂಥಾ ಪ್ರದರ್ಶನ ನೀಡಲು ಕೊಹ್ಲಿಗೆ ಸಾಧ್ಯವಾಗದಿರಿವುದು ಅಭಿಮಾನಿಗಳಲ್ಲಿಯೂ ನಿರಾಸೆ ಮೂಡಿಸಿದೆ.
"ಕಠಿಣ ಸಮಯಗಳು ಹೆಚ್ಚು ಕಾಲ ಉಳಿಯುವುದಿಲ್ಲ ಕಠಿಣ ಆಟಗಾರರು ಹೆಚ್ಚು ಕಾಲ ಉಳಿಯುತ್ತಾರೆ. ವಿರಾಟ್ ಮಾನಸಿಕವಾಗಿ ಹಾಗೂ ದೈಹಿಕಾಗಿ ಬಲಿಷ್ಠ ಆಟಗಾರ. ವಿಶ್ವಕಪ್‌ನಲ್ಲಿ ಆತ ಅಬ್ಬರಿಸದೆ ಇರಲು ಯಾವುದೇ ಕಾರಣಗಳು ಕೂಡ ನನಗೆ ಕಾಣಿಸುತ್ತಿಲ್ಲ" ಎಂದು ಹೇಳುವ ಮೂಲಕ ವಿರಾಟ್ ಕೊಹ್ಲಿಯ ಬಗ್ಗೆ ಸಾಕಷ್ಟು ವಿಶ್ವಾಸದ ಮಾತುಗಳನ್ನಾಡಿದ್ದಾರೆ ವೆಸ್ಟ್ ಇಂಡೀಸ್ ತಂಡದ ದಿಗ್ಗಜ ಆಟಗಾರ ಕ್ರಿಸ್ ಗೇಲ್.
"ಆಟಗಾರರಾಗಿ ಕೆಲ ಸಂದರ್ಭಗಳಲ್ಲಿ ನಾವು ಕಠಿಣವಾದ ಕ್ಷಣಗಳನ್ನು ಎದುರಿಸುತ್ತೇವೆ. ಅಂಥಾ ಸಂದರ್ಭದಲ್ಲಿ ನಿಮಗೆ ಬಲ ತುಂಬಲು ಧನಾತ್ಮಕ ಶಕ್ತಿಯ ಅಗತ್ಯವಿರುತ್ತದೆ. ಒಮ್ಮೆ ನಾವು ಲಯಕ್ಕೆ ಮರಳಿದರೆ ನಾವು ಎಷ್ಟು ಅಪಾಯಕಾರಿ ಎಂದು ನಮಗೆ ಗೊತ್ತಿದೆ" ಎಂದು ಕ್ರಿಸ್ ಗೇಲ್ ಪಿಟಿಐಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಕ್ರಿಸ್ ಗೇಲ್ ಭಾರತ ತಂಡ ಈ ಬಾರಿ ತವರಿನಲ್ಲೇ ವಿಶ್ವಕಪ್ ಟೂರ್ನಿ ನಡೆಯುವ ಕಾರಣ ಸಾಕಷ್ಟು ಒತ್ತಡದಲ್ಲಿರುತ್ತದೆ ಎಂದಿದ್ದಾರೆ. 2011ರಲ್ಲಿ ಕೊನೆಯ ಬಾರಿಗೆ ವಿಶ್ವಕಪ್ ಟೂರ್ನಿ ಭಾರತದಲ್ಲಿ ನಡೆದಿದ್ದಾಗ ಎಂಎಸ್ ಧೋನಿ ನೇತೃತ್ವದಲ್ಲಿ ಟೀಮ್ ಇಂಡಿಯಾ ವಿಶ್ವಕಪ್ ಟ್ರೋಫಿ ಗೆದ್ದುಕೊಂಡಿತ್ತು. ನಂತರ 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಬಳಿಕ ಭಾರತ ತಂಡ ಐಸಿಸಿ ಟೂರ್ನಿಗಳಲ್ಲಿ ಟ್ರೋಫಿ ಗೆಲ್ಲಲು ಸತತವಾಗಿ ವಿಫಲವಾಗುತ್ತಲೇ ಇದೆ.
ಅದಾದ ನಂತರ ನಡೆದ 2014ರ ಟಿ20 ವಿಶ್ವಕಪ್‌ನಲ್ಲಿ ಭಾರತ ಫೈನಲ್‌ಗೆ ಪ್ರವೇಶಿಸಿ ಸೋಲು ಕಂಡಿದ್ದರೆ 2017ರ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿಯೂ ಸೋಲು ಕಂಡಿತ್ತು. ಬಳಿಕ 2021 ಹಾಗೂ 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿಯೂ ಭಾರತ ಸೋಲು ಕಂಡಿದೆ. ಹೀಗಾಗಿ ಐಸಿಸಿ ಟೂರ್ನಿಯಲ್ಲಿ ಈ ಸತತ ಹಿನ್ನಡೆಗೆ ಅಂತ್ಯ ಹಾಡುವ ನಿರೀಕ್ಷೆ ಭಾರತದ ಮೇಲಿದೆ.