World Cup 2023: ವಾರ್ನರ್, ಮ್ಯಾಕ್ಸ್‌ವೆಲ್ ಸ್ಫೋಟಕ ಬ್ಯಾಟಿಂಗ್; ಡಚ್ಚರಿಗೆ ಅಸಾಧಾರಣ ಗುರಿ ನೀಡಿದ ಆಸ್ಟ್ರೇಲಿಯಾ
ಬುಧವಾರ, ಅಕ್ಟೋಬರ್ 25ರಂದು ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2023ರ ಐಸಿಸಿ ಏಕದಿನ ವಿಶ್ವಕಪ್‌ನ 24ನೇ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ತಂಡದ ವಿರುದ್ಧ ಆಸ್ಟ್ರೇಲಿಯಾ ತಂಡ ಬೃಹತ್ ಮೊತ್ತ ಕಲೆಹಾಕಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ಡೇವಿಡ್ ವಾರ್ನರ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಭರ್ಜರಿ ಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 399 ರನ್‌ಗಳನ್ನು ಗಳಿಸಿದ್ದು, ನೆದರ್ಲ್ಯಾಂಡ್ಸ್ ತಂಡಕ್ಕೆ 400 ರನ್‌ಗಳ ಗುರಿ ನೀಡಿದೆ.

ಇದೇ ವೇಳೆ ಸ್ಫೋಟಕ ಬ್ಯಾಟರ್ ಗ್ಲೆನ್ ಮ್ಯಾಕ್ಸ್‌ವೆಲ್ ಕೇವಲ 40 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ, ಏಕದಿನ ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲಿಯೇ ಅತಿ ವೇಗದ ಶತಕ ಬಾರಿಸಿ ವಿಶ್ವದಾಖಲೆ ನಿರ್ಮಿಸಿದರು.
ಆಸ್ಟ್ರೇಲಿಯಾ ತಂಡದ ಇನ್ನಿಂಗ್ಸ್ ಆರಂಭಿಸಿದ ಡೇವಿಡ್ ವಾರ್ನರ್ ಮತ್ತು ಮಿಚೆಲ್ ಮಾರ್ಷ್ ಉತ್ತಮ ಆರಂಭ ನೀಡಲಾಗಲಿಲ್ಲ. ಏಕೆಂದರೆ, ಮಿಚೆಲ್ ಮಾರ್ಷ್ ಕೇವಲ 9 ರನ್ ಗಳಿಸಿ ಔಟಾದರು.

ನಂತರ ಜೊತೆಯಾದ ಡೇವಿಡ್ ವಾರ್ನರ್ ಮತ್ತು ಸ್ಟೀವನ್ ಸ್ಮಿತ್ 2ನೇ ವಿಕೆಟ್‌ಗೆ 132 ರನ್‌ಗಳ ಜೊತೆಯಾಟ ನಿರ್ಮಿಸಿದರು. ಸ್ಟೀವನ್ ಸ್ಮಿತ್ 68 ಎಸೆತಗಳಲ್ಲಿ 9 ಬೌಂಡರಿ ಮತ್ತು 1 ಸಿಕ್ಸರ್ ಮೂಲಕ 71 ರನ್ ಗಳಿಸಿ ಔಟಾದರು.
ಬಳಿಕ ಕ್ರೀಸ್‌ಗೆ ಆಗಮಿಸಿದ ಮಾರ್ನಸ್ ಲ್ಯಾಬುಸ್ಚಾಗ್ನೆ ಕೂಡ ನೆದರ್ಲ್ಯಾಂಡ್ಸ್ ಬೌಲರ್‌ಗಳನ್ನು ಕಾಡಿದರು ಮತ್ತು 47 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್ ಸಮೇತ 62 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ಈ ವೇಳೆ ಬ್ಯಾಟಿಂಗ್‌ಗೆ ಬಂದ ಜೋಶ್ ಇಂಗ್ಲಿಸ್ 12 ಎಸೆತಗಳಲ್ಲಿ 1 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ 14 ರನ್ ಗಳಿಸಿ ಔಟಾದರು. ಇನ್ನು ಆರಂಭಿಕ ಡೇವಿಡ್ ವಾರ್ನರ್ ಸತತ ಎರಡನೇ ಶತಕ ಬಾರಿಸಿದರು. 93 ಎಸೆತಗಳಲ್ಲಿ 11 ಬೌಂಡರಿ ಹಾಗೂ 3 ಸಿಕ್ಸರ್ ಸಮೇತ 104 ರನ್ ಬಾರಿಸಿದರು.
ಇನ್ನು ಕೊನೆಯಲ್ಲಿ ವಿಶ್ವದಾಖಲೆಯ ಶತಕ ಸಿಡಿಸಿದ ಗ್ಲೆನ್ ಮ್ಯಾಕ್ಸ್‌ವೆಲ್ ಕೇವಲ 44 ಎಸೆತಗಳಲ್ಲಿ 9 ಬೌಂಡರಿ ಹಾಗೂ 8 ಭರ್ಜರಿ ಶತಕದ ನೆರವಿನೊಂದಿಗೆ 106 ರನ್ ಗಳಿಸಿ ಕೊನೆಯ ಓವರ್‌ನಲ್ಲಿ ಔಟಾದರು. ಇನ್ನು ನಾಯಕ ಪ್ಯಾಟ್ ಕಮ್ಮಿನ್ಸ್ ಮತ್ತು ಮಿಚೆಲ್ ಸ್ಟಾರ್ಕ್ ತಲಾ 8 ರನ್ ಗಳಿಸಿದರು.

ಬೌಲಿಂಗ್‌ನಲ್ಲಿ ನೆದರ್ಲ್ಯಾಂಡ್ಸ್ ಪರ ಲೋಗನ್ ವ್ಯಾನ್ ಬೀಕ್ 10 ಓವರ್‌ಗಳಲ್ಲಿ 74 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಬಾಸ್ ಡಿ ಲೀಡ್ 10 ಓವರ್‌ಗಳಲ್ಲಿ 115 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ಆರ್ಯನ್ ದತ್ 1 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications