ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಎಲ್ಲ ತಂಡಗಳೂ ಸಹ ಅಳೆದು ತೂಗಿ ತಂಡವನ್ನು ಪ್ರಕಟಿಸಿವೆ. ಭಾರತ ಸಹ ಈ ಮೆಗಾ ಟೂರ್ನಿಗೆ ಈಗಾಗಲೇ ತಂಡವನ್ನು ಪ್ರಕಟಿಸಿದ್ದು, ಯುವ ಆಲ್ ರೌಂಡರುಗಳಿಗೆ ಮಣೆ ಹಕಲಾಗಿದೆ. ಅನುಭವಿ ಆಟಗಾರರನ್ನು ಬಿಟ್ಟು, ಯುವಕರಿಗೆ ಮಣೆ ಹಾಕಿದ್ದಕ್ಕೆ ಆರಂಭದಲ್ಲಿ ಟೀಕೆಗಳು ಸಹ ಕೇಳಿ ಬಂದವು. ಆದರೆ ಶ್ರೀಲಂಕಾದಲ್ಲಿ ನಡೆದ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇದಕ್ಕೆ ಉತ್ತರ ಸಿಕ್ಕಿದೆ.
ಏಷ್ಯಾ ಕಪ್ ನಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನವನ್ನು ನೀಡುತ್ತಿದೆ. ಸೂಪರ್ 4 ಹಂತದ ಪಂದ್ಯದಲ್ಲಿ ಟೀಮ್ ಇಂಡಿಯಾ ಮೊದಲೆರಡೂ ಪಂದ್ಯಗಳನ್ನು ಗೆದ್ದು ನೇರವಾಗಿ ಫೈನಲ್ ಗೆ ಅರ್ಹತೆ ಪಡೆದಿತ್ತು.

ಹೀಗಾಗಿ ಬಾಂಗ್ಲಾ ದೇಶದ ವಿರುದ್ಧ ಪಂದ್ಯದಲ್ಲಿ ಟೀಮ್ ಇಂಡಿಯಾ ಬೆಂಚ್ ಸ್ಟ್ರೆಂತ್ ಪರೀಕ್ಷೆ ಮಾಡಲು ಮುಂದಾಯಿತು. ಪರಿಣಾಮ ತಂಡದಲ್ಲಿ ಯುವ ಆಟಗಾರ ಶಾರ್ದೂಲ್ ಠಾಕೂರ್ ಹಾಗೂ ಅಕ್ಷರ್ ಪಟೇಲ್ ಆಲ್ ರೌಂಡರ್ ಸ್ವರೂಪದಲ್ಲಿ ಸ್ಥಾನ ಪಡೆದರು.
ಬಾಂಗ್ಲಾ ವಿರುದ್ಧ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡ ಶಾರ್ದೂಲ್ ಠಾಕೂರ್ ಅಬ್ಬರಿಸಿದರು. ಅಲ್ಲದೆ ವಿಶ್ವಕಪ್ ತಂಡದಲ್ಲಿ ತಮ್ಮನ್ನು ಆಯ್ಕೆ ಮಾಡಿದನ್ನೂ ಸಮರ್ಥಿಸಿಕೊಂಡರು. ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಅನುಭವಿ ಮೊಹಮ್ಮದ್ ಶಮಿ ಜೊತೆ ಹೊಸ ಚೆಂಡನ್ನು ಹಂಚಿಕೊಂಡ ಶಾರ್ದೂಲ್ ಅಬ್ಬರಿಸಿದರು.
ಆರಂಭದಲ್ಲಿ ಕರಾರುವಕ್ ದಾಳಿ ಸಂಘಟಿಸಿದ ಶಾರ್ದೂಲ್ ಬಾಂಗ್ಲಾ ತಂಡಕ್ಕೆ ಶಾಕ್ ನೀಡಿದರು. ಪವರ್ ಪ್ಲೇ ನಲ್ಲಿ ಅಮೂಲ್ಯ ಎರಡು ವಿಕೆಟ್ ಕಬಳಿಸಿದ ಶಾರ್ದೂಲ್, ಎದುರಾಳಿ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಯಶಸ್ವಿಯಾದರು. ಅಲ್ಲದೆ ಭರ್ಜರಿ ಲಯದಲ್ಲಿದ್ದ ಶಕೀಬ್ ಅಲ್ ಹಸನ್ ಅವರನ್ನು ಖೆಡ್ಡಾಗೆ ಕೆಡವಿದರು. ಶಾರ್ದೂಲ್ ಎಸೆದ ಶಾರ್ಟ್ ಆಫ್ ಲೆಂತ್ ಎಸೆತವನ್ನು ತಪ್ಪಾಗಿ ತಿಳಿದ ಶಕೀಬ್ ಬೋಲ್ಡ್ ಆದರು.
ಏಷ್ಯಾ ಕಪ್ ಸೂಪರ್ 4 ಹಂತದ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಟೀಮ್ ಇಂಡಿಯಾ ಸೋಲು ಕಂಡಿದ್ದರೂ, ಶಾರ್ದೂಲ್ ಮೊನಚಾದ ದಾಳಿ ಸಂಘಟಿಸಿ ಮಿಂಚಿದರು. ಇವರು ಒಟ್ಟು ಮೂರು ವಿಕೆಟ್ ಕಬಳಿಸಿ ತಮ್ಮ ಸಾಮರ್ಥವನ್ನು ತೋರಿಸಿದರು.
ಇನ್ನು ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದ ಇನ್ನೋರ್ವ ಆಟಗಾರ ತನ್ನ ಘನತೆಗೆ ತಕ್ಕ ಆಟವನ್ನು ಆಡಿದ್ದಾರೆ. ಆಲ್ ರೌಂಡರ್ ಅಕ್ಷರ್ ಪಟೇಲ್ ಸೊಗಸಾದ ಆಟದ ಪ್ರದರ್ಶನ ನೀಡಿದರು. ಬೌಲಿಂಗ್ ನಲ್ಲಿ 5.22ರ ಸರಾಸರಿಯಲ್ಲಿ ರನ್ ನೀಡಿ 1 ವಿಕೆಟ್ ಕಬಳಿಸಿದರೆ, ಬ್ಯಾಟಿಂಗ್ ನಲ್ಲಿ 34 ಎಸೆತಗಳಲ್ಲಿ 3 ಬೌಂಡರಿ,2 ಸಿಕ್ಸರ್ ಸಿಡಿಸಿ ನೆರವಿನಿಂದ 42 ರನ್ ಸಿಡಿಸಿ ಗೆಲುವಿನ ಆಸೆಯನ್ನು ಚಿಗುರಿಸಿದರು.
ಈ ಇಬ್ಬರೂ ಸ್ಟಾರ್ ಆಟಗಾರರು ವಿಶ್ವಕಪ್ ಗೆ ಮುನ್ನ ಫಾರ್ಮ್ ಕಂಡುಕೊಂಡಿರುವುದು ಟೀಮ್ ಇಂಡಿಯಾದ ಮ್ಯಾನೇಜ್ಮೆಂಟ್ ತಲೆ ನೋವು ದೂರ ಮಾಡಿದೆ. ಅಲ್ಲದೆ ಬೇರೆ ತಂಡಗಳಿಗೆ ಶ್ರೀಲಂಕಾದಿಂದಲೇ ಪರೋಕ್ಷವಾಗಿ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ.