ಮುಂಬರುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗಾಗಿ ದಿನಗಣನೆ ಆರಂಭವಾಗಿದ್ದು, ಭಾರತದಲ್ಲಿ ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಐಸಿಸಿ ಟೂರ್ನಿ ನಡೆಯಲಿದೆ. ಈಗಾಗಲೇ ಅಂತಿಮ ಹಾಗೂ ಸಂಪೂರ್ಣ ವೇಳಾಪಟ್ಟಿಯೂ ಬಿಡುಗಡೆಗೊಂಡಿದೆ.
ಅಕ್ಟೋಬರ್ 5ರಂದು ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವು ಕಳೆದ ಬಾರಿಯ ಫೈನಲಿಸ್ಟ್ ನ್ಯೂಜಿಲೆಂಡ್ ತಂಡವನ್ನು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಎದುರಿಸುವುದರೊಂದಿಗೆ ವಿಶ್ವಕಪ್ ಪಂದ್ಯಾವಳಿಗೆ ಚಾಲನೆ ಸಿಗಲಿದೆ.
ಇನ್ನು ಆತಿಥೇಯ ಭಾರತ ತಂಡವು ಅಕ್ಟೋಬರ್ 8ರಂದು ಚೆನ್ನೈನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದೊಂದಿಗೆ ತನ್ನ ಅಭಿಯಾನ ಆರಂಭಿಸಲಿದ್ದು, ಅಕ್ಟೋಬರ್ 15ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಹೈ-ವೋಲ್ಟೇಜ್ ಪಂದ್ಯವನ್ನು ಅಹಮದಾಬಾದ್‌ನಲ್ಲಿ ಆಡಲಿದೆ.

ಇದೆ ವೇಳೆ ಭಾರತದ ಮಾಜಿ ಸ್ಫೋಟಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಅವರು 2023ರ ಏಕದಿನ ವಿಶ್ವಕಪ್‌ನಲ್ಲಿ ಸೆಮಿಫೈನಲ್ ತಲುಪುವ ತಂಡಗಳನ್ನು ಆಯ್ಕೆ ಮಾಡಿದ್ದಾರೆ. ಈ ನಾಲ್ಕು ತಂಡಗಳು ನಾಕೌಟ್ ಹಂತಕ್ಕೆ ಅರ್ಹತೆ ಪಡೆಯಲಿವೆ ಎಂದು ತಮ್ಮ ಅಭಿಪ್ರಾಯವನ್ನು ನೀಡಿದರು.
"ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ ಮತ್ತು ಪಾಕಿಸ್ತಾನ ತಂಡಗಳು 2023ರ ಏಕದಿನ ವಿಶ್ವಕಪ್‌ನಲ್ಲಿ ಸೆಮಿಫೈನಲ್ ತಲುಪಲಿವೆ. ಇನ್ನು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ಖಂಡಿತವಾಗಿಯೂ ಸೆಮಿಫೈನಲ್‌ನಲ್ಲಿ ಇರುತ್ತವೆ," ಎಂದಿದ್ದಾರೆ.
ಆಸ್ಟ್ರೇಲಿಯಾ, ಇಂಗ್ಲೆಂಡ್ ತಂಡಗಳು ಕ್ರಿಕೆಟ್ ಆಡುವ ರೀತಿಯಿಂದಾಗಿ ಖಂಡಿತ ಸೆಮಿಸ್‌ನಲ್ಲಿರುತ್ತಾರೆ. ಅವರು ಸಾಂಪ್ರದಾಯಿಕ ಶಾಟ್‌ಗಳನ್ನು ಆಡುವುದಿಲ್ಲ, ಅಸಾಂಪ್ರದಾಯಿಕ ಶಾಟ್‌ಗಳನ್ನು ಆಡುವುದರಿಂದಾಗಿ ಈ ಎರಡು ತಂಡಗಳು ಉತ್ತಮವಾಗಿವೆ ಎಂದು ತಿಳಿಸಿದ್ದಾರೆ.
ಅಲ್ಲದೆ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಈ ಎರಡು ವಿದೇಶಿ ತಂಡಗಳು ಭಾರತದಲ್ಲಿ ಉತ್ತಮ ಕ್ರಿಕೆಟ್ ಆಡಬಲ್ಲವು,'' ಎಂದು ಐಸಿಸಿ ವೇಳಾಪಟ್ಟಿ ಬಿಡುಗಡೆ ಸಮಾರಂಭದಲ್ಲಿ ವೀರೇಂದ್ರ ಸೆಹ್ವಾಗ್ ತಿಳಿಸಿದರು.
ಶ್ರೀಲಂಕಾ ತಂಡದ ಮಾಜಿ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಮಾತನಾಡಿ, ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯವನ್ನು ವೀಕ್ಷಿಸಲು ನಾನು ಖಂಡಿತ ಉತ್ಸುಕನಾಗಿದ್ದೇನೆ. ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ ಎಂದು ಹೇಳಿದರು.,
"ನಾನು ಭಾರತ ಮತ್ತು ಇಂಗ್ಲೆಂಡ್ ತಂಡಗಳು ಹೋರಾಡುವುದನ್ನು ನೋಡಲು ಎದುರು ನೋಡುತ್ತಿದ್ದೇನೆ. ತವರಿನಲ್ಲಿ ಆಡುತ್ತಿರುವುದರಿಂದ ಭಾರತವು ನೆಚ್ಚಿನ ತಂಡಗಳಲ್ಲಿ ಒಂದಾಗಿದೆ ಮತ್ತು ಭಾರತದಲ್ಲಿ ಹೇಗೆ ಗೆಲ್ಲಬೇಕೆಂದು ತಂಡಕ್ಕೆ ತಿಳಿದಿದೆ. ಇದು ತುಂಬಾ ಆಸಕ್ತಿದಾಯಕ ಪಂದ್ಯವಾಗಲಿದೆ. ನಾನು ಆ ಪಂದ್ಯವನ್ನು ವೀಕ್ಷಿಸಲು ಬಯಸುತ್ತೇನೆ," ಎಂದು ಮುತ್ತಯ್ಯ ಮುರಳೀಧರನ್ ಹೇಳಿದ್ದಾರೆ.
ಇನ್ನು ಭಾರತ ಮತ್ತು ಪಾಕಿಸ್ತಾನ ತಂಡಗಳ ವಿಷಯಕ್ಕೆ ಬಂದರೆ, ಈ ಹಿಂದೆ ಏಕದಿನ ವಿಶ್ವಕಪ್‌ನಲ್ಲಿ ಏಳು ಬಾರಿ 1992, 1996, 1999, 2003, 2011, 2015 ಮತ್ತು 2019ರಲ್ಲಿ ಮುಖಾಮುಖಿಯಾಗಿವೆ.
ಆದರೆ, 50 ಓವರ್‌ಗಳ ಸ್ವರೂಪದ ವಿಶ್ವಕಪ್ ಪಂದ್ಯಗಳಲ್ಲಿ ಪಾಕಿಸ್ತಾನ ತಂಡವು ಭಾರತವನ್ನು ಸೋಲಿಸಲು ಇನ್ನೂ ಸಾಧ್ಯವಾಗಿಲ್ಲ ಎಂಬುದು ಗಮನಾರ್ಹ. 1992 ಮತ್ತು 2007ರಲ್ಲಿ ಎರಡು ಬಾರಿ ಮಾತ್ರ ಎರಡು ಸಾಂಪ್ರದಾಯಿಕ ತಂಡಗಳು ಪರಸ್ಪರ ಸೆಣಸಾಡಲಿಲ್ಲ.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧದ ಇತ್ತೀಚಿನ ಸೋಲಿಗೆ ಸೇಡು ತೀರಿಸಿಕೊಳ್ಳಲು, ಆತಿಥೇಯ ಭಾರತ ತಂಡಕ್ಕೆ ಚೆನ್ನೈನಲ್ಲಿ ಅಕ್ಟೋಬರ್ 8ರಂದು ನಡೆಯುವ ಪಂದ್ಯ ಒಂದೊಳ್ಳೆ ಅವಕಾಶವಾಗಿದೆ.
ನ್ಯೂಜಿಲೆಂಡ್, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಗಳು ರೋಹಿತ್ ಶರ್ಮಾ ಬಳಗದ ವಿಶ್ವಕಪ್ ಭವಿಷ್ಯವನ್ನು ನಿರ್ಣಯಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ.