ವಿಶ್ವಕಪ್ 2023: ಒಂದು ಹೆಜ್ಜೆ ಮುಂದೆ ಹೋಗಿ 'ಪಂದ್ಯಾವಳಿ ಶ್ರೇಷ್ಠ ಆಟಗಾರ'ನನ್ನು ಹೆಸರಿಸಿದ ಎಸ್ ಶ್ರೀಶಾಂತ್
ಭಾರತ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಮತ್ತು 2007ರ ಟಿ20 ಹಾಗೂ 2011ರ ಏಕದಿನ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ಎಸ್ ಶ್ರೀಶಾಂತ್ ಅವರು ಮುಂಬರುವ 2023ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಭಾರತದಲ್ಲಿ ಸಂಪೂರ್ಣ 2023ರ ಏಕದಿನ ವಿಶ್ವಕಪ್ ಪಂದ್ಯಾವಳಿ
2023ರ ಐಸಿಸಿ ಪುರುಷರ ಏಕದಿನ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯ13 ನೇ ಆವೃತ್ತಿಯು ಭಾರತದಲ್ಲಿ ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ನಡೆಯಲಿದೆ.

ಹಿಂದಿನ ಆವೃತ್ತಿಗಳಿಗಿಂತ ಭಿನ್ನವಾಗಿ, ಭಾರತವು ಈ ವಿಶ್ವಕಪ್ ಪಂದ್ಯಾವಳಿಯನ್ನು ಏಕೈಕ ಆತಿಥೇಯ ರಾಷ್ಟ್ರವಾಗಿ ಆಯೋಜಿಸುತ್ತದೆ. 1987, 1996 ಮತ್ತು 2011ರಲ್ಲಿ ಸಹ-ಆತಿಥ್ಯ ರಾಷ್ಟ್ರವಾಗಿ ಪಂದ್ಯಾವಳಿಯನ್ನು ಆಯೋಜಿಸಿತ್ತು.
ವಿಶ್ವದ ಹತ್ತು ಬಲಿಷ್ಠ ತಂಡಗಳು ಭಾಗವಹಿಸಲಿವೆ
ಅಹಮದಾಬಾದ್, ಬೆಂಗಳೂರು, ಹೈದರಾಬಾದ್, ಕೋಲ್ಕತ್ತಾ, ಲಕ್ನೋ, ಚೆನ್ನೈ, ದೆಹಲಿ, ಧರ್ಮಶಾಲಾ, ಮುಂಬೈ, ಪುಣೆ ಸೇರಿದಂತೆ 12 ತಾಣಗಳಲ್ಲಿ ಪಂದ್ಯಗಳು ನಡೆಯಲಿದ್ದು, ಗುವಾಹಟಿ ಮತ್ತು ತಿರುವನಂತಪುರಂ ಮೈದಾನಗಳಲ್ಲಿ ಅಭ್ಯಾಸ ಪಂದ್ಯಗಳನ್ನು ಆಯೋಜಿಸಲಾಗಿದೆ.
ವಿಶ್ವಕಪ್‌ನ ಕೊನೆಯ ಮೂರು ಆವೃತ್ತಿಗಳನ್ನು ಆತಿಥೇಯ ತಂಡಗಳೇ ಗೆದ್ದುಕೊಂಡಿರುವುದರಿಂದ, ಈ ಸಂಪ್ರದಾಯವನ್ನು ಮುಂದುವರಿಸಲು ಮತ್ತು ಐಸಿಸಿ ಪ್ರಶಸ್ತಿಯನ್ನು ಖಚಿತಪಡಿಸಿಕೊಳ್ಳಲು ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡದ ಮೇಲೆ ಅಪಾರ ನಿರೀಕ್ಷೆ ಇದೆ.

ಭಾರತದ ಕೊನೆಯ ಐಸಿಸಿ ಟ್ರೋಫಿ 2013ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಬಂದಿತ್ತು. ಆದರೆ ಕೊನೆಯ ಏಕದಿನ ವಿಶ್ವಕಪ್ ಗೆಲುವು 2011ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲೇ ಬಂದಿತ್ತು.
ಸರಣಿಶ್ರೇಷ್ಠ ಆಟಗಾರ ಪ್ರಶಸ್ತಿಗೆ ಹಾರ್ದಿಕ್ ಪಾಂಡ್ಯ ಪ್ರಬಲ ಸ್ಪರ್ಧಿ
ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅಥವಾ ಎಡಗೈ ಮಣಿಕಟ್ಟಿನ ಸ್ಪಿನ್ನರ್ ಕುಲದೀಪ್ ಯಾದವ್ ವಿಶ್ವಕಪ್ ಪಂದ್ಯಾವಳಿಯ ಆಟಗಾರ ಪ್ರಶಸ್ತಿಗೆ ಪ್ರಬಲ ಸ್ಪರ್ಧಿಯಾಗಬಹುದು ಎಂದು ಮಾಜಿ ವೇಗದ ಬೌಲರ್ ಎಸ್ ಶ್ರೀಶಾಂತ್ ಭವಿಷ್ಯ ನುಡಿದಿದ್ದಾರೆ.
2011ರ ವಿಶ್ವಕಪ್‌ನಲ್ಲಿ ಲೆಜೆಂಡ್ ಯುವರಾಜ್ ಸಿಂಗ್ ಅವರ ಸಂವೇದನಾಶೀಲ ಆಲ್‌ರೌಂಡ್ ಪ್ರದರ್ಶನದ ಸಾಮ್ಯತೆಯನ್ನು ಹಾರ್ದಿಕ್ ಪಾಂಡ್ಯ ಅವರಲ್ಲಿ ಕಂಡಿದ್ದಾರೆ. ಯುವರಾಜ್ ಬಾಲ್ ಮತ್ತು ಬ್ಯಾಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಕಾರಣ ಪಂದ್ಯಾವಳಿಯ ಆಟಗಾರ ಪ್ರಶಸ್ತಿಯನ್ನು ತಂದುಕೊಟ್ಟಿತು. ಮುಂಬರುವ ವಿಶ್ವಕಪ್‌ನಲ್ಲಿ ಹಾರ್ದಿಕ್ ಪಾಂಡ್ಯ ಅವರು ಪ್ರಬಲ ಸ್ಪರ್ಧಿಯಾಗಿದ್ದಾರೆ ಎಂದು ಎಸ್ ಶ್ರೀಶಾಂತ್ ತಿಳಿಸಿದ್ದಾರೆ.

ಇನ್ನು ಸ್ಟಾರ್ ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನು ಕೂಡ ಪಂದ್ಯಾವಳಿ ಆಟಗಾರ ಪ್ರಶಸ್ತಿಗೆ ಮತ್ತೊಬ್ಬ ಅಗ್ರ ಸ್ಪರ್ಧಿ ಎಂದು ಎಸ್ ಶ್ರೀಶಾಂತ್ ಅಭಿಪ್ರಾಯಪಟ್ಟಿದ್ದಾರೆ. ವಿಶ್ವಕಪ್‌ನಲ್ಲಿ ತಮ್ಮ ಅಸಾಧಾರಣ ಬೌಲಿಂಗ್ ಪ್ರದರ್ಶನದೊಂದಿಗೆ ಕುಲದೀಪ್ ಯಾದವ್ ಕೆಲವು ದಾಖಲೆಗಳನ್ನು ಮುರಿಯುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಗಮನಸೆಳೆದರು.
"ಹಾರ್ದಿಕ್ ಪಾಂಡ್ಯ ಅವರ ವೇಗದ ಶತಕವನ್ನು ಮರೆಯಬೇಡಿ. ಜಸ್ಪ್ರೀತ್ ಬುಮ್ರಾ ಅವರ ಎರಡು ಬಾರಿ ಐದು ವಿಕೆಟ್ ಸಾಧನೆಗಳನ್ನು ಮರೆಯಬೇಡಿ. ಕುಲದೀಪ್ ಯಾದವ್ ಭಾರತ ಕಂಡ ಅತ್ಯುತ್ತಮ ಸ್ಪಿನ್ನರ್," ಎಂದು ಮಾಜಿ ವೇಗಿ ಎಸ್ ಶ್ರೀಶಾಂತ್ ಹೇಳಿದ್ದಾರೆ.
ವಿಶ್ವಕಪ್ ಫೈನಲ್ ಭವಿಷ್ಯ ನುಡಿದ ಎಸ್ ಶ್ರೀಶಾಂತ್
ಎಸ್ ಶ್ರೀಶಾಂತ್ ಅವರು ತಮ್ಮ ದಿಟ್ಟ ಭವಿಷ್ಯವಾಣಿಯಲ್ಲಿ, ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಮುಂಬರುವ ವಿಶ್ವಕಪ್‌ನ ಫೈನಲ್ ಹಣಾಹಣಿಯನ್ನು ಊಹಿಸಿದ್ದಾರೆ.
ಭಾರತ ತಂಡವು 2019ರ ವಿಶ್ವಕಪ್ ನಿರಾಶೆಗೆ ಪ್ರತೀಕಾರ ತೀರಿಸಿಕೊಳ್ಳುತ್ತದೆ ಮತ್ತು ಇತ್ತೀಚಿಗೆ ಶ್ರೀಲಂಕಾ ವಿರುದ್ಧದ ಅವರ ದಾಖಲೆಯ ಗೆಲುವು ಎದುರಾಳಿಗಳ ಮೇಲೆ ಪ್ರಾಬಲ್ಯ ಸಾಧಿಸುತ್ತದೆ ಎಂದು ವಿಶ್ವಕಪ್ ವಿಜೇತ ಮಾಜಿ ಆಟಗಾರ ಎಸ್ ಶ್ರೀಶಾಂತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
"ವಿಶ್ವಕಪ್ ಫೈನಲ್‌ಗೆ ಭಾರತ ಮತ್ತು ನ್ಯೂಜಿಲೆಂಡ್ ತಲುಪಲಿವೆ ಎಂದು ನಾನು ಭಾವಿಸುತ್ತೇನೆ. ನಾವು 2019ರ ವಿಶ್ವಕಪ್‌ಗೆ ಸೇಡು ತೀರಿಸಿಕೊಳ್ಳುತ್ತೇವೆ ಮತ್ತು ಶ್ರೀಲಂಕಾ ವಿರುದ್ಧದ 50 ರನ್ ಆಲೌಟ್‌ನಂತೆ ಏನನ್ನಾದರೂ ಮಾಡುತ್ತೇವೆ," ಎಂದು ಶ್ರೀಶಾಂತ್ ತಮ್ಮ ಆಶಾವಾದವನ್ನು ವ್ಯಕ್ತಪಡಿಸಿದ್ದಾರೆ.
"ನಾನು ಸಾಕಷ್ಟು ಸಕಾರಾತ್ಮಕವಾಗಿದ್ದೇನೆ ಮತ್ತು ಭಾರತೀಯ ಅಭಿಮಾನಿಗಳಾಗಿ ನಾವೆಲ್ಲರೂ ಭಾರತದ ಗೆಲುವಿಗೆ ಪ್ರಾರ್ಥಿಸಬೇಕು," ಎಂದು ಭಾರತದ ಮಾಜಿ ಕ್ರಿಕೆಟಿಗ ಎಸ್ ಶ್ರೀಶಾಂತ್ ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications