ಗುರುವಾರ, ಅಕ್ಟೋಬರ್ 19ರಂದು ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಬಾಂಗ್ಲಾದೇಶವನ್ನು 7 ವಿಕೆಟ್‌ಗಳಿಂದ ಮಣಿಸಿ ಭರ್ಜರಿ ಗೆಲುವು ಸಾಧಿಸಿತು.
ಬಾಂಗ್ಲಾದೇಶ ನೀಡಿದ 257 ರನ್‌ಗಳ ಗುರಿಯನ್ನು ಭಾರತ 41.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು ಮತ್ತು ಇದೇ ವೇಳೆ ವಿರಾಟ್ ಕೊಹ್ಲಿ 97 ಎಸೆತಗಳಲ್ಲಿ ತಮ್ಮ 48ನೇ ಏಕದಿನ ಶತಕವನ್ನು ಬಾರಿಸಿದರು.
2023ರ ವಿಶ್ವಕಪ್‌ನಲ್ಲಿ ಸತತ ನಾಲ್ಕನೇ ಗೆಲುವಿನ ಹೊರತಾಗಿಯೂ ಭಾರತ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ವಿಫಲವಾಯಿತು. ನ್ಯೂಜಿಲೆಂಡ್ ನಂತರ, ಭಾರತ ಎರಡನೇ ಸ್ಥಾನದಲ್ಲಿ ಮುಂದುವರೆದಿದೆ.

ಭಾರತ ಮತ್ತು ನ್ಯೂಜಿಲೆಂಡ್ ಎರಡೂ ತಂಡಗಳು ತಾವು ಆಡಿದ ನಾಲ್ಕು ಪಂದ್ಯಗಳಿಂದ 8 ಪಾಯಿಂಟ್‌ಗಳನ್ನು ಹೊಂದಿವೆ. ಆದರೆ ನ್ಯೂಜಿಲೆಂಡ್ +1.923 ನೆಟ್ ರನ್-ರೇಟ್ ಹೊಂದಿದ್ದರೆ, ಭಾರತ +1.659 ನೆಟ್ ರನ್-ರೇಟ್ ಹೊಂದಿದೆ. ಇತ್ತಂಡಗಳು ಅಕ್ಟೋಬರ್ 22ರಂದು ಸೆಣಸಾಡಲಿವೆ.
ಇನ್ನು 4 ಅಂಕಗಳೊಂದಿಗೆ ದಕ್ಷಿಣ ಆಫ್ರಿಕಾ ಮೂರನೇ ಸ್ಥಾನದಲ್ಲಿದ್ದರೆ, ಅಷ್ಟೇ ಅಂಕಗಳೊಂದಿಗೆ ಪಾಕಿಸ್ತಾನ ತಂಡ ನಾಲ್ಕನೇ ಸ್ಥಾನದಲ್ಲಿ ಮುಂದುವರೆದಿದೆ. 3 ಪಂದ್ಯಗಳಿಂದ ಎರಡು ಅಂಕಗಳನ್ನು ಪಡೆದಿರುವ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ಕ್ರಮವಾಗಿ 5 ಮತ್ತು 6ನೇ ಸ್ಥಾನದಲ್ಲಿವೆ.
4 ಪಂದ್ಯಗಳಿಂದ ಎರಡು ಅಂಕ ಗಳಿಸಿರುವ ಬಾಂಗ್ಲಾದೇಶ ತಂಡ 7ನೇ ಸ್ಥಾನ, 3 ಪಂದ್ಯಗಳಿಂದ ಎರಡು ಅಂಕ ಪೆಡದಿರುವ ನೆದರ್ಲ್ಯಾಂಡ್ಸ್ 8ನೇ ಸ್ಥಾನದಲ್ಲಿದ್ದರೆ, 4 ಪಂದ್ಯಗಳಿಂದ ಎರಡು ಅಂಕ ಗಳಿಸಿರುವ ಅಫ್ಘಾನಿಸ್ತಾನ 9ನೇ ಸ್ಥಾನದಲ್ಲಿದೆ. ಇನ್ನು ಆಡಿದ ಎಲ್ಲಾ ಮೂರು ಪಂದ್ಯಗಳನ್ನು ಸೋತಿರುವ ಶ್ರೀಲಂಕಾ ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ.
2023ರ ವಿಶ್ವಕಪ್‌ನಲ್ಲಿ ಇಲ್ಲಿಯವರೆಗೆ ಭಾರತ ತಂಡ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದು, ಬಾಂಗ್ಲಾದೇಶ ವಿರುದ್ಧವೂ ಅದೇ ಫಾರ್ಮ್ ಮುಂದುವರೆಸಿತು. ಭಾರತ ವಿರುದ್ಧ ರನ್ ಗಳಿಸುವುದು ಬಾಂಗ್ಲಾದೇಶ ತಂಡಕ್ಕೂ ಸವಾಲಿನ ಸಂಗತಿಯಾಗಿತ್ತು. ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ 8 ವಿಕೆಟ್‌ಗೆ ಸಾಧಾರಣ 256 ರನ್‌ಗಳನ್ನು ಕಲೆಹಾಕಿತು.
ಗಮನಾರ್ಹವಾಗಿ, ಬಾಂಗ್ಲಾದೇಶ ತಂಡ ಉತ್ತಮ ಆರಂಭ ಪಡೆದುಕೊಂಡಿತ್ತು. 14 ಓವರ್‌ಗಳ ನಂತರ ಯಾವುದೇ ನಷ್ಟವಿಲ್ಲದೆ 90 ರನ್‌ಗಳಿಗೆ ಅತ್ಯುತ್ತಮ ಸ್ಥಿತಿಯಲ್ಲಿತ್ತು. ಆದರೆ ಭಾರತದ ಬೌಲಿಂಗ್ ಮತ್ತೊಮ್ಮೆ ಮುನ್ನೆಲೆಗೆ ಬಂದಿತು.
ಆತಿಥೇಯ ಭಾರತ ತಂಡದಲ್ಲಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಗಾಯಗೊಂಡು ಮೈದಾನದಿಂದ ಹೊರನಡೆದ ಹೊರತಾಗಿಯೂ, ಬಾಂಗ್ಲಾದೇಶ ಬ್ಯಾಟರ್‌ಗಳ ಮೇಲೆ ಒತ್ತಡ ಹಾಕಲು ಯಶಸ್ವಿಯಾದರು.

ಬಾಂಗ್ಲಾದೇಶ ಪರ ತಂಝೀದ್ ಹಸನ್ 51 ರನ್, ಲಿಟ್ಟನ್ ದಾಸ್ 66 ರನ್ ಮತ್ತು ಮೊಹಮ್ಮದುಲ್ಲಾ 46 ರನ್ ಗಳಿಸಿದರೆ, ಮುಷ್ಫಿಕರ್ ರಹೀಂ 38 ರನ್ ಗಳಿಸಿದರು.
ಬೌಲಿಂಗ್‌ನಲ್ಲಿ ಭಾರತ ಪರ ರವೀಂದ್ರ ಜಡೇಜಾ 10 ಓವರ್‌ಗಳಲ್ಲಿ 38 ರನ್ ನೀಡಿ 2 ವಿಕೆಟ್, ಜಸ್ಪ್ರೀತ್ ಬುಮ್ರಾ 10 ಓವರ್‌ಗಳಲ್ಲಿ 41 ರನ್ ನೀಡಿ 2 ವಿಕೆಟ್ ಮತ್ತು ಮೊಹಮ್ಮದ್ ಸಿರಾಜ್ 10 ಓವರ್‌ಗಳಲ್ಲಿ 60 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ಶಾರ್ದೂಲ್ ಠಾಕೂರ್ ಮತ್ತು ಕುಲದೀಪ್ ಯಾದವ್ ತಲಾ ಒಂದೊಂದು ವಿಕೆಟ್ ಪಡೆದರು.
ಭಾರತ ತಂಡದ ಪರ ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಭರ್ಜರಿ ಆರಂಭ ಒದಗಿಸಿದರು. ನಾಯಕ ರೋಹಿತ್ ಶರ್ಮಾ 40 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್‌ಗಳ ನೆರವಿನಿಂದ 48 ರನ್ ಗಳಿಸಿದರೆ, ಶುಭ್ಮನ್ ಗಿಲ್ 55 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ ಮೂಲಕ 53 ರನ್ ಬಾರಿಸಿದರು.
ಶತಕವೀರ ವಿರಾಟ್ ಕೊಹ್ಲಿ 97 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್ ಸಮೇತ ಅಜೇಯ 103 ರನ್ ಬಾರಿಸಿದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟಾರೆ 26 ಸಾವಿರ ರನ್‌ಗಳ ಗಡಿ ದಾಟಿದರು.
ಈ ಮೂಲಕ ಭಾರತದ ಲೆಜೆಂಡ್ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ 49 ಏಕದಿನ ಅಂತಾರಾಷ್ಟ್ರೀಯ ಶತಕಗಳ ಹತ್ತಿರಕ್ಕೆ ಬಂದಿದ್ದಾರೆ. ಸಚಿನ್ ತೆಂಡೂಲ್ಕರ್ ಅವರ ಏಕದಿನ ಶತಕಗಳ ದಾಖಲೆಯನ್ನು ಮುರಿಯಲು ಕೇವಲ ಎರಡು ಶತಕಗಳು ಮಾತ್ರ ಅಗತ್ಯವಿದೆ. ಇನ್ನು ವಿರಾಟ್ ಕೊಹ್ಲಿ ಒಟ್ಟಾರೆ 78ನೇ ಅಂತಾರಾಷ್ಟ್ರೀಯ ಶತಕ ಬಾರಿಸಿದರು.