World Cup 2023: ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಶತಕ ಸಿಡಿಸಿ ಸಚಿನ್ ತೆಂಡೂಲ್ಕರ್ ದಾಖಲೆ ಸರಿಗಟ್ಟಿದ ರಚಿನ್ ರವೀಂದ್ರ
ಶನಿವಾರ, ಅಕ್ಟೋಬರ್ 28ರಂದು ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧದ ರೋಚಕ ಪಂದ್ಯದಲ್ಲಿ ನ್ಯೂಜಿಲೆಂಡ್ ಯುವ ಬ್ಯಾಟರ್ ರಚಿನ್ ರವೀಂದ್ರ 2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಮತ್ತೊಂದು ಸ್ಫೋಟಕ ಪ್ರದರ್ಶನ ನೀಡಿದರು.
ಆದರೂ, ನ್ಯೂಜಿಲೆಂಡ್ ವಿರುದ್ಧ ಮಾಜಿ ಚಾಂಪಿಯನ್ ಆಸ್ಟ್ರೇಲಿಯಾ ತಂಡ 5 ರನ್‌ಗಳ ರೋಚಕ ಗೆಲುವು ದಾಖಲಿಸಿದೆ. ಈ ಮೂಲಕ ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ತಂಡ ಸತತ ಮೂರನೇ ಗೆಲುವು ಸಾಧಿಸಿ ಸೆಮಿಫೈನಲ್ ಹಾದಿಯನ್ನು ಜೀವಂತವಾಗಿರಿಸಿಕೊಂಡರೆ, ಟಾಮ್ ಲ್ಯಾಥಮ್ ನೇತೃತ್ವದ ನ್ಯೂಜಿಲೆಂಡ್ ತಂಡ ಸತತ ಎರಡನೇ ಸೋಲು ಅನುಭವಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ಧರ್ಮಶಾಲಾದಲ್ಲಿ ರನ್‌ಗಳ ಹೊಳೆಯನ್ನೇ ಹರಿಸಿದರು. ಟ್ರಾವಿಸ್ ಹೆಡ್ ಮತ್ತು ಡೇವಿಡ್ ವಾರ್ನರ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ 49.2 ಓವರ್‌ಗಳಲ್ಲಿ 388 ರನ್‌ಗಳಿಗೆ ಆಲೌಟ್ ಆಯಿತು.
ಆಸ್ಟ್ರೇಲಿಯಾ ನೀಡಿದ್ದ 389 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ 50 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 383 ರನ್ ಗಳಿಸಿ ಕೇವಲ 5 ರನ್‌ಗಳ ಅಂತರದಿಂದ ಸೋಲು ಕಂಡಿತು.
ಸಚಿನ್ ತೆಂಡೂಲ್ಕರ್ ಸರಿಗಟ್ಟಿದ ರಚಿನ್ ರವೀಂದ್ರ
ನ್ಯೂಜಿಲೆಂಡ್‌ನ ರಚಿನ್ ರವೀಂದ್ರ ಬಿರುಸಿನ ಶೈಲಿಯಲ್ಲಿ ಬ್ಯಾಟಿಂಗ್ ಮಾಡಿ ಕೇವಲ 77 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಶತಕದ ಮೂಲಕ ಭಾರತದ ಲೆಜೆಂಡ್ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ವಿಶೇಷ ದಾಖಲೆಯೊಂದನ್ನು ಸರಿಗಟ್ಟಿದರು.

24 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಎರಡು ಶತಕಗಳನ್ನು ಗಳಿಸಿದ ಕೇವಲ ಇಬ್ಬರು ಆಟಗಾರರಿದ್ದಾರೆ. ಒಬ್ಬರು ಸಚಿನ್ ತೆಂಡೂಲ್ಕರ್ (1996ರ ವಿಶ್ವಕಪ್) ಮತ್ತು ರಚಿನ್ ರವೀಂದ್ರ (2023ರ ವಿಶ್ವಕಪ್).
ರಚಿನ್ ರವೀಂದ್ರ ಅವರ ತಂದೆ ಕರ್ನಾಟಕದ ಬೆಂಗಳೂರು ಮೂಲದವರಾಗಿದ್ದು, ಭಾರತೀಯ ದಿಗ್ಗಜರಾದ ರಾಹುಲ್ ದ್ರಾವಿಡ್ ಮತ್ತು ಸಚಿನ್ ತೆಂಡೂಲ್ಕರ್ ಅವರ ದೊಡ್ಡ ಅಭಿಮಾನಿಯಾಗಿದ್ದರು. ರಚಿನ್ ಜನಿಸಿದ ನಂತರ, ಅವರ ತಂದೆ ರಾಹುಲ್ ದ್ರಾವಿಡ್‌ನಿಂದ 'ರಾ' ಮತ್ತು ಸಚಿನ್‌ನಿಂದ 'ಚಿನ್' ಅನ್ನು ತೆಗೆದುಕೊಂಡು ಎರಡನ್ನೂ ಸೇರಿಸಿ 'ರಚಿನ್' ಎಂಬ ಹೆಸರನ್ನು ಇಟ್ಟರು.
ರಚಿನ್ ರವೀಂದ್ರ 2019ರ ಏಕದಿನ ವಿಶ್ವಕಪ್ ಪಂದ್ಯಾವಳಿಯನ್ನು ಅಭಿಮಾನಿಯಾಗಿ ವೀಕ್ಷಿಸಿದರು ಮತ್ತು ಇದೀಗ ಅವರು 2023ರ ವಿಶ್ವಕಪ್‌ನ ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ತಂಡದ ಪರ ಅದ್ಭುತ ಪ್ರದರ್ಶನ ನೀಡಿದವರಲ್ಲಿ ಒಬ್ಬರಾದರು.
ಇನ್ನು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಪಂದ್ಯಕ್ಕೆ ಬರುವುದಾದರೆ, ರಚಿನ್ ರವೀಂದ್ರ ಅವರ ಭರ್ಜರಿ ಶತಕ ಮತ್ತು ಜೇಮ್ಸ್ ನೀಶಾಮ್ ಅವರ ಹೋರಾಟದ ಪ್ರದರ್ಶನ ವ್ಯರ್ಥವಾಯಿತು. ಏಕೆಂದರೆ, ಆಸ್ಟ್ರೇಲಿಯಾ ನೀಡಿದ 389 ರನ್‌ಗಳನ್ನು ಬೆನ್ನಟ್ಟಲು ವಿಫಲವಾಯಿತು.
ಆರು ಪಂದ್ಯಗಳಲ್ಲಿ ನಾಲ್ಕು ಗೆಲುವು ಮತ್ತು ಎರಡು ಸೋಲುಗಳೊಂದಿಗೆ ಒಟ್ಟು ಎಂಟು ಅಂಕಗಳೊಂದಿಗೆ ಆಸ್ಟ್ರೇಲಿಯಾ ನಾಲ್ಕನೇ ಸ್ಥಾನದಲ್ಲಿದ್ದರೆ, ಅಷ್ಟೇ ಗೆಲುವು-ಸೋಲು ಮತ್ತು ಅಂಕಗಳೊಂದಿಗೆ ಉತ್ತಮ ನೆಟ್ ರನ್-ರೇಟ್ ಮೂಲಕ ನ್ಯೂಜಿಲೆಂಡ್ ಮೂರನೇ ಸ್ಥಾನದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications