World Cup 2023: ಈ ಬಾರಿ ಈತನಿಗಾಗಿ ವಿಶ್ವಕಪ್ ಗೆಲ್ಲಿ; ಭಾರತ ತಂಡಕ್ಕೆ ಮನವಿ ಮಾಡಿದ ವೀರೇಂದ್ರ ಸೆಹ್ವಾಗ್
2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗಾಗಿ ದಿನಗಣನೆ ಆರಂಭವಾಗಿದ್ದು, ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಐಸಿಸಿ ಟೂರ್ನಿ ಭಾರತದಲ್ಲಿಯೇ ನಡೆಯಲಿದ್ದು, ಈಗಾಗಲೇ ಅಂತಿಮ ಹಾಗೂ ಸಂಪೂರ್ಣ ವೇಳಾಪಟ್ಟಿ ಹೊರಬಿದ್ದಿದೆ.
ಅಕ್ಟೋಬರ್ 5ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವು ಕಳೆದ ಬಾರಿಯ ಫೈನಲಿಸ್ಟ್ ನ್ಯೂಜಿಲೆಂಡ್ ತಂಡವನ್ನು ಎದುರಿಸುವುದರೊಂದಿಗೆ ವಿಶ್ವಕಪ್ ಪಂದ್ಯಾವಳಿಗೆ ಚಾಲನೆ ಸಿಗಲಿದೆ.

ಇನ್ನು ಆತಿಥೇಯ ಭಾರತ ತಂಡವು ಅಕ್ಟೋಬರ್ 8ರಂದು ಚೆನ್ನೈನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದೊಂದಿಗೆ ತನ್ನ ಅಭಿಯಾನ ಆರಂಭಿಸಲಿದ್ದು, ಅಕ್ಟೋಬರ್ 15ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಹೈ-ವೋಲ್ಟೇಜ್ ಪಂದ್ಯವನ್ನು ಅಹಮದಾಬಾದ್‌ನಲ್ಲಿ ಆಡಲಿದೆ.
ಕೊನೆಯ ಬಾರಿಗೆ 2011ರಲ್ಲಿ ಐಸಿಸಿ ಏಕದಿನ ವಿಶ್ವಕಪ್ ಸಹ ಆಯೋಜನೆ ಮಾಡಿದ್ದಾಗ ಗೆದ್ದ ನಂತರ, ಭಾರತ ತಂಡವು ತಮ್ಮ ಐಸಿಸಿ ಟ್ರೋಫಿ ಬರವನ್ನು ಎದುರಿಸುತ್ತಿದೆ. ಇದೀಗ ಅದನ್ನು ಕೊನೆಗೊಳಿಸಲು ಉತ್ತಮ ಅವಕಾಶವನ್ನು ಹೊಂದಿದೆ.
ವಿಶ್ವಕಪ್ ಪಂದ್ಯಾವಳಿಯ ತಯಾರಿಯು ಜೋರಾಗುತ್ತಿದ್ದಂತೆಯೇ, ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರು ಭಾರತ ತಂಡದ ಆಟಗಾರರಲ್ಲಿ ಮನವಿ ಮಾಡಿದ್ದಾರೆ. 2011ರ ಭಾರತ ತಂಡವು ಸಚಿನ್ ತೆಂಡೂಲ್ಕರ್‌ಗಾಗಿ ಮಾಡಿದಂತೆಯೇ, ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರಿಗಾಗಿ ಈ ಬಾರಿಯ ವಿಶ್ವಕಪ್ ಗೆಲ್ಲಲು ಪ್ರಯತ್ನಿಸಬೇಕೆಂದು ಬಯಕೆ ವ್ಯಕ್ತಪಡಿಸಿದ್ದಾರೆ.

2023ರ ವಿಶ್ವಕಪ್‌ನ ವೇಳಾಪಟ್ಟಿ ಪ್ರಕಟಿಸಿದ ನಂತರ ಸ್ಟಾರ್ ಸ್ಪೋರ್ಟ್ಸ್‌ನಲ್ಲಿನ ಮಾತುಕತೆಯಲ್ಲಿ ವೀರೇಂದ್ರ ಸೆಹ್ವಾಗ್ ಮಾತನಾಡಿ, ವಿರಾಟ್ ಕೊಹ್ಲಿ ಶ್ರೇಷ್ಠ ಆಟಗಾರನಾಗಿದ್ದರೂ, ಯಾವಾಗಲೂ ಇತರರಿಗೆ ಸಹಾಯ ಮಾಡಲು ಪ್ರಯತ್ನಿಸುವ ವ್ಯಕ್ತಿ ಎಂಬುದನ್ನು ತಿಳಿಸಿದ್ದಾರೆ.
"ಭಾರತ ತಂಡದ ಪ್ರತಿಯೊಬ್ಬರೂ ವಿರಾಟ್ ಕೊಹ್ಲಿಗೆ ಈ ವಿಶ್ವಕಪ್ ಗೆಲ್ಲುವ ಅಗತ್ಯವಿದೆ. ಆತ ಯಾವ ರೀತಿಯ ಶ್ರೇಷ್ಠ ಆಟಗಾರನೋ, ಶ್ರೇಷ್ಠ ವ್ಯಕ್ತಿಯೂ ಹೌದು. ಅವರು ಯಾವಾಗಲೂ ಯುವ ಆಟಗಾರರಿಗೆ ಸಹಾಯ ಮಾಡುತ್ತಾರೆ," ಎಂದು ಸೆಹ್ವಾಗ್ ಹೇಳಿದರು.
ಇದೇ ವೇಳೆ ವೀರೇಂದ್ರ ಸೆಹ್ವಾಗ್ ಅವರು ವಿರಾಟ್ ಕೊಹ್ಲಿ ಮತ್ತು ಸಚಿನ್ ತೆಂಡೂಲ್ಕರ್ ನಡುವೆ ಹೋಲಿಕೆಗಳನ್ನು ಎತ್ತಿ ತೋರಿಸಿದರು. ಇಬ್ಬರೂ ಯಾವಾಗಲೂ ಮೈದಾನದಲ್ಲಿ ತಮ್ಮ ಶೇ.100ರಷ್ಟನ್ನು ನೀಡುತ್ತಾರೆ ಎಂದರು.
"ವಿರಾಟ್ ಕೊಹ್ಲಿ ಅವರು ಲೆಜೆಂಡ್ ಸಚಿನ್ ತೆಂಡೂಲ್ಕರ್ ಅವರನ್ನು ಹೋಲುತ್ತಾರೆ. ಆತ ಆಡುವ ರೀತಿ, ಮಾತನಾಡುವ ರೀತಿ, ಆಟವನ್ನು ಅರ್ಥೈಸಿಕೊಳ್ಳುವ ರೀತಿ, ಅವರ ಉತ್ಸಾಹ ಮತ್ತು ಸಮರ್ಪಣೆ ನಂಬಲಾಸಾಧ್ಯವಾದುದು. ಆಟದಲ್ಲಿ ತಮ್ಮ ಶೇ.100ರಷ್ಟು ನೀಡುತ್ತಾರೆ," ಎಂದು ವೀರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟರು.
"ವಿರಾಟ್ ಕೊಹ್ಲಿ ಪ್ರಮುಖ ಪಂದ್ಯಾವಳಿ ಆಡಿದಾಗಲೆಲ್ಲಾ ತಂಡಕ್ಕಾಗಿ ಎಲ್ಲವನ್ನೂ ಮಾಡಿದ್ದಾರೆ ಮತ್ತು ತಂಡದಲ್ಲಿರುವ ಎಲ್ಲರಿಗಿಂತ ಹೆಚ್ಚಿನ ಕೊಡುಗೆ ನೀಡುತ್ತಾರೆ. ಈ ವಿಶ್ವಕಪ್‌ನಲ್ಲಿ ಉತ್ತಮವಾಗಿ ಆಡಲು ಇನ್ನಷ್ಟು ಉತ್ಸುಕರಾಗಿದ್ದಾರೆ ಎಂದು ನನಗೆ ಖಾತ್ರಿಯಿದೆ. ಈ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿಯನ್ನು ಜನರು ಹೆಚ್ಚು ಹುರಿದುಂಬಿಸುತ್ತಾರೆ," ಎಂದರು.
ಏಕದಿನ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ವಿರಾಟ್ ಕೊಹ್ಲಿ ಮುರಿಯಲು ಸಾಧ್ಯವೇ? ಎಂದು ಕೇಳಿದಾಗ, ಇದು ನಿಜವಾಗಲೂ ಸಾಧ್ಯ ಎಂದು ವೀರೇಂದ್ರ ಸೆಹ್ವಾಗ್ ತಿಳಿಸಿದರು.
"ನಾನು ಯಾವಾಗಲೂ ಯುವಕರಿಗೆ ಮತ್ತು ನನ್ನ ಮಕ್ಕಳಿಗೆ ವಿರಾಟ್ ಕೊಹ್ಲಿಯಿಂದ ಕಲಿಯಲು ಹೇಳುತ್ತೇನೆ. ಅವರು ಎಂದಿಗೂ ತಮ್ಮ ವಿಕೆಟ್ ಕಳೆದುಕೊಳ್ಳಲು ಬಯಸುವುದಿಲ್ಲ," ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹೇಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications