ಸೋಮವಾರ, ಜುಲೈ 3ರಂದು ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್ ಕ್ವಾಲಿಫೈಯರ್‌ನ ಸೂಪರ್ 6 ಪಂದ್ಯದಲ್ಲಿ ಓಮನ್ ತಂಡದ ವಿರುದ್ಧ ನೆದರ್ಲ್ಯಾಂಡ್ಸ್ ಭರ್ಜರಿಯಾಗಿ ಗೆಲುವು ದಾಖಲಿಸಿತು. ಇದೇ ವೇಳೆ ಮುಖ್ಯ ವಿಶ್ವಕಪ್ ಹಂತ ತಲುಪುವ ಭರವಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಓಮನ್ ವಿರುದ್ಧ ನಡೆದ ಮಳೆ-ಬಾಧಿತ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ತಂಡ ಡಕ್ವರ್ಥ್ ಲೂಯಿಸ್ ವಿಧಾನದ ಪ್ರಕಾರ 74 ರನ್‌ಗಳಿಂದ ಗೆದ್ದು ಬೀಗಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನೆದರ್ಲ್ಯಾಂಡ್ಸ್ 48 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 362 ರನ್ ಗಳಿಸಿತು. ಇನ್ನು ಓಮನ್ 44 ಓವರ್‌ಗಳಲ್ಲಿ 6 ವಿಕೆಟ್‌ಗೆ 246 ರನ್ ಗಳಿಸಲಷ್ಟೇ ಶಕ್ತವಾಯಿತು.

ನೆದರ್ಲ್ಯಾಂಡ್ಸ್ ತಂಡದ ಪರ ಆರಂಭಿಕ ವಿಕ್ರಮ್‌ಜಿತ್ ಸಿಂಗ್ 109 ಎಸೆತಗಳಲ್ಲಿ 11 ಬೌಂಡರಿ ಮತ್ತು 2 ಸಿಕ್ಸರ್ ಸಮೇತ 110 ರನ್ ಬಾರಿಸಿದರು. ಮ್ಯಾಕ್ಸ್ ಓ'ಡೌಡ್ 64 ಎಸೆತಗಳಲ್ಲಿ 35 ರನ್ ಗಳಿಸಿದರು.
ವೆಸ್ಲಿ ಬರ್ರೆಸಿ 65 ಎಸೆತಗಳಲ್ಲಿ 10 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 97 ರನ್, ಬಾಸ್ ಡಿ ಲೀಡೆ 39 ರನ್, ಸಕಿಬ್ ಜುಲ್ಫಿಕರ್ 33 ರನ್ ಗಳಿಸಿ ತಂಡದ ಮೊತ್ತ 350ರ ಗಡಿ ದಾಟಲು ನೆರವಾದರು.
ಓಮನ್ ತಂಡದ ಪರ ಬೌಲಿಂಗ್‌ನಲ್ಲಿ ಬಿಲಾಲ್ ಖಾನ್ 10 ಓವರ್‌ಗಳಲ್ಲಿ 75 ರನ್ ನೀಡಿ 3 ವಿಕೆಟ್, ಮೊಹಮ್ಮದ್ ನದೀಮ್ 4 ಓವರ್‌ಗಳಲ್ಲಿ 36 ರನ್ ನೀಡಿ 2 ವಿಕೆಟ್, ಫಯ್ಯಾಜ್ ಬಟ್ ಮತ್ತು ಆಯಾನ್ ಖಾನ್ ತಲಾ ಒಂದೊಂದು ವಿಕೆಟ್ ಪಡೆದರು.
ಇನ್ನು ಎರಡನೇ ಇನ್ನಿಂಗ್ಸ್‌ನಲ್ಲಿ ಓಮನ್ ತಂಡದ ಪರ ಆಯಾನ್ ಖಾನ್ 92 ಎಸೆತಗಳಲ್ಲಿ 11 ಬೌಂಡರಿ ಮತ್ತು 2 ಸಿಕ್ಸರ್ ಸಮೇತ 105 ರನ್ ಬಾರಿಸಿದರು. ಆರಂಭಿಕ ಕಶ್ಯಪ್ 25 ರನ್, ಶೋಯೆಬ್ ಖಾನ್ 46 ರನ್ ಗಳಿಸಿದರು. ಆದರೆ ತಂಡವನ್ನು ಗೆಲ್ಲಿಸಲು ವಿಫಲರಾದರು.
ಬೌಲಿಂಗ್‌ನಲ್ಲಿ ನೆದರ್ಲ್ಯಾಂಡ್ಸ್ ತಂಡದ ಪರ ಆರ್ಯನ್ ದತ್ 10 ಓವರ್‌ಗಳಲ್ಲಿ 31 ರನ್ ನೀಡಿ 3 ವಿಕೆಟ್ ಪಡೆದರೆ, ರ್ಯಾನ್ ಕ್ಲೇನ್ 9 ಓವರ್‌ಗಳಲ್ಲಿ 34 ರನ್ ನೀಡಿ 2 ವಿಕೆಟ್ ಪಡೆದರು. ನೆದರ್ಲ್ಯಾಂಡ್ಸ್ ಪರ ಶತಕ ಬಾರಿಸಿದ ವಿಕ್ರಮ್‌ಜಿತ್ ಸಿಂಗ್ ಪಂದ್ಯಶ್ರೇಷ್ಠ ಆಟಗಾರ ಪ್ರಶಸ್ತಿಗೆ ಭಾಜನರಾದರು.