ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ದಾಖಲೆಯ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಪರವಾಗಿ ಬ್ಯಾಟಿಂಗ್‌ನಲ್ಲಿ ವಾರ್ನರ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಅಬ್ಬರದ ಶತಕ ಸಿಡಿಸಿದ್ದಾರೆ. ಈ ಮೂಲಕ ಗ್ಲೆನ್ ಮ್ಯಾಕ್ಸ್‌ವೆಲ್ ವಿಶ್ವಕಪ್ ಇತಿಹಾಸದ ಅತ್ಯಂತ ವೇಗದ ಶತಕ ಸಿಡಿಸಿ ದಾಖಲೆ ಬರೆದರೆ ವಾರ್ನರ್ ವಿಶ್ವಕಪ್ ಟೂರ್ನಿಯಲ್ಲಿ 6ನೇ ಶತಕವನ್ನು ಸಿಡಿಸಿ ಸಚನ್ ತೆಂಡೂಲ್ಕರ್ ಸಾಧನೆ ಸರಿಗಟ್ಟಿದ್ದಾರೆ.
ಈ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಸ್ಪೋಟಕ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಪ್ರತಿಕ್ರಿಯೆ ನೀಡಿದ್ದು ವಿಶ್ವಕಪ್‌ನಲ್ಲಿ 6 ಶತಕ ಸಿಡಿಸಿದ ದಾಖಲೆ ಹೊಂದಿರುವ ಸಚಿನ್ ತೆಂಡೂಲ್ಕರ್ ಹಾಗೂ ಆಸ್ಟ್ರೇಲಿಯಾ ಪರ ವಿಶ್ವಕಪ್‌ನಲ್ಲಿ ಈ ಹಿಂದೆ ಅತಿ ಹೆಚ್ಚು ಶತಕ ಸಿಡಿಸಿದ ದಾಖಲೆ ಹೊಂದಿದ್ದ ರಿಕಿ ಪಾಂಟಿಂಗ್ ಬಗ್ಗೆ ಮಾತನಾಡಿದ್ದು ಅವರಿಬ್ಬರೂ ದಿಗ್ಗಜರು ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಕ್ರಿಕೆಟ್ ವಿಶ್ವಕಪ್‌ನಂತಹ ಜಾಗತಿಕ ವೇದಿಕೆಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ವಾರ್ನರ್ ಗಮನಸೆಳೆದಿದ್ದಾರೆ. ಭಾರತದಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯ ಐದನೇ ಪಂದ್ಯದಲ್ಲಿ ವಾರ್ನರ್ ನೆದರ್ಲೆಂಡ್ಸ್ ವಿರುದ್ಧ ತಮ್ಮ ಆರನೇ ವಿಶ್ವಕಪ್ ಶತಕವನ್ನು ಸಿಡಿಸಿದರು. ಇನ್ನು ಈ ವಿಶ್ವಕಪ್‌ನಲ್ಲಿ ಇದು ಅವರ ಎರಡನೇ ಶತಕವಾಗಿದೆ. ಇದಕ್ಕೂ ಮುನ್ನ ಹೈದರಾಬಾದ್‌ನಲ್ಲಿ ಪಾಕಿಸ್ತಾನ ವಿರುದ್ಧ 163 ರನ್ ಸಿಡಿಸಿದ ವಾರ್ನರ್, ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಕೇವಲ 91 ಎಸೆತಗಳಲ್ಲಿ 11 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ ಸತತ ಎರಡನೇ ಶತಕವನ್ನು ಸಿಡಿಸಿದ್ದಾರೆ.
"ಇಲ್ಲಿ ನಾನು ಮೈದಾನಕ್ಕಿಳಿದು ನನ್ನ ಅತ್ಯುತ್ತಮ ಪ್ರದರ್ಶನ ನೀಡುವುದು ಮುಖ್ಯವಾಗಿದೆ. ನಾಲ್ಕು ವರ್ಷಗಳೊಗೊಮ್ಮೆ ನಡೆಯುವ ಈ ವಿಶ್ವಕಪ್‌ಗಾಗಿ ನಾವು ಕಾಯುತ್ತಿರುತ್ತೇವೆ. ಇಂಥಾ ವೇದಿಕೆ ದೊರೆತಾಗ ಅದರಲ್ಲಿ ಮಿಂಚಬೇಕು. ದ್ವಿಪಕ್ಷೀಯ ಸರಣಿಗಳಲ್ಲಿ ನಾನು ಯಾವ ರೀತಿಯ ಪ್ರದರ್ಶನ ನೀಡಿತ್ತೇನೆಯೋ ಅಂಥಾದ್ದೇ ಪ್ರದರ್ಶನವನ್ನು ಇಲ್ಲಿಯೂ ನೋಡಲು ಬಯಸುತ್ತೇನೆ"ಎಂದಿದ್ದಾರೆ ಡೇವಿಡ್ ವಾರ್ನರ್.
ಇನ್ನು ಈ ಪಂದ್ಯದಲ್ಲಿ ವಾರ್ನರ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಸ್ಪೋಟಕ ಶತಕದ ಕಾರಣದಿಂದಾಗಿ ಆಸ್ಟ್ರೇಲಿಯಾ ತಂಡ ಭರ್ಜರಿ 399 ರನ್‌ಗಳನ್ನು ಕಲೆಹಾಕಿತ್ತು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ನಡೆಸಿದ ನೆದರ್ಲೆಂಡ್ಸ್ ತಂಡ ಕೇವಲ 90 ರನ್‌ಗಳಿಗೆ ಆಲೌಟ್ ಆಗಿದೆ. ಈ ಮೂಲಕ 309 ರನ್‌ಗಳ ಅಂತರದಿಂದ ಆಸ್ಟ್ರೇಲಿಯಾ ಈ ಪಂದ್ಯದಲ್ಲಿ ಗೆಲುವು ಸಾಧಿಸಿದೆ.
"ಸಚಿನ್ ತೆಂಡೂಲ್ಕರ್, ರಿಕಿ ಪಾಂಟಿಂಗ್ ಅವರೊಂದಿಗೆ ಒಂದೇ ವಿಭಾಗದಲ್ಲಿ ಗುರುತಿಸಿಕೊಳ್ಳುವುದು ನಿಜಕ್ಕೂ ಶ್ರೇಷ್ಠ ಅನುಭವ. ಸಚಿನ್ ತೆಂಡೂಲ್ಕರ್ ಹಾಗೂ ರಿಕಿ ಪಾಂಟಿಂಗ್ ಅವರನ್ನು ನೋಡಿಕೊಂಡೇ ಬೆಳೆದವರು ನಾವು. ಅವರಿಬ್ಬರೂ ಕ್ರಿಕೆಟ್‌ನ ದಿಗ್ಗಜರು. ಈ ಕ್ಷಣದಲಿ ನಾನು ಇದನ್ನು ಆನಂದಿಸಲು ಬಯಸುತ್ತೇನೆ. ಮುಂದೆ 20-30 ವರ್ಷಗಳಲ್ಲಿ ನಾನು ಕುಳಿದು ಇದನ್ನು ಆನಂದಿಸಬಹುದು"ಎಂದಿದ್ದಾರೆ ವಾರ್ನರ್.