World Cup 2023: ಶ್ರೀಲಂಕಾ ಬಗ್ಗುಬಡಿದು ಸೆಮಿಫೈನಲ್ ಸ್ಥಾನ ಖಚಿತಪಡಿಸಿಕೊಂಡ ಕಿವೀಸ್; ಪಾಕಿಸ್ತಾನ ಕನಸು ಭಗ್ನ?
ಗುರುವಾರ, ನವೆಂಬರ್ 9ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನ 41ನೇ ನಿರ್ಣಾಯಕ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು ಶ್ರೀಲಂಕಾ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸುವ ಮೂಲಕ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ.
ಈ ಮೂಲಕ ಸೆಮಿಫೈನಲ್‌ನ ನಾಲ್ಕನೇ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ತಂಡಗಳ ಸೆಮಿಫೈನಲ್‌ನ ಕನಸು ಬಹುತೇಕ ಭಗ್ನಗೊಂಡಿದೆ. ಭಾರತ, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳ ನಂತರ ನ್ಯೂಜಿಲೆಂಡ್ ಉಪಾಂತ್ಯಕ್ಕೆ ಅರ್ಹತೆ ಪಡೆದುಕೊಂಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ಕುಸಲ್ ಪೆರೇರಾ ಅವರ ಏಕೈಕ ಅರ್ಧಶತಕ ಮತ್ತು ಮಹೀಶ್ ತೀಕ್ಷಣ ಅವರ ಸಾಹಸದ ನೆರವಿನಿಂದ 46.4 ಓವರ್‌ಗಳಲ್ಲಿ 171 ರನ್‌ಗಳಿಗೆ ಸರ್ವಪತನ ಕಂಡಿತು.
ಶ್ರೀಲಂಕಾ ನೀಡಿದ್ದ 172 ರನ್‌ಗಳ ಸುಲಭ ಗುರಿ ಬೆನ್ನಟ್ಟಿದ ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲೆಂಡ್ ತಂಡ 23.2 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು. ಸತತ ನಾಲ್ಕು ಪಂದ್ಯಗಳನ್ನು ಸೋತ ಬಳಿಕ ನಿರ್ಣಾಯಕ ಪಂದ್ಯದಲ್ಲಿ ಕಿವೀಸ್ ಪಡೆ ಗೆಲುವು ಸಾಧಿಸಿತು.
ನ್ಯೂಜಿಲೆಂಡ್ ತಂಡ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಡೆವೊನ್ ಕಾನ್ವೇ ಮತ್ತು ರಚಿನ್ ರವೀಂದ್ರ ಉತ್ತಮ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 12.2 ಓವರ್‌ಗಳಲ್ಲಿ 86 ರನ್‌ಗಳ ಜೊತೆಯಾಟ ನೀಡಿದರು.

ಡೆವೊನ್ ಕಾನ್ವೇ 42 ಎಸೆತಗಳಲ್ಲಿ 9 ಬೌಂಡರಿಗಳ ಸಮೇತ 45 ರನ್ ಗಳಿಸಿ ಔಟಾದರೆ, ರಚಿನ್ ರವೀಂದ್ರ 34 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 3 ಸಿಕ್ಸರ್ ಸಿಡಿಸಿ 42 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ನಂತರ ಬಂದ ನಾಯಕ ಕೇನ್ ವಿಲಿಯಮ್ಸನ್ 15 ಎಸೆತಗಳಲ್ಲಿ 2 ಬೌಂಡರಿ ಮೂಲಕ 14 ರನ್ ಗಳಿಸಿದರೆ, ಮಧ್ಯಮ ಕ್ರಮಾಂಕದಲ್ಲಿ ಡೇರಿಲ್ ಮಿಚೆಲ್ 31 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 43 ರನ್ ಗಳಿಸಿ ತಂಡದ ಗೆಲುವನ್ನು ಸುಲಭಗೊಳಿಸಿದರು.
ನಂತರ ಮಾರ್ಕ್ ಚಾಪ್‌ಮನ್ 7 ರನ್ ಗಳಿಸಿ ಔಟಾದರೆ, ಅಂತಿಮವಾಗಿ ಗ್ಲೆನ್ ಫಿಲಿಪ್ಸ್ ಅಜೇಯ 7 ರನ್ ಮತ್ತು ಟಾಮ್ ಲ್ಯಾಥಮ್ ಅಜೇಯ 2 ರನ್ ಗಳಿಸುವ ಮೂಲಕ ತಂಡವನ್ನು ಗೆಲ್ಲಿಸಿದರು.
ಬೌಲಿಂಗ್‌ನಲ್ಲಿ ಶ್ರೀಲಂಕಾ ತಂಡದ ಪರ ಏಂಜೆಲೊ ಮ್ಯಾಥ್ಯೂಸ್ 4 ಓವರ್‌ಗಳಲ್ಲಿ 29 ರನ್ ನೀಡಿ 2 ವಿಕೆಟ್ ಪಡೆದರೆ, ದುಶ್ಮಂತ್ ಚಮೀರ 4 ಓವರ್‌ಗಳಲ್ಲಿ 20 ರನ್ ನೀಡಿ 1 ವಿಕೆಟ್ ಮತ್ತು ಮಹೀಶ್ ತೀಕ್ಷಣ 7 ಓವರ್‌ಗಳಲ್ಲಿ 43 ರನ್ ನೀಡಿ 1 ವಿಕೆಟ್ ಕಬಳಿಸಿದರು.

ಇದಕ್ಕೂ ಮುನ್ನ ಶ್ರೀಲಂಕಾ ತಂಡದ ಇನ್ನಿಂಗ್ಸ್ ಆರಂಭಿಸಿದ ಕುಸಲ್ ಪೆರೇರಾ ಮತ್ತು ಪಾಥುಮ್ ನಿಸ್ಸಾಂಕ ಜೋಡಿ ಮತ್ತೊಮ್ಮೆ ಕಳಪೆ ಆರಂಭ ನೀಡಿತು. ತಂಡದ ಮೊತ್ತ 3 ರನ್‌ಗಳಾಗುವಷ್ಟರಲ್ಲಿ 2 ರನ್ ಗಳಿಸಿದ್ದ ಪ್ರಮುಖ ಬ್ಯಾಟರ್ ಪಾಥುಮ್ ನಿಸ್ಸಾಂಕ ವಿಕೆಟ್ ಕಳೆದುಕೊಂಡಿತು.
ಈ ವೇಳೆ ಕ್ರೀಸ್‌ಗೆ ಬಂದ ನಾಯಕ ಕುಸಲ್ ಮೆಂಡೀಸ್ ಹೆಚ್ಚು ನಿಲ್ಲದೆ 6 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾದ ಸದೀರ ಸಮರವಿಕ್ರಮ 1 ರನ್, ಚರಿತ್ ಅಸಲಂಕಾ 8 ರನ್ ಮಾತ್ರ ಗಳಿಸಿದರು.
ಎಡಗೈ ಬ್ಯಾಟರ್ ಕುಸಾಲ್ ಪೆರೇರಾ 22 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ತಲುಪಿದರು. ಅಂತಿಮವಾಗಿ, ಕುಸಾಲ್ ಪೆರೆರಾ 28 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಒಳಗೊಂಡ 51 ರನ್ ಗಳಿಸಿದ್ದಾಗ ಲಾಕಿ ಫರ್ಗುಸನ್ ಅವರಿಗೆ ವಿಕೆಟ್ ಒಪ್ಪಿಸಿದರು.

ನಂತರ ಬಂದ ಏಂಜೆಲೊ ಮ್ಯಾಥ್ಯೂಸ್ 27 ಎಸೆತಗಳಲ್ಲಿ 2 ಬೌಂಡರಿ ಸಮೇತ 16 ರನ್ ಗಳಿಸಿದರೆ, ಧನಂಜಯ್ ಡಿ ಸಿಲ್ವ 24 ಎಸೆತಗಳನ್ನು ಎದುರಿಸಿ 2 ಬೌಂಡರಿ ಹಾಗೂ 1 ಸಿಕ್ಸರ್ ಸಮೇತ 19 ರನ್ ಗಳಿಸಿ ಕಿವೀಸ್ ಬೌಲರ್‌ಗಳಿಗೆ ಪ್ರತಿರೋಧ ನೀಡಿದರು. ಚಮಿಕ ಕರುಣಾರತ್ನೆ 6 ರನ್, ದುಶ್ಮಂತ್ ಚಮೀರ 1 ರನ್ ಗಳಿಸಿ ಔಟಾದರು.
ಇನ್ನು ಮಹೀಶ್ ತೀಕ್ಷಣ ಮತ್ತು ದಿಲ್ಶನ್ ಮಧುಶಂಕ ಕೊನೆಯ ವಿಕೆಟ್‌ಗೆ 43 ರನ್‌ಗಳ ಜೊತೆಯಾಟ ನೀಡಿ ತಂಡದ ಮೊತ್ತವನ್ನು 170ರ ಗಡಿ ದಾಟಿಸಿದರು. ಮಹೀಶ್ ತೀಕ್ಷಣ 91 ಎಸೆತಗಳಲ್ಲಿ 3 ಬೌಂಡರಿ ಮೂಲಕ ಅಜೇಯ 39 ರನ್ ಗಳಿಸಿದರೆ, ದಿಲ್ಶನ್ ಮಧುಶಂಕ 48 ಎಸೆತಗಳಲ್ಲಿ 2 ಬೌಂಡರಿ ಸಹಾಯದಿಂದ 19 ರನ್ ಗಳಿಸಿ ಔಟಾದರು.
ಬೌಲಿಂಗ್‌ನಲ್ಲಿ ನ್ಯೂಜಿಲೆಂಡ್ ತಂಡದ ಪರ ಟ್ರೆಂಟ್ ಬೌಲ್ಟ್ 10 ಓವರ್‌ಗಳಲ್ಲಿ 37 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ಮಿಚೆಲ್ ಸ್ಯಾಂಟ್ನರ್ 10 ಓವರ್‌ಗಳಲ್ಲಿ 22 ರನ್ ನೀಡಿ 2 ವಿಕೆಟ್ ಪಡೆದರು. ಇನ್ನು ಲಾಕಿ ಫರ್ಗ್ಯುಸನ್ 10 ಓವರ್‌ಗಳಲ್ಲಿ 35 ರನ್ ನೀಡಿ 2 ವಿಕೆಟ್ ಪಡೆದರೆ, ರಚಿನ್ ರವೀಂದ್ರ 7.4 ಓವರ್‌ಗಳಲ್ಲಿ 21 ರನ್ ನೀಡಿ 2 ವಿಕೆಟ್ ಕಿತ್ತರು. ಉಳಿದಂತೆ ಟಿಮ್ ಸೌಥಿ 8 ಎಸೆತಗಳಲ್ಲಿ 51 ರನ್ ನೀಡಿ 1 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications