ವಿಶ್ವಕಪ್ 2023: ಎಲ್ಲಿ ನಡೆಯಲಿದೆ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯ?: ಇಲ್ಲಿದೆ ಮಾಹಿತಿ
ಏಕದಿನ ವಿಶ್ವಕಪ್ ಟೂರ್ನಿಗೆ ದಿನಗಣನೆ ಆರಂಭವಾಗಿದ್ದು ಬಹುನಿರೀಕ್ಷಿತ ವೇಳಾಪಟ್ಟಿ ಇಂದು(ಜೂನ್ 27) ಬಿಡುಗಡೆಯಾಗಿದೆ. ವೇಳಾಪಟ್ಟಿ ವಿಚಾರವಾಗಿ ಸಾಕಷ್ಟು ಕುತೂಹಲಗಳು ಮೂಡಿದ್ದು ಆ ಎಲ್ಲಾ ಕುತೂಹಲಗಳಿಗೆ ಈಗ ತೆರೆಬಿದ್ದಿದೆ. ಯಾವೆಲ್ಲಾ ತಾಣಗಳಲ್ಲಿ ಯಾವ ಪಂದ್ಯಗಳು ನಡೆಯಲಿದೆ ಎಂಬುದು ಈಗ ಅಧಿಕೃತವಾಗಿ ಘೋಷಣೆಯಾಗಿದೆ.
ಇನ್ನು ಈ ಬಾರಿಯ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ಎಲ್ಲಿ ನಡೆಯಲಿದೆ ಎಂಬುದು ಕೂಡ ಸಾಕಷ್ಟು ಕುತೂಹಲ ಮೂಡಿಸಿದ್ದ ಅಂಶ. ಈ ಪ್ರಶ್ನೆಗೂ ಉತ್ತರ ದೊರೆತಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣ ಹಾಗೂ ಕೊಲ್ಕತ್ತಾದ ಐತಿಹಾಸಿಕ ಈಡನ್ ಗಾರ್ಡನ್ ಸೆಮಿಫೈನಲ್ ಪಂದ್ಯಗಳಿಗೆ ವೇದಿಕೆಯಾಗಿದ್ದು ನಿರೀಕ್ಷೆಯಂತೆಯೇ ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಫೈನಲ್ ಪಂದ್ಯಕ್ಕೆ ವೇದಿಕೆಯಾಗಲಿದೆ.

ಮೊದಲ ಸೆಮಿಫೈನಲ್ ಪಂದ್ಯ ನವೆಂಬರ್ 15 ಬುಧವಾರ ಆಯೋಜನೆಯಾಗಲಿದ್ದು ವಾಂಖೆಡೆ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಇನ್ನು ಕೊಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆಯಲಿರುವ ಎರಡನೇ ಸೆಮಿಫೈನಲ್ ಪಂದ್ಯ ನವೆಂಬರ್ 16 ಗುರುವಾರದಂದು ಆಯೋಜನೆಯಾಗಲಿದೆ. ಇನ್ನು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯ ನವೆಂಬರ್ 19 ಭಾನುವಾರ ನಡೆಯಲಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನ ಸಂಪೂರ್ಣ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಅಕ್ಟೋಬರ್ 5ರಿಂದ ಈ ವಿಶ್ವಕಪ್ ಟೂರ್ನಿ ಆರಂಭವಾಗಲಿದ್ದು ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ರನ್ನರ್‌ಅಪ್ ನ್ಯೂಜಿಲಂಡ್ ತಂಡಗಳ ನಡುವಿನ ಮುಖಾಮುಖಿಯೊಂದಿಗೆ ಟೂರ್ನಿ ಚಾಲನೆ ಪಡೆಯಲಿದೆ.
ಭಾರತ ತನ್ನ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಅಕ್ಟೋಬರ್ 8ರಂದು ಆಡಲಿದ್ದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂ ಈ ಪಂದ್ಯಕ್ಕೆ ಆತಿಥ್ಯ ಒದಗಿಸಲಿದೆ. ಅದಾದ ಬಳಿಕ ಅಫ್ಘಾನಿಸ್ತಾನದ ವಿರುದ್ಧ ಎರಡನೇ ಪಂದ್ಯವನ್ನಾಡಲಿದ್ದು ನವೆಂಬರ್ 11ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಈ ಪಂದ್ಯ ಆಯೋಜನೆಗೊಳ್ಳಲಿದೆ. ಭಾರತದ ಉಳಿದ ಪಂದ್ಯಗಳು ಪಾಕಿಸ್ತಾನ, ಬಾಂಗ್ಲಾದೇಶ, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ನಡೆಯಲಿದ್ದು ಕ್ರಮವಾಗಿ ಅಕ್ಟೋಬರ್ 15, 19, 22 ಮತ್ತು 29ರಂದು ಆಯೋಜನೆಯಾಗಲಿದೆ.
ಇನ್ನು ಭಾರತ ಹಾಗೂ ಪಾಕಿಸ್ತಾನ ನಡುವಿನ ಲೀಗ್ ಹಂತದ ಪಂದ್ಯವನ್ನು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಡಲು ಪಾಕಿಸ್ತಾನ ಹಿಂದೇಟು ಹಾಕಿತ್ತು. ನಾಕೌಟ್ ಹೊರತುಪಡಿಸಿ ಉಳಿದ ಪಂದ್ಯಗಳನ್ನು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಡಲು ಅಸಮ್ಮತಿಸಿತ್ತು. ಇದೇ ವಿಚಾರವಾಗಿ ಐಸಿಸಿ, ಬಿಸಿಸಿಐ ಹಾಗೂ ಪಿಸಿಬಿ ನಡುವೆ ಸಾಕಷ್ಟು ಹಗ್ಗಜಗ್ಗಾಟಕ್ಕೆ ಕಾರಣವಾಗಿತ್ತು. ಆದರೆ ಕಡೆಗೂ ಪಾಕಿಸ್ತಾನ ಲೀಗ್ ಹಂತದಲ್ಲಿ ಭಾರತದ ವಿರುದ್ಧದ ಪಂದ್ಯವನ್ನು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಡುವುದು ದೃಢಪಟ್ಟಿದೆ. ಪಾಕಿಸ್ತಾನ ಉಳಿದ ಪಂದ್ಯಗಳನ್ನು ಹೈದರಾಬಾದ್, ಚೆನ್ನೈ ಹಾಗೂ ಬೆಂಗಳೂರಿನಲ್ಲಿ ಆಡಲಿದೆ.
ಇನ್ನು ಮತ್ತೊಂದೆಡೆ ಐಸಿಸಿ ವಿಶ್ವಕಪ್‌ನ ಅರ್ಹತಾ ಪಂದ್ಯಗಳು ಪ್ರಸ್ತುತ ಜಿಂಬಾಬ್ವೆಯಲ್ಲಿ ನಡೆಯುತ್ತಿವೆ. ಈ ಟೂರ್ನಿಯಲ್ಲಿ ಭಾಗವಹಿಸಿರುವ ತಂಡಗಳ ಪೈಕಿ ಯುನೈಟೆಡ್ ಸ್ಟೇಟ್ಸ್, ಐರ್ಲೆಂಡ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಈಗಾಗಲೇ ಹೊರಬಿದ್ದಿವೆ. ಉಳಿದಂತೆ ವೆಸ್ಟ್ ಇಂಡೀಸ್, ಸ್ಕಾಟ್ಲೆಂಡ್, ಜಿಂಬಾಬ್ವೆ, ನೆದರ್ಲೆಂಡ್ಸ್, ಶ್ರೀಲಂಕಾ ಮತ್ತು ಒಮಾನ್ ತಂಡಗಳು ಸ್ಪರ್ಧೆಯಲ್ಲಿ ಉಳಿದುಕೊಂಡಿದೆ.
ಭಾರತದ ನೆಲದಲ್ಲಿ ನಡೆಯಲಿರುವ ಮೆಗಾ ಈವೆಂಟ್‌ನಲ್ಲಿ ಉಳಿದ ಎರಡು ಸ್ಥಾನಗಳಿಗಾಗಿ ಇವುಗಳು ಹೋರಾಡುತ್ತಿದ್ದು ಈ ಆರು ತಂಡಗಳ ಪೈಕಿ ಮುಖ್ಯ ಟೂರ್ನಿಗೆ ಅರ್ಹತೆ ಪಡೆಯುವ ಆ ಎರಡು ತಂಡಗಳು ಯಾವುದು ಎಂಬುದು ಕೂಡ ಕುತೂಹಲ ಮೂಡಿಸಿದೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications