ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ ಈ ಬಾರಿಯ ವಿಶ್ವಕಪ್‌ನಲ್ಲಿ ಮೊದಲ ಗೆಲುವು ಸಾಧಿಸಿದೆ. ಆರಂಭಿಕ ಪಂದ್ಯದಲ್ಲಿ ಭಾರೀ ಸೋಲು ಅನುಭವಿಸಿ ಹಿನ್ನಡೆ ಕಂಡಿದ್ದ ಇಂಗ್ಲೆಂಡ್ ತಂಡ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಮೊದಲಿಗೆ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ್ದ ಬಟ್ಲರ್ ಬಳಗ ನಂತರ ಬೌಲಿಂಗ್‌ನಲ್ಲಿಯೂ ಅಮೋಘ ಪ್ರದರ್ಶನ ನೀಡಿ ಭರ್ಜರಿ ಗೆಲುವು ಸಾಧಿಸಿದೆ.
ಟಾಸ್ ಸೋಲು ಮೊದಲಿಗೆ ಬ್ಯಾಟಿಂಗ್ ನಡೆಸಿದ್ದ ಇಂಗ್ಲೆಂಡ್ ತಂಡ 365 ರನ್‌ಗಳ ಗುರಿ ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶ ಯಾವುದೇ ಹಂತದಲ್ಲಿಯೂ ಇಂಗ್ಲೆಂಡ್ ಬಳಗಕ್ಕೆ ಪ್ರತಿರೋಧವೊಡ್ಡಲು ವಿಫಲವಾಗಿದೆ. ಆರಂಭಿಕ ಆಟಗಾರ ಲಿಟನ್ ದಾಸ್ 76 ರನ್‌ಗಳಸಿದರೆ ಮುಷ್ಫಿಕರ್ ರಹೀಮ್ 51 ರನ್ ಬಾರಿಸಿದರು. ಈ ಇಬ್ಬರು ಆಟಗಾರರನ್ನು ಹೊರತುಪಡಿಸಿ ಉಳಿದೆಲ್ಲಾ ಆಟಗಾರರು ಕೂಡ ನೀರಸ ಪ್ರದರ್ಶನ ನೀಡಿದ್ದಾರೆ.

ಇಂಗ್ಲೆಂಡ್ ನೀಡಿದ ಬೃಹತ್ ಗುರಿಯನ್ನು ಬೆನ್ನಲು ಆರಂಭಿಸಿದ ಬಾಂಗ್ಲಾದೇಶ ತಂಡ ಈ ಪಂದ್ಯದಲ್ಲಿ ಕೇವಲ 227 ರನ್‌ಗಳನ್ನು ಮಾತ್ರವೇ ಗಳಿಸಲು ಶಕ್ತವಾಗಿದೆ. ಹೀಗಾಗಿ 137 ರನ್‌ಗಳ ಅಂತರದ ಭಾರೀ ಸೋಲು ಅನುಭವಿಸಿದೆ. ಈ ಮೂಲಕ ಇಂಗ್ಲೆಂಡ್ ತಂಡ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆದಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಮೊದಲಿಗೆ ಇಂಗ್ಲೆಂಡ್ ತಂಡವನ್ನು ಬ್ಯಾಟಿಂಗ್‌ಗೆ ಇಳಿಸಿ ತಾನು ಬೌಲಿಂಗ್ ನಡೆಸುವ ನಿರ್ಧಾರ ತೆಗೆದುಕೊಂಡಿತು. ಆದರೆ ಈ ನಿರ್ಧಾರವನ್ನು ಸಮರ್ಥನೆ ಮಾಡಿಕೊಳ್ಳುವಂತಾ ಬೌಲಿಂಗ್ ಪ್ರದರ್ಶನ ನೀಡಲು ಬಾಂಗ್ಲಾ ವಿಫಲವಾಯಿತು. ಇಂಗ್ಲೆಂಡ್‌ನ ಅಗ್ರ ಕ್ರಮಾಂಕದ ಮೂವರು ಆಟಗಾರರು ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ದೊಡ್ಡ ಮೊತ್ತ ಗಳಿಸಲು ಕಾರಣವಾದರು.
ಮೊದಲ ವಿಕೆಟ್‌ಗೆ ಜಾನಿ ಬೈರ್‌ಸ್ಟೋವ್ ಹಾಗೂ ಡೇವಿಡ್ ಮಲನ್ ಬರೊಬ್ಬರಿ 115 ರನ್‌ಗಳ ಜೊತೆಯಾಟವನ್ನು ನೀಡಿದರು. 52 ರನ್‌ಗಳಿಗೆ ಬೈರ್‌ಸ್ಟೋವ್ ವಿಕೆಟ್ ಕಳೆದುಕೊಂಡ ಬಳಿಕ ಮಲನ್ ಅನುಭವಿ ಜೋ ರೂಟ್ ಜೊತೆಗೆ ಸೇರಿಕೊಂಡು ಮತ್ತೊಂದು ಬೃಹತ್ ಜೊತೆಯಾಟದಲ್ಲಿ ಭಾಗಿಯಾದರು. ಈ ಜೋಡಿ 151 ರನ್‌ಗಳ ಜೊತೆಯಾಟ ನಡೆಸಿದ್ದಾರೆ. 107 ಎಸೆತಗಳನ್ನು ಎದುರಿಸಿದ ಡೇವಿಡ್ ಮಲನ್ 140 ರನ್‌ಗಳನ್ನು ಗಳಿಸಿ ವಿಕೆಟ್ ಕಳೆದುಕೊಂಡಿದ್ದಾರೆ.
ಈ ಜೋಡಿ ಬೇರ್ಪಟ್ಟ ಬಳಿಕ ಜೋ ರೂಟ್ ಹ್ಯಾರಿ ಬ್ರೂಕ್, ಜೋಸ್ ಬಟ್ಲರ್ ಜೊತೆಗೆ ಸಣ್ಣ ಜೊತೆಯಾಟದಲ್ಲಿ ಭಾಗಿಯಾದರು. ಆದರೆ ಉಳಿದ ಆಟಗಾರರಿಂದ ಹೆಚ್ಚಿನ ನೆರವು ದೊರೆಯಲಿಲ್ಲ. ಜೋ ರೂಟ್ 82 ರನ್‌ಗಳನ್ನು ಗಳಿಸಿ ವಿಕೆಟ್ ಕಳೆದುಕೊಂಡರು. ಹೀಗಾಗಿ ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಬರೊಬ್ಬರಿ 364 ರನ್‌ಗಳನ್ನು ಗಳಿಸಿದೆ. ಬಾಂಗ್ಲಾದೇಶದ ಪರವಾಗಿ ಮೆಗದಿ ಹಸನ್ 4 ವಿಕೆಟ್ ಕಬಳಿಸಿ ಮಿಂಚಿದ್ದು ಶೊರಿಫುಲ್ ಇಸ್ಲಾಮ್ 3 ವಿಕೆಟ್ ಕಬಳಿಸಿದ್ದಾರೆ.
ಇಂಗ್ಲೆಂಡ್ ಆಡುವ ಬಳಗ: ಜಾನಿ ಬೈರ್‌ಸ್ಟೋವ್, ಡೇವಿಡ್ ಮಲನ್, ಜೋ ರೂಟ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್ (ನಾಯಕ & ವಿಕೆಟ್ ಕೀಪರ್), ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕರ್ರಾನ್, ಕ್ರಿಸ್ ವೋಕ್ಸ್, ಆದಿಲ್ ರಶೀದ್, ಮಾರ್ಕ್ ವುಡ್, ರೀಸ್ ಟಾಪ್ಲೆ
ಬೆಂಚ್: ಬೆನ್ ಸ್ಟೋಕ್ಸ್, ಗಸ್ ಅಟ್ಕಿನ್ಸನ್, ಡೇವಿಡ್ ವಿಲ್ಲಿ, ಮೊಯಿನ್ ಅಲಿ
ಬಾಂಗ್ಲಾದೇಶ ಆಡುವ ಬಳಗ: ತಂಝಿದ್ ಹಸನ್, ಲಿಟ್ಟನ್ ದಾಸ್, ನಜ್ಮುಲ್ ಹೊಸೈನ್ ಶಾಂಟೊ, ಶಕೀಬ್ ಅಲ್ ಹಸನ್ (ನಾಯಕ), ಮೆಹಿದಿ ಹಸನ್ ಮಿರಾಜ್, ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ತೌಹಿದ್ ಹೃದಯೋಯ್, ಮಹೇದಿ ಹಸನ್, ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ, ಮುಸ್ತಫಿಜುರ್ ರೆಹಮಾನ್
ಬೆಂಚ್: ನಸುಮ್ ಅಹ್ಮದ್, ಹಸನ್ ಮಹಮೂದ್, ತಂಝಿಮ್ ಹಸನ್ ಸಾಕಿಬ್, ಮಹಮ್ಮದುಲ್ಲಾ