World Cup 2023: ಶ್ರೀಲಂಕಾ ವಿರುದ್ಧ ಸೋತ ನಂತರ ವಿಶ್ವಕಪ್ ರೇಸ್‌ನಿಂದ ಹಾಲಿ ಚಾಂಪಿಯನ್ ಇಂಗ್ಲೆಂಡ್ ಔಟ್?!
ಗುರುವಾರ, ಅಕ್ಟೋಬರ್ 26ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನ 25ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವು ಶ್ರೀಲಂಕಾ ವಿರುದ್ಧ 8 ವಿಕೆಟ್‌ಗಳ ಹೀನಾಯ ಮುಖಭಂಗ ಅನುಭವಿಸಿದೆ.
ಶ್ರೀಲಂಕಾ ವಿರುದ್ಧದ ಸೋಲಿನ ನಂತರ ಜೋಸ್ ಬಟ್ಲರ್ ನಾಯಕತ್ವದ ಇಂಗ್ಲೆಂಡ್ ತಂಡವು 2023ರ ಏಕದಿನ ವಿಶ್ವಕಪ್‌ನಿಂದ ಬಹುತೇಕ ಹೊರಬಿದ್ದಿದೆ. ಪವಾಡ ನಡೆದಲ್ಲಿ ಮಾತ್ರ ಹಾಲಿ ಚಾಂಪಿಯನ್ ಸೆಮಿಫೈನಲ್‌ಗೆ ಪ್ರವೇಶ ಪಡೆಯಲಿದೆ. ವಿಶ್ವಕಪ್ ಪಂದ್ಯಾವಳಿಗೂ ಮುನ್ನ ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿ ಪ್ರವೇಶಿಸಿದ್ದ ತಂಡದ ನಿರ್ಗಮನವು ಆಘಾತಕಾರಿಯಾಗಿದೆ.

ಶ್ರೀಲಂಕಾ ವಿರುದ್ಧ ಎಂಟು ವಿಕೆಟ್‌ಗಳ ಸೋಲಿನಿಂದಾಗಿ ಇಂಗ್ಲೆಂಡ್ ತಂಡವು 2023ರ ಏಕದಿನ ವಿಶ್ವಕಪ್ ಪಾಯಿಂಟ್‌ಗಳ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನಕ್ಕೆ ಕುಸಿದಿದೆ.
ಐದು ಪಂದ್ಯಗಳಲ್ಲಿ ಬಾಂಗ್ಲಾದೇಶದ ವಿರುದ್ಧ ಏಕೈಕ ಗೆಲುವು ಸಾಧಿಸಿರುವ ಇಂಗ್ಲೆಂಡ್ ಕೇವಲ ಎರಡು ಅಂಕಗಳನ್ನು ಹೊಂದಿದ್ದಾರೆ. ತಲಾ ಎರಡು ಅಂಕಗಳನ್ನು ಹೊಂದಿರುವ ನೆದರ್ಲ್ಯಾಂಡ್ಸ್ ಮತ್ತು ಬಾಂಗ್ಲಾದೇಶ ತಂಡದೊಂದಿಗೆ ಸಮಾನವಾಗಿದೆ.
ಈವರೆಗೆ ಆಡಿದ ಐದು ಪಂದ್ಯಗಳಲ್ಲಿ ಕೇವಲ ಒಂದು ಗೆಲುವು ಮಾತ್ರ ಕಂಡಿದೆ ಮತ್ತು ಉಳಿದ ನಾಲ್ಕು ಲೀಗ್-ಹಂತದ ಪಂದ್ಯಗಳು ಭಾರತ, ಆಸ್ಟ್ರೇಲಿಯಾ, ನೆದರ್ಲ್ಯಾಂಡ್ಸ್ ಮತ್ತು ಪಾಕಿಸ್ತಾನ ತಂಡಗಳ ವಿರುದ್ಧ ಆಡಬೇಕಿದೆ.

ಇಂಗ್ಲೆಂಡ್ ತಂಡವು ನೆದರ್ಲ್ಯಾಂಡ್ಸ್ ತಂಡವನ್ನು ಸೋಲಿಸಬಹುದು. ಆದರೆ, ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳನ್ನು ಸೋಲಿಸುವುದು ಅವರಿಗೆ ಸವಾಲಿನ ಸಂಗತಿಯಾಗಿದೆ. ಜೋಸ್ ಬಟ್ಲರ್ ಪಡೆಗೆ ಪಾಕಿಸ್ತಾನ ಕೂಡ ಕಠಿಣ ಎದುರಾಳಿಯಾಗಲಿದೆ.
ಇಂಗ್ಲೆಂಡ್ ತಂಡ ತನ್ನ ಮುಂದಿನ ನಾಲ್ಕು ಪಂದ್ಯಗಳನ್ನು ಗೆಲ್ಲಲಿದೆ ಎಂದು ಭಾವಿಸಿದರೆ, ಹಾಲಿ ಚಾಂಪಿಯನ್ಸ್ ತಮ್ಮ ಹೆಸರಿಗೆ 10 ಅಂಕಗಳನ್ನು ಹೊಂದಿರುತ್ತಾರೆ.
2019ರ ವಿಶ್ವಕಪ್ ಅಂಕಗಳ ಪಟ್ಟಿಯಿಂದ ನಿರ್ಣಯಿಸುವುದಾದರೆ, ಈ ವಿಶ್ವಕಪ್‌ನ ಅಂಕಪಟ್ಟಿಯಲ್ಲಿ ಅಗ್ರ 4ರಲ್ಲಿ ಸ್ಥಾನ ಪಡೆಯಲು ಇಂಗ್ಲೆಂಡ್ ತಂಡಕ್ಕೆ 10 ಅಂಕಗಳು ಸಾಕಾಗುವುದಿಲ್ಲ. 12 ಸುರಕ್ಷಿತ ಅಂಕಗಳಾಗಿವೆ. ಆದರೆ ಇತರ ಫಲಿತಾಂಶಗಳು ಇಂಗ್ಲೆಂಡ್ ಅಂದುಕೊಂಡ ರೀತಿಯಲ್ಲಿ ನಡೆದರೆ ಮಾತ್ರ, ಮುಂದಿನ ಸುತ್ತಿಗೆ ಪ್ರವೇಶಿಸಬಹುದು.
2023ರ ವಿಶ್ವಕಪ್ ಪಾಯಿಂಟ್‌ಗಳ ಪಟ್ಟಿಯಲ್ಲಿ ಇಂಗ್ಲೆಂಡ್ ತಂಡಕ್ಕೆ 4ನೇ ಸ್ಥಾನ ಪಡೆಯುವ ಅಸಂಭವ ಅವಕಾಶವಿದೆ.
ಭಾರತ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಪಂದ್ಯಾವಳಿಯಲ್ಲಿ ತಮ್ಮ ಪ್ರಾಬಲ್ಯವನ್ನು ಮುಂದುವರಿಸಬೇಕೆಂದು ಇಂಗ್ಲೆಂಡ್ ಆಶಿಸಬೇಕಾಗಿದೆ.
ಇಂಗ್ಲೆಂಡ್ ತಂಡದ ವಿಶ್ವಕಪ್ ಸೆಮಿಫೈನಲ್ ಅರ್ಹತಾ ಸನ್ನಿವೇಶ
* ಇಂಗ್ಲೆಂಡ್ ತನ್ನ ಉಳಿದ ನಾಲ್ಕು ಲೀಗ್ ಹಂತದ ಪಂದ್ಯಗಳನ್ನು ಗೆಲ್ಲಲೇಬೇಕು.
* ಶ್ರೀಲಂಕಾ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ತಂಡಗಳು ತಲಾ ಒಂದು ಪಂದ್ಯವನ್ನಾದರೂ ಸೋಲಬೇಕು. ಮೂರು ತಂಡಗಳು ತಮ್ಮ ಮೊದಲ ಐದು ಪಂದ್ಯಗಳಲ್ಲಿ ತಲಾ ನಾಲ್ಕು ಅಂಕಗಳನ್ನು ಹೊಂದಿವೆ.
ಕಠಿಣ ಸನ್ನಿವೇಶಗಳು:
* ಆಸ್ಟ್ರೇಲಿಯಾ ತನ್ನ ಉಳಿದ ನಾಲ್ಕು ಪಂದ್ಯಗಳಲ್ಲಿ ಎರಡನ್ನು ಸೋಲಬೇಕು.
* ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ತಂಡಗಳು ತಮ್ಮ ಉಳಿದ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಸೋಲಬೇಕು.
* ಭಾರತ ತನ್ನ ಮುಂದಿನ ನಾಲ್ಕೂ ಪಂದ್ಯಗಳನ್ನು ಸೋಲಬೇಕು.
ಇನ್ನು ಆಸ್ಟ್ರೇಲಿಯಾ, ಶ್ರೀಲಂಕಾ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ತಂಡಗಳು 10 ಅಂಕಗಳಿಗಿಂತ ಹೆಚ್ಚು ಅಂಕಗಳನ್ನು ಗಳಿಸಬಾರದೆಂದು ಕೂಡ ಇಂಗ್ಲೆಂಡ್ ತಂಡ ಪ್ರಾರ್ಥಿಸಬೇಕಿದೆ.
ಎರಡು ಅಥವಾ ಹೆಚ್ಚಿನ ತಂಡಗಳು 10 ಅಂಕಗಳೊಂದಿಗೆ ಮುಕ್ತಾಯಗೊಂಡರೆ, ನೆಟ್ ರನ್‌ರೇಟ್ ಮುನ್ನಲೆಗೆ ಬರುತ್ತದೆ. ಹೀಗಾಗಿ ಇಂಗ್ಲೆಂಡ್ ಮುಂದಿನ ನಾಲ್ಕು ಪಂದ್ಯಗಳಲ್ಲಿ ಗೆಲುವು ಸಾಧಿಸುವುದರ ಜೊತೆಗೆ ನೆಟ್ ರನ್‌ರೇಟ್ ಸುಧಾರಿಸುವ ಗುರಿಯನ್ನು ಹೊಂದಿರಬೇಕು ಮತ್ತು ಉಳಿದದ್ದನ್ನು ಅದೃಷ್ಟಕ್ಕೆ ಬಿಡುಬೇಕು.
ಭಾನುವಾರ, ಅಕ್ಟೋಬರ್ 29ರಂದು ನಡೆಯಲಿರುವ ಭಾರತ ವಿರುದ್ಧದ ಮುಂದಿನ ಪಂದ್ಯಕ್ಕಾಗಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ ಬೆಂಗಳೂರಿನಿಂದ ಲಕ್ನೋಗೆ ಶೀಘ್ರದಲ್ಲೇ ಪ್ರಯಾಣಿಸಲಿದ್ದಾರೆ. ಒಂದು ವೇಳೆ ಆ ಪಂದ್ಯದಲ್ಲಿ ಇಂಗ್ಲೆಂಡ್ ಸೋತರೆ, ಸೆಮಿಫೈನಲ್‌ಗೆ ಅರ್ಹತೆ ಪಡೆಯುವ ಸಾಧ್ಯತೆ ಕಮರಿಹೋಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications