2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗಾಗಿ ಸಂಪೂರ್ಣ ಹಾಗೂ ಅಂತಿಮ ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯು ಮಂಗಳವಾರ, ಜೂನ್ 27ರಂದು ಮುಂಬೈನಲ್ಲಿ ಪ್ರಕಟಿಸಿದೆ.
ಅಕ್ಟೋಬರ್ 5ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ರನ್ನರ್-ಅಪ್ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿದ್ದರೆ, ನವೆಂಬರ್ 19ರಂದು ಅದೆ ಮೈದಾನದಲ್ಲಿ ಫೈನಲ್ ಹಣಾಹಣಿ ನಡೆಯಲಿದೆ.

ಇದೀಗ ಏಕದಿನ ವಿಶ್ವಕಪ್ ಪಂದ್ಯಗಳಿಗೆ ಆತಿಥ್ಯ ಕಳೆದುಕೊಂಡ ಪ್ರಮುಖ ಕ್ರಿಕೆಟ್ ಸಂಸ್ಥೆ ಅಧಿಕಾರಿಗಳು, ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯುವ ಐಸಿಸಿ ಟೂರ್ನಿಯ ಪಂದ್ಯಗಳನ್ನು ಆಯೋಜಿಸುವ ಅವಕಾಶವನ್ನು ತಪ್ಪಿಸಿಕೊಂಡಿದ್ದರ ಬಗ್ಗೆ ತಮ್ಮ ನಿರಾಶೆ ವ್ಯಕ್ತಪಡಿಸಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಂಗಳವಾರ ವಿಶ್ವಕಪ್ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಅಕ್ಟೋಬರ್ 5ರಿಂದ ಪ್ರಾರಂಭವಾಗುವ ಪಂದ್ಯಾವಳಿಗಾಗಿ ಪ್ರಮುಖ 10 ಸ್ಥಳಗಳನ್ನು ಆಯ್ಕೆ ಮಾಡಿದೆ.
2023ರ ಏಕದಿನ ವಿಶ್ವಕಪ್ ಪಂದ್ಯಗಳನ್ನು ಆಯೋಜಿಸುವ ಅವಕಾಶ ಕಳೆದುಕೊಂಡ ಪ್ರಮುಖ ನಗರಗಳೆಂದರೆ, ಮೊಹಾಲಿ, ಇಂದೋರ್, ರಾಜ್‌ಕೋಟ್, ರಾಂಚಿ ಮತ್ತು ನಾಗ್ಪುರ ಕ್ರಿಕೆಟ್ ಸಂಸ್ಥೆಗಳು ಸೇರಿವೆ.

ಹೈದರಾಬಾದ್, ಅಹಮದಾಬಾದ್, ಧರ್ಮಶಾಲಾ, ದೆಹಲಿ, ಚೆನ್ನೈ, ಲಕ್ನೋ, ಪುಣೆ, ಬೆಂಗಳೂರು, ಮುಂಬೈ ಮತ್ತು ಕೋಲ್ಕತ್ತಾ ಸಂಸ್ಥೆಗಳು ಏಕದಿನ ವಿಶ್ವಕಪ್ ಪಂದ್ಯಗಳನ್ನು ಆಯೋಜಿಸುವ ಅವಕಾಶ ಗಿಟ್ಟಿಸಿಕೊಂಡಿವೆ. ತಿರುವನಂತಪುರಂ ಮತ್ತು ಗುವಾಹಟಿ ನಗರಗಳಲ್ಲಿ ಅಭ್ಯಾಸ ಪಂದ್ಯಗಳು ನಡೆಯಲಿವೆ.
ಮೆಟ್ರೋ ನಗರಗಳು ಸಾಮಾನ್ಯವಾಗಿ ವಿಶ್ವಕಪ್ ಪಂದ್ಯಗಳನ್ನು ಆಯೋಜಿಸುತ್ತವೆ. ಅದರ ಹೊರತಾಗಿ ಐಸಿಸಿ ಟೂರ್ನಿಯ ಪಂದ್ಯಗಳನ್ನು ವಲಯವಾರು ಹಂಚಿಕೆ ಮಾಡಲಾಗುತ್ತದೆ ಮತ್ತು ಕೆಲವು ಸಂದರ್ಭಗಳಲ್ಲಿ ವೈಯಕ್ತಿಕ ಆದ್ಯತೆಗಳು ಮುನ್ನೆಲೆಗೆ ಬರಲಿವೆ.
ಇದು ಐಸಿಸಿ ಪಂದ್ಯಾವಳಿ ಆಗಿದ್ದರೂ, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಆಯಾ ದೇಶದ ಮಂಡಳಿ ಪ್ರಸ್ತಾಪಿಸಿದ ಸ್ಥಳಗಳನ್ನು ಆಯ್ಕೆ ಮಾಡಲು ಒಲವು ತೋರುತ್ತದೆ. ಈ ಸಂದರ್ಭದಲ್ಲಿ ಬಿಸಿಸಿಐ ಪಾತ್ರ ನಿರ್ಣಾಯಕವಾಗಿರುತ್ತದೆ.
ಮಧ್ಯಪ್ರದೇಶದ ಇಂದೋರ್ ನಿಯಮಿತವಾಗಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸುತ್ತಲೇ ಬರುತ್ತಿದೆ. ಈ ವರ್ಷದ ಆರಂಭದಲ್ಲಿ ಏಕದಿನ ಮತ್ತು ಟೆಸ್ಟ್ ಪಂದ್ಯವನ್ನು ಆಯೋಜಿಸಿತ್ತು. ಇದೀಗ ವಿಶ್ವಕಪ್ ಪಂದ್ಯ ಆಯೋಜಿಸುವ ಅವಕಾಶವನ್ನು ತಪ್ಪಿಸಿಕೊಂಡ ಪ್ರಮುಖ ಕ್ರಿಕೆಟ್ ಸಂಸ್ಥೆಗಳಲ್ಲಿ ಒಂದಾಗಿದೆ.
ಈ ಕುರಿತು ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಅಭಿಲಾಷ್ ಖಾಂಡೇಕರ್ ಬೇಸರ ವ್ಯಕ್ತಪಡಿಸಿದ್ದು, "1987ರಲ್ಲಿ ಇಂದೋರ್ ಮೈದಾನವು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಪಂದ್ಯವನ್ನು ಆಯೋಜಿಸಿತ್ತು. ಈ ಬಾರಿ ಇಂದೋರ್ ಹೊರಗುಳಿದಿರುವುದು ನಮಗೆ ಬೇಸರ ತಂದಿದೆ. ಬಿಸಿಸಿಐನ ನಿರ್ಧಾರಗಳು ನಮಗೆ ತಿಳಿದಿಲ್ಲ. ಇಂದೋರ್ ಶ್ರೀಮಂತ ಕ್ರಿಕೆಟ್ ಇತಿಹಾಸವನ್ನು ಹೊಂದಿದೆ. ಆದ್ದರಿಂದ ನಾವು ವಿಶ್ವಕಪ್ ಆಯೋಜಿಸುವ ಅವಕಾಶವನ್ನು ನಿರೀಕ್ಷಿಸಿದ್ದೇವು," ಎಂದು ಪಿಟಿಐಗೆ ತಿಳಿಸಿದರು.
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯು ವಿಶ್ವಕಪ್ ಮೈದಾನಗಳ ಸಂಖ್ಯೆಯ ಮೇಲೆ ಮಿತಿಯನ್ನು ಹಾಕದಿದ್ದರೂ, ಕಡಿಮೆ ಸ್ಥಳಗಳು ಒಂದೂವರೆ ತಿಂಗಳ ಕಾಲ ನಡೆಯುವ ಟೂರ್ನಿಯನ್ನು ಆಯೋಜಿಸುವಲ್ಲಿ ಲಾಜಿಸ್ಟಿಕ್ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
2019ರ ಏಕದಿನ ವಿಶ್ವಕಪ್‌ನಲ್ಲಿ 11 ಸ್ಥಳಗಳನ್ನು ಬಳಸಲಾಯಿತು. ಆದರೆ ಇಂಗ್ಲೆಂಡ್‌ನಲ್ಲಿ ನಡೆದ ಕಾರಣ, ತಂಡಗಳು ವಿಮಾನಗಳನ್ನು ಬಳಸುವ ಅಗತ್ಯವಿರಲಿಲ್ಲ. ಮೈದಾನಗಳು ಅಷ್ಟೊಂದು ಹತ್ತಿರ ಇವೆ. ಇನ್ನು ಆಸ್ಟ್ರೇಲಿಯಾದಲ್ಲಿ ನಡೆದ 2015ರ ವಿಶ್ವಕಪ್‌ನಲ್ಲಿ 49 ಪಂದ್ಯಗಳನ್ನು ನಡೆಸಲು 14 ಸ್ಥಳಗಳನ್ನು ಬಳಸಲಾಗಿತ್ತು ಎಂಬುದು ಗಮನಿಸಬೇಕಾದ ಸಂಗತಿ.
"ನಮಗೆ 4-5 ದೊಡ್ಡ ಮೆಟ್ರೋ ನಗರಗಳನ್ನು ಆಯ್ಕೆ ಮಾಡುವುದಾಗಿತ್ತು ಮತ್ತು ಉತ್ತರ, ದಕ್ಷಿಣ, ಪಶ್ಚಿಮ, ಪೂರ್ವ, ಮಧ್ಯ ವಲಯಗಳು ತಲಾ ಐದು ಪಂದ್ಯವನ್ನು ಪಡೆಯುತ್ತವೆ. ಅಹಮದಾಬಾದ್ ಅತಿದೊಡ್ಡ ಕ್ರೀಡಾಂಗಣವಾಗಿರುವುದರಿಂದ ಫೈನಲ್ ಪಂದ್ಯಕ್ಕೆ ಆತಿಥ್ಯ ವಹಿಸುತ್ತದೆ ಎಂದು ನಮಗೆ ಹೇಳಲಾಗಿದೆ," ಎಂದು ರಾಜ್ಯ ಕ್ರಿಕೆಟ್ ಸಂಸ್ಥೆಯೊಂದು ಅಧಿಕೃತವಾಗಿ ತಿಳಿಸಿದೆ.
ಹೈದರಾಬಾದ್ ಹೊರತುಪಡಿಸಿ, ಆಯ್ಕೆಯಾದ ಎಲ್ಲಾ ಸ್ಥಳಗಳು ವಿಶ್ವಕಪ್‌ನಲ್ಲಿ ಐದು ಪಂದ್ಯಗಳನ್ನು ಪಡೆಯುತ್ತವೆ. ಹಿಂದಿನ ಎರಡು ಐಪಿಎಲ್ ಫೈನಲ್‌ಗಳಿಗೆ ಆತಿಥ್ಯ ವಹಿಸಿದ್ದ ಅಹಮದಾಬಾದ್, 2023ರ ವಿಶ್ವಕಪ್ ಫೈನಲ್‌ಗೂ ಆತಿಥ್ಯ ವಹಿಸಲಿದೆ.
ಅಲ್ಲದೇ, ಅಕ್ಟೋಬರ್ 15ರಂದು ಬಹು ನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪಂದ್ಯಕ್ಕೂ ಅಹಮದಾಬಾದ್ ನಗರವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
"ಕಚೇರಿ, ಅಧಿಕಾರಿಗಳು ಇರುವ ಮಹಾನಗರಗಳು ಮತ್ತು ನಗರಗಳು ಮಾತ್ರ ವಿಶ್ವಕಪ್ ಪಂದ್ಯಗಳನ್ನು ಆಯೋಜಿಸುತ್ತಿವೆ ಎಂದು ತೋರುತ್ತಿದೆ. ನಾವು ಇದನ್ನು ಖಂಡಿಸುತ್ತೇವೆ, ಒಂದು ಪಂದ್ಯವನ್ನು ಪಡೆಯಲು ಸಾಧ್ಯವಾಗಲಿಲ್ಲ. ಕೊನೆಗೆ ಅಭ್ಯಾಸ ಪಂದ್ಯವನ್ನು ಸಹ ಪಡೆಯದಿರುವುದು ನಿರಾಶಾದಾಯಕವಾಗಿದೆ," ಎಂದು 1996ರಿಂದ ವಿಶ್ವಕಪ್ ಪಂದ್ಯಗಳನ್ನು ಆಯೋಜಿಸುತ್ತಿರುವ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್‌ನ ಮೂಲಗಳು ತಿಳಿಸಿವೆ.