ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಪೈಪೋಟಿ ನಡೆಸಲಿದೆ. ಈ ಬಹು ನಿರೀಕ್ಷಿತ ಪಂದ್ಯಕ್ಕೆ ಇನ್ನು ಕೆಲವೇ ಗಂಟೆಗಳು ಮಾತ್ರವೇ ಬಾಕಿಯಿದೆ. ಇನ್ನು ಈ ಫೈನಲ್ ಪಂದ್ಯಕ್ಕೂ ಮುನ್ನ ಎರಡು ತಂಡಗಳ ಅಭಿಮಾನಿಗಳು ಹಲವಾರು ದೃಷ್ಟಿಕೋನದಿಂದ ಬೇರೆ ಬೇರೆ ರೀತಿಯಲ್ಲಿ ಲೆಕ್ಕಾಚಾರಗಳನ್ನು ಸಹಜವಾಗಯೇ ಮಾಡುತ್ತಾರೆ.
ಪಂದ್ಯದ ಸಂದರ್ಭದಲ್ಲಿ ಹವಾಮಾನ ಹೇಗಿರಲಿದೆ? ಆಡುವ ಬಳಗದಲ್ಲಿ ಯಾರಿಗೆಲ್ಲಾ ಅವಕಾಶ ದೊರೆಯಲಿದೆ? ಪಿಚ್ ಯಾವ ರೀತಿ ವರ್ತಿಸಬಹುದು? ಹೀಗೆ ನಾನಾ ವಿಚಾರಗಳ ಬಗ್ಗೆ ಅಭಿಮಾನಿಗಳು ಕೂಡ ಚರ್ಚೆಗಳನ್ನು ಮಾಡುತ್ತಿರುತ್ತಾರೆ. ಇದೀಗ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಫೈನಲ್ ಪಂದ್ಯಕ್ಕೂ ಮುನ್ನ ಈ ಪಂದ್ಯ ನಡೆಯಲಿರುವ ಪಿಚ್ ವಿಚಾರವಾಗಿ ಪ್ರಮುಖ ಮಾಹಿತಿಯೊಂದು ಹೊರಬಿದ್ದಿದೆ.

ಪಿಚ್ ಆಯ್ಕೆ ಹಾಗೂ ಸಿದ್ಧಪಡಿಸುವ ವಿಚಾರದಲ್ಲಿ ಬಿಸಿಸಿಐ ಮಧ್ಯಸ್ಥಿಕೆ ವಹಿಸುತ್ತಿದ ಎನ್ನುವ ವಿಚಾರಗಳು ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಆಗಾಗ ಕೇಳಿ ಬಂದಿದೆ. ಭಾರತ ತಂಡಕ್ಕೆ ಅನುಕೂಲಕರವಾಗುವಂತೆ ಪಿಚ್‌ಗಳನ್ನು ಸಿದ್ಧಪಡಿಸಲಾಗಿದೆ ಎನ್ನುವ ಆರೋಪಗಳು ಕೂಡ ಕೇಳಿ ಬಂದಿತ್ತು.
ಇದರ ಬೆನ್ನಲ್ಲೇ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯವನ್ನು ಯಾವ ಪಿಚ್‌ನಲ್ಲಿ ಆಡಲಿದೆ ಎನ್ನುವುದು ಬಹಿರಂಗವಾಗಿದೆ. ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಪಂದ್ಯಕ್ಕೆ ಹೊಸ ಪಿಚ್‌ನ ಬದಲಾಗಿ ಈಗಾಗಲೇ ಬಳಸಿರುವ ನಿಧಾನಗತಿಯ ಪಿಚ್ ಬಳಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಭಾರತ vs ಪಾಕ್ ಪಂದ್ಯಕ್ಕೆ ಬಳಸಿದ್ದ ಪಿಚ್!
ಕುತೂಹಲಕಾರಿ ಸಂಗತಿಯೆಂದರೆ ಇದೇ ಮೈದಾನದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಆಡಿರುವ ಪಿಚ್‌ನಲ್ಲಿಯೇ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಫೈನಲ್ ಪಂದ್ಯವನ್ನು ಆಡಲಿದೆ ಎನ್ನಲಾಗುತ್ತಿದೆ. ದಿ ಇಂಡಿಯನ್ ಎಕ್ಸ್‌ಪ್ರೆಸ್ ಈ ಬಗ್ಗೆ ವರದಿ ಮಾಡಿದ್ದು ಕುತೂಹಲ ಮೂಡಿಸಿದೆ. ಅಕ್ಟೋಬರ್ 14ರಂದು ನಡೆದಿದ್ದ ಆ ಪಂದ್ಯವನ್ನು ಭಾರತ ಏಕಪಕ್ಷೀಯವಾಗಿ ಗೆದ್ದುಬೀಗಿತ್ತು. ಇದೀಗ ಫೈನಲ್‌ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿರುವಾಗ ಮತ್ತೆ ಅದೇ ರೀತಿಯ ಫಲಿತಾಂಶ ಬರಲಿದೆಯಾ ಎನ್ನುವುದು ಕೂಡ ಕುತೂಹಲ ಮೂಡಿಸಿದೆ.
ಬಳಸಿದ ಪಿಚ್ ಉಪಯೋಗಿಸುವುದು ಹೊಸತೇನಲ್ಲ
ಇನ್ನು ವಿಶ್ವಕಪ್ ಟೂರ್ನಿಯ ನಾಕೌಟ್ ಪಂದ್ಯಗಳಲ್ಲಿ ಬಳಸಿ ಪಿಚ್‌ಗಳಲ್ಲಿ ಆಡುವುದು ಹೊಸತೇನಲ್ಲ. ಈ ಹಿಂದೆಯೂ ಈ ರೀತಿ ನಡೆದಿತ್ತು. ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ಸೆಮಿಫೈನಲ್ ವಿಶ್ವಕಪ್ ಟೂರ್ನಿ ಆಯೋಜನೆಯಾಗಿದ್ದಾಗ ಭಾರತ, ಪಾಕಿಸ್ತಾನ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಿದ್ದಾಗ ಕೂಡ ಈ ಪಂದ್ಯಗಳನ್ನು ಬಳಸಿದ ಪಿಚ್‌ನಲ್ಲಿಯೇ ಆಡಿಸಲಾಗಿತ್ತು.