ಈ ಬಾರಿಯ ವಿಶ್ವಕಪ್‌ನಲ್ಲಿ ಶ್ರೀಲಂಕಾ ತಂಡ ಹೀನಾಯ ಪ್ರದರ್ಶನ ನೀಡಿದ್ದು ಲೀಗ್ ಹಂತದಿಂದಲೇ ಹೊರಬೀಳುವುದು ಖಚಿತವಾಗಿದೆ. ಈವರೆಗೆ ಆಡಿರುವ 7 ಪಂದ್ಯಗಳಲ್ಲಿ ಶ್ರೀಲಂಕಾ ತಂಡ 5 ಸೋಲು ಅನುಭವಿಸಿದ್ದು ಎರಡು ಗೆಲುವಿನೊಂದಿಗೆ ಕೇವಲ ನಾಲ್ಕು ಅಂಕಗಳನ್ನು ಮಾತ್ರವೇ ಗಳಿಸಿಕೊಂಡಿದೆ. ಇನ್ನು ಟೀಮ್ ಇಂಡಿಯಾ ವಿರುದ್ಧ ಆಡಿದ ಕೊನೆಯ ಪಂದ್ಯದಲ್ಲಿ ಲಂಕಾ 302 ರನ್‌ಗಳ ಅಂತರದ ಭಾರೀ ಸೋಲಿನ ಮುಖಭಂಗಕ್ಕೆ ಒಳಗಾಗಿದೆ.
ಈ ಅವಮಾನಕರ ಸೋಲಿನ ಬಳಿಕ ಶ್ರೀಲಂಕಾ ಮಂಡಳಿಯ ವಿರುದ್ಧ ಅಭಿಮಾನಿಗಳು ಸಿಡಿದೆದ್ದಿದ್ದರು. ಇದೀಗ ಶ್ರೀಲಂಕಾ ಕ್ರೀಡಾ ಸಚಿವರು ಲಂಕಾ ಕ್ರಿಕೆಟ್ ಮಂಡಳಿಯನ್ನು ಸಂಪೂರ್ಣವಾಗಿ ವಜಾಗೊಳಿಸಿದ್ದು ನೂತನ ಸಮಿತಿ ಅಸ್ಥಿತ್ವಕ್ಕೆ ಬಂದಿದೆ. ಭಾರತದ ವಿರುದ್ಧದ ಭಾರೀ ಸೋಲಿನ ಬಳಿಕ ಕಳೆದ ಶುಕ್ರವಾರ ಲಂಕಾ ಮಂಡಳಿಯ ವಿರುದ್ಧ ಹರಿಹಾಯ್ದಿದ್ದ ಲಂಕಾ ಕ್ರೀಡಾ ಸಚಿವ ರೋಷನ್ ರಣಸಿಂಘೆ ಮಂಡಳಿಯ ಪದಾಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಕಿಡಿಕಾರಿದ್ದು ಮಂಡಳಿಯ ಸದಸ್ಯರೆಲ್ಲರೂ ತಕ್ಷಣವೇ ರಾಜೀನಾಮೆ ನೀಡುವಂತೆ ಸೂಚಿಸಿದ್ದರು.

ಇದಾದ ಬಳಕ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಕಾರ್ಯದರ್ಶಿ ಸಂಸ್ಥೆಯಲ್ಲಿ ಎರಡನೇ ಅತ್ಯುನ್ನತ ಸ್ಥಾನವನ್ನು ಹೊಂದಿದ್ದ ಮೋಹನ್ ಡಿ ಸಿಲ್ವಾ ಅವರು ಮಂಡಳಿಯ ಪ್ರಧಾನ ಕಚೇರಿಯ ಹೊರಗೆ ಅಭಿಮಾನಿಗಳ ಪ್ರತಿಭಟನೆಯ ನಡುವೆ ಶನಿವಾರ ರಾಜೀನಾಮೆ ನೀಡಿದರು.
1996ರಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡವನ್ನು ತಮ್ಮ ಏಕೈಕ ವಿಶ್ವಕಪ್ ಪ್ರಶಸ್ತಿಗೆ ಮುನ್ನಡೆಸಿದ ಅರ್ಜುನ ರಣತುಂಗ ಅವರನ್ನು ಮಂಡಳಿಯ ಹಂಗಾಮಿ ಅಧ್ಯಕ್ಷರಾಗಿ ನೇಮಿಸಲಾಗಿದೆ ಎಂದು ರಣಸಿಂಘೆ ಹೇಳಿದ್ದಾರೆ. ಹೊಸದಾಗಿ ರಚಿಸಲಾದ ಏಳು ಸದಸ್ಯರ ಸಮಿತಿಯು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಮತ್ತು ಮಾಜಿ ಮಂಡಳಿಯ ಅಧ್ಯಕ್ಷರನ್ನು ಸಹ ಒಳಗೊಂಡಿದೆ.
ಕೇವಲ ಎರಡು ಗೆಲುವು ಸಾಧಿಸಿರುವ ಲಂಕಾ
ಶ್ರೀಲಂಕಾ ತಂಡ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಈವರೆಗೆ ಆಡಿರುವ 7 ಪಂದ್ಯಗಳಲ್ಲಿ ಕೇವಲ ಎರಡು ಪಂದ್ಯಗಳಲ್ಲಿ ಮಾತ್ರವೇ ಗೆಲುವು ಸಾಧಿಸಿದೆ. ನೆದರ್ಲೆಂಡ್ಸ್ ಹಾಗೂ ಇಂಗ್ಲೆಂಡ್ ತಂಡಗಳ ವಿರುದ್ಧ ಮಾತ್ರವೇ ಶ್ರೀಲಂಕಾ ಗೆಲುವು ಸಾಧಿಸಿದೆ. ಈ ಮೂಲಕ ಕೇವಲ ನಾಲ್ಕು ಅಂಕಗಳನ್ನು ಖಾತೆಯಲ್ಲಿ ಹೊಂದಿದೆ. ಪ್ರಸ್ತುತ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದು 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವ ಅರ್ಹತೆ ಗಳಿಸಲು ತನ್ನ ಹೋರಾಟ ಮುಂದುವರಿಸಲಿದೆ.