ಮಂಗಳವಾರ, ಜೂನ್ 20ರಂದು ಹರಾರೆಯ ತಕಾಶಿಂಗಾ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಐಸಿಸಿ ವಿಶ್ವಕಪ್ ಅರ್ಹತಾ ಗುಂಪಿನ ಎ ಪಂದ್ಯದಲ್ಲಿ ಯುಎಸ್ಎ ತಂಡದ ವಿರುದ್ಧ ನೇಪಾಳ ತಂಡ ಭರ್ಜರಿ ಗೆಲುವು ದಾಖಲಿಸಿತು.
ಶಯಾನ್ ಜಹಾಂಗೀರ್ ಅವರ 79 ಎಸೆತಗಳಲ್ಲಿ ಅಜೇಯ 100 ರನ್‌ಗಳ ಶತಕವೂ ಯುಎಸ್‌ಎ ತಂಡಕ್ಕೆ ನೆರವಾಗಲಿಲ್ಲ. ಅಂತಿಮವಾಗಿ ನೇಪಾಳ ತಂಡವು ಯುಎಸ್‌ಎ ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸಿತು.

ಮೊದಲು ಬ್ಯಾಟ್ ಮಾಡಿದ ಯುಎಸ್ಎ ತಂಡ 49 ಓವರ್‌ಗಳಲ್ಲಿ ಕೇವಲ 207 ರನ್ ಗಳಿಸಲಷ್ಟೆ ಶಕ್ತವಾಯಿತು. ಸಾಧ್ಯವಾಯಿತು. ನೇಪಾಳದ ಬೌಲರ್ ಕೆಸಿ ಕರಣ್ 11 ರನ್‌ಗಳಿಗೆ 4 ವಿಕೆಟ್‌ಗಳ ಸಾಧನೆಯೊಂದಿಗೆ ಎದುರಾಳಿ ತಂಡದ ಸರ್ವಪತನಕ್ಕೆ ಕಾರಣರಾದರು.
ಯುಎಸ್ಎ ಪರ ಚೊಚ್ಚಲ ಏಕದಿನ ಶತಕ ಬಾರಿಸಿದ ಶಯಾನ್ ಜಹಾಂಗೀರ್ ಅವರ ವ್ಯರ್ಥವಾಯಿತು ಮತ್ತು ಪಂದ್ಯಾವಳಿಯಲ್ಲಿ ಸತತ ಎರಡನೇ ಪಂದ್ಯದಲ್ಲಿ ಯುಎಸ್ಎ ಸೋಲು ಕಂಡಿತು.
ಯುಎಸ್ಎನ 208 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ನೇಪಾಳ ತಂಡ 43 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಕಳೆದ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಗೋಲ್ಡನ್ ಡಕ್‌ನಿಂದ ಹೊರಬಂದ ಭೀಮ್ ಶಾರ್ಕಿ ಅವರ ಅಜೇಯ 77 ರನ್‌ಗಳು, ಒಟ್ಟು ಏಳು ಓವರ್‌ಗಳು ಬಾಕಿ ಇರುವಂತೆಯೇ ನೇಪಾಳ ತಂಡಕ್ಕೆ ಗೆಲುವು ಖಚಿತಪಡಿಸಿತು.
ಭೀಮ್ ಶಾರ್ಕಿ ತನ್ನ ಐದನೇ ಬೌಂಡರಿ ಗಳಿಸುತ್ತಿದ್ದಂತೆಯೇ ನೇಪಾಳ ತಂಡ ವಿಶ್ವಕಪ್ ಅರ್ಹತಾ ಪಂದ್ಯಾವಳಿಯ ಮೊದಲ ಗೆಲುವು ಸಾಧಿಸಿತು. ಆದರೆ ಯುಎಸ್ಎ ತನ್ನ ಎರಡನೇ ಪಂದ್ಯದದಲ್ಲಿಯೂ ಗೆಲುವು ಸಾಧಿಸಲಿಲ್ಲ. ಯುಎಸ್ಎ ತಂಡದ ನಾಲ್ಕು ವಿಕೆಟ್ ಪಡೆದ ಕೆಸಿ ಕರಣ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಈ ಹಿಂದೆ ಜಿಂಬಾಬ್ವೆ ವಿರುದ್ಧ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಸೋಲು ಕಂಡಿದ್ದ ನೇಪಾಳ ತಂಡ, ಇದೀಗ ಎ ಗುಂಪಿನಲ್ಲಿ ಮೂರನೇ ಸ್ಥಾನದಲ್ಲಿದ್ದರೆ, ಒಂದೂ ಗೆಲುವು ಕಾಣದ ಯುಎಸ್‌ಎ ನಾಲ್ಕನೇ ಸ್ಥಾನದಲ್ಲಿದೆ.
ನೇಪಾಳವು ತನ್ನ ಮುಂದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಜೂನ್ 22ರಂದು ಆಡಲಿದ್ದರೆ, ಯುಎಸ್ಎ ತಂಡ ಅದೇ ದಿನ ನೆದರ್ಲ್ಯಾಂಡ್ಸ್ ವಿರುದ್ಧ ಸೆಣಸಾಡಲಿದೆ.
ಮೂರು ವಾರಗಳ ಕ್ವಾಲಿಫೈಯರ್‌ನಲ್ಲಿ ಭಾಗವಹಿಸುವ 10 ತಂಡಗಳ ಪೈಕಿ ಎರಡು ತಂಡಗಳು ಮಾತ್ರ ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಭಾರತದಲ್ಲಿ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭಾಗವಹಿಸಲಿವೆ.