ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಭಾರತದಲ್ಲಿ ನಡೆಯಲಿರುವ 2023ರ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಕ್ಷಣಗಣನೆ ಆರಂಭವಾಗಿದ್ದು, ಇದಕ್ಕಾಗಿ ಕ್ರಿಕೆಟ್ ಜಗತ್ತು ಕಾತರದಿಂದ ಕಾಯುತ್ತಿದೆ.
ಅಕ್ಟೋಬರ್ 5ರಂದು ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಪಂದ್ಯದ ಮೂಲಕ ಅಧಿಕೃತವಾಗಿ ಐಸಿಸಿ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ಸಿಗಲಿದೆ. ಇನ್ನು ಆತಿಥೇಯ ಭಾರತ ತಂಡ ಅಕ್ಟೋಬರ್ 8ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಣಸುವುದರ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.
ಇದೇ ವೇಳೆ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 2023ರ ವಿಶ್ವಕಪ್ ಗೆದ್ದು, ಪಂದ್ಯಾವಳಿಯಲ್ಲಿ ಅಗ್ರ ಸ್ಕೋರರ್ ಆಗಲಿದ್ದಾರೆ ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಆಶಿಸಿದ್ದಾರೆ.

ವಿರಾಟ್ ಕೊಹ್ಲಿ ತಮ್ಮ ಪೀಳಿಗೆಯ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 13000ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇದೇ ವೇಳೆ 34 ವರ್ಷದ ಕೊಹ್ಲಿ 47 ಶತಕಗಳನ್ನು ಬಾರಿಸಿದ್ದಾರೆ, 50 ಓವರ್‌ಗಳ ಸ್ವರೂಪದಲ್ಲಿ ಸಚಿನ್ ತೆಂಡೂಲ್ಕರ್ ಅವರ ಸಾರ್ವಕಾಲಿಕ ದಾಖಲೆಯನ್ನು ಹಿಂದಿಕ್ಕಲು ಎರಡು ಶತಕಗಳ ಅವಶ್ಯಕತೆ ಇದೆ.
ಏಕದಿನ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಅಭೂತಪೂರ್ವ ಪ್ರದರ್ಶನ ತೋರಿದ್ದಾರೆ. ಇಲ್ಲಿಯವರೆಗೆ 2011, 2015 ಮತ್ತು 2019ರಲ್ಲಿ ಮೂರು ವಿಶ್ವಕಪ್‌ಗಳಲ್ಲಿ ಭಾಗವಹಿಸಿದ್ದಾರೆ.
ವಿಶ್ವಕಪ್ ಪಂದ್ಯಾವಳಿಗಳಲ್ಲಿ ವಿರಾಟ್ ಕೊಹ್ಲಿ ಒಟ್ಟು 26 ಪಂದ್ಯಗಳನ್ನು ಆಡಿದ್ದು, 46.81ರ ಪ್ರಭಾವಶಾಲಿ ಸರಾಸರಿಯೊಂದಿಗೆ 1030 ರನ್ ಗಳಿಸಿದರು. ವಿಶ್ವಕಪ್‌ನಲ್ಲಿ ಅವರ ಗರಿಷ್ಠ ಸ್ಕೋರ್ 107 ರನ್ ಆಗಿದೆ.
ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ವಿಶ್ವಕಪ್ ಪಂದ್ಯಾವಳಿಯಲ್ಲಿ ಆರು ಅರ್ಧಶತಕಗಳು ಮತ್ತು ಎರಡು ಶತಕಗಳನ್ನು ಗಳಿಸಿದ್ದಾರೆ. 2019ರ ಆವೃತ್ತಿಯಲ್ಲಿ ಒಂದೇ ವಿಶ್ವಕಪ್‌ನಲ್ಲಿ ಸತತ ಐದು ಅರ್ಧ ಶತಕಗಳನ್ನು ಬಾರಿಸಿದ ಏಕೈಕ ಬ್ಯಾಟರ್ ಆಗಿದ್ದಾರೆ.
ಆದಾಗ್ಯೂ, 2019ರ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಶತಕ ಗಳಿಸಲು ಸಾಧ್ಯವಾಗಲಿಲ್ಲ. ವೀರೇಂದ್ರ ಸೆಹ್ವಾಗ್ ಈ ಬಾರಿ ಶತಕಗಳು ಬರಲಿವೆ ಎಂದು ಭಾವಿಸಿದ್ದಾರೆ.
ಕ್ರಿಕ್‌ಬಝ್‌ನೊಂದಿಗೆ ಮಾತನಾಡಿರುವ ಮಾಜಿ ಸ್ಫೋಟಕ ಬ್ಯಾಟರ್ ವೀರೇಂದ್ರ ಸೆಹ್ವಾಗ್, "ಭಾರತೀಯ ತಾರೆ ವಿರಾಟ್ ಕೊಹ್ಲಿ ಅನೇಕ ಶತಕಗಳನ್ನು ಗಳಿಸುತ್ತಾರೆ. ಪಂದ್ಯಾವಳಿಯಲ್ಲಿ ಪ್ರಮುಖ ರನ್ ಗಳಿಸುವವರಾಗಿ ಮುಗಿಸುತ್ತಾರೆ ಎಂದು ನಾನು ಭಾವಿಸುತ್ತೇನೆ," ಎಂದು ಹೇಳಿದರು.

2011ರಲ್ಲಿ ಸಚಿನ್ ತೆಂಡೂಲ್ಕರ್ ಹೇಗಿದ್ದರೋ, ಅದೇ ರೀತಿ ವಿರಾಟ್ ಕೊಹ್ಲಿಯನ್ನು ಮೈದಾನದಲ್ಲಿ ಸುತ್ತಾಡಿಸಬೇಕೆಂದು ನಾನು ಬಯಸುತ್ತೇನೆ ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ತಿಳಿಸಿದರು.
"ಚೀಕು (ವಿರಾಟ್ ಕೊಹ್ಲಿ) 2019ರ ವಿಶ್ವಕಪ್‌ನಲ್ಲಿ ಒಂದೇ ಒಂದು ಶತಕವನ್ನು ಗಳಿಸಲಿಲ್ಲ. ಈ ವರ್ಷ ಅವರು ಅನೇಕ ಶತಕಗಳನ್ನು ಗಳಿಸುತ್ತಾರೆ ಮತ್ತು ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗುತ್ತಾರೆ ಎಂದು ನಾನು ಭಾವಿಸುತ್ತೇನೆ. ನಂತರ, ನಾನು ಅವನನ್ನು ಭುಜದ ಮೇಲೆ ಹೊತ್ತುಕೊಂಡು ಮೈದಾನವನ್ನು ಸುತ್ತಾಡಿಸಲು ಬಯಸುತ್ತೇನೆ," ಎಂದರು.
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಈ ಬಾರಿ ವಿಶ್ವಕಪ್ ಗೆಲ್ಲಲು ಅರ್ಹರು ಎಂದು ವೀರೇಂದ್ರ ಸೆಹ್ವಾಗ್ ಒತ್ತಿ ಹೇಳಿದರು. ಪ್ರಸ್ತುತ ಭಾರತೀಯ ನಾಯಕ 2011ರ ವಿಶ್ವಕಪ್‌ಗೆ ಆಯ್ಕೆಯಾಗಲು ಹತ್ತಿರವಾಗಿದ್ದರು ಮತ್ತು ಆತ ಅದ್ಭುತ ಆಟಗಾರನಾಗಿರುವುದರಿಂದ ಟ್ರೋಫಿ ಗೆಲ್ಲಲು ಅರ್ಹರಾಗಿದ್ದಾರೆ ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟರು.
"ರೋಹಿತ್ ಮತ್ತು ಕೊಹ್ಲಿ ಇಬ್ಬರೂ ಹಿರಿಯ ಆಟಗಾರರು ಮತ್ತು ವಿಶ್ವಕಪ್ ಗೆಲ್ಲಲು ಅರ್ಹರು. ರೋಹಿತ್ ಶರ್ಮಾ 2011ರ ವಿಶ್ವಕಪ್‌ಗೆ ಆಯ್ಕೆಯಾಗಲು ತುಂಬಾ ಹತ್ತಿರವಾಗಿದ್ದರು, ಆದರೆ ತಪ್ಪಿಸಿಕೊಂಡರು," ಎಂದು ಹೇಳಿದರು.
"ನಂತರ ರೋಹಿತ್ ಏಕದಿನ ಪಂದ್ಯಗಳ ಬಾದ್‌ಶಾ ಆಗಿದ್ದಾರೆ, ಅವರು ವಿಶ್ವಕಪ್ ಟ್ರೋಫಿ ಗೆಲ್ಲಲು ಅರ್ಹರು. ಏಕೆಂದರೆ ಅವರು ಅದ್ಭುತ ಆಟಗಾರರಾಗಿದ್ದಾರೆ," ಎಂದು ವೀರೇಂದ್ರ ಸೆಹ್ವಾಗ್ ತಿಳಿಸಿದರು.