World Cup 2023: ಇಂಗ್ಲೆಂಡ್ ವಿರುದ್ಧ ಗೆದ್ದು ಸೆಮಿಸ್‌ಗೆ ತಲುಪುವುದೇ ಇಂಡಿಯಾ?; ಸಂಭಾವ್ಯ ಆಡುವ 11ರ ಬಳಗ
ಭಾನುವಾರ, ಅಕ್ಟೋಬರ್ 29ರಂದು ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನಾ ಸ್ಟೇಡಿಯಂನಲ್ಲಿ 2023ರ ಐಸಿಸಿ ಏಕದಿನ ವಿಶ್ವಕಪ್‌ನ 29ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಆತಿಥೇಯ ಭಾರತ ತಂಡ ಮುಖಾಮುಖಿಯಾಗಲಿದೆ.
ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಜೋಸ್ ಬಟ್ಲರ್ ಪಡೆ ವಿರುದ್ಧ ಗೆಲ್ಲುವ ಮೂಲಕ ಸತತ ಆರನೇ ಗೆಲುವು ಮತ್ತು ಸೆಮಿಫೈನಲ್‌ಗೆ ಅರ್ಹತೆ ಪಡೆಯಲು ಎದುರು ನೋಡುತ್ತಿದ್ದರೆ, ಪ್ರವಾಸಿ ತಂಡವು ತನ್ನ ಪ್ರಶಸ್ತಿ ಉಳಿಸಿಕೊಳ್ಳುವ ಆಸೆಯು ಕಮರಿಹೋಗಿದ್ದು, ಕಳೆದುಕೊಳ್ಳಲು ಏನೂ ಉಳಿದಿಲ್ಲವಾಗಿದೆ.

ಹಾಲಿ ಚಾಂಪಿಯನ್ ಇಂಗ್ಲೆಂಡ್ ಈ ವಿಶ್ವಕಪ್‌ನಲ್ಲಿ ಅತ್ಯಂತ ಕಳಪೆ ಅಭಿಯಾನ ಹೊಂದಿದ್ದಾರೆ. ಇವರಿಗಿಂತ ಸಂಪೂರ್ಣವಾಗಿ ವ್ಯತಿರಿಕ್ತವಾಗಿ ಪಂದ್ಯಾವಳಿಯಲ್ಲಿ ಪ್ರಬಲ ಪ್ರದರ್ಶನದಿಂದಾಗಿ ಭಾರತ ಮೆಚ್ಚಿನ ತಂಡವಾಗಿದೆ.
ಇಂಗ್ಲೆಂಡ್ ಇದುವರೆಗೆ ಪಂದ್ಯಾವಳಿಯಲ್ಲಿ ಐದು ಪಂದ್ಯಗಳನ್ನು ಆಡಿದ್ದು, ನಾಲ್ಕರಲ್ಲಿ ಸೋತು ಟೂರ್ನಿಯಿಂದ ಹೊರಬೀಳುವ ಅಂಚಿನಲ್ಲಿದೆ. ಇಂದು ಭಾರತ ವಿರುದ್ಧದ ಸೋಲು ಖಂಡಿತವಾಗಿಯೂ 2023ರ ವಿಶ್ವಕಪ್‌ನಿಂದ ಹೊರಬೀಳುವ ಮೊದಲ ತಂಡವಾಗಲಿದೆ.
ಇಂಗ್ಲೆಂಡ್ ತಂಡದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅವರ ಬ್ಯಾಟಿಂಗ್ ಕ್ಲಿಕ್ ಆಗುತ್ತಿಲ್ಲ ಮತ್ತು ಬೌಲರ್‌ಗಳು ಇಲ್ಲಿನ ಪಿಚ್‌ಗಳಲ್ಲಿ ಯೋಜನೆಯ ಕೊರತೆ ಹೊಂದಿದ್ದಾರೆ. ಕಳೆದ ಬಾರಿ ಇಂಗ್ಲೆಂಡ್‌ನಲ್ಲಿ ನಡೆದ ವಿಶ್ವಕಪ್‌ಗಿಂತ ಭಾರತದಲ್ಲಿನ ವಿಶ್ವಕಪ್ ಸಂಪೂರ್ಣ ಭಿನ್ನವಾಗಿದೆ.

ಐಸಿಸಿ ಪಂದ್ಯಾವಳಿಯು ಭಾರತದ 10 ವಿಭಿನ್ನ ಸ್ಥಳಗಳಲ್ಲಿ ನಡೆಯುವುದರಿಂದ ಪಿಚ್‌ಗಳು ಮತ್ತು ಪರಿಸ್ಥಿತಿಗಳು ಬದಲಾಗುತ್ತವೆ. ಅದಕ್ಕೆ ತಯಾರಾಗಿ ಬರದ ಇಂಗ್ಲೆಂಡ್ ಈಗ ಭಾರಿ ಬೆಲೆ ತೆತ್ತಿದೆ. ರೀಸ್ ಟೋಪ್ಲೆ ಪಂದ್ಯಾವಳಿಯಿಂದ ಹೊರಗುಳಿಯುವುದರೊಂದಿಗೆ ಗಾಯದ ಸಮಸ್ಯೆ ಮತ್ತಷ್ಟು ಹಿನ್ನಡೆ ತಂದಿದೆ.
ಅಫ್ಘಾನಿಸ್ತಾನ ತಂಡದ ವಿರುದ್ಧ ಸೋಲು ಇಂಗ್ಲೆಂಡ್‌ನ ವಿಶ್ವಕಪ್ ಅಭಿಯಾನಕ್ಕೆ ಮತ್ತು ಹಾಲಿ ಚಾಂಪಿಯನ್ ಎಂಬ ಹಣೆಪಟ್ಟಿಯ ಅವರ ಅಹಂಕಾರಕ್ಕೆ ದೊಡ್ಡ ಪೆಟ್ಟು ಬಿದ್ದಂತಾಗಿದೆ.
ಮತ್ತೊಂದೆಡೆ, ಭಾರತ ತಂಡ ಅತ್ಯುತ್ತಮವಾಗಿ ಕಾಣುತ್ತಿದೆ. ಸದ್ಯ ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನವನ್ನು ತೋರಿದ್ದಾರೆ ಮತ್ತು ಸುಲಭವಾಗಿ ಸೆಮಿಫೈನಲ್ ತಲುಪಲು ಎದುರು ನೋಡುತ್ತಿದ್ದಾರೆ.
ಆದರೆ, ಈ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಆಂಗ್ಲ ತಂಡವು ಕಳಪೆ ಫಾರ್ಮ್‌ನಲ್ಲಿರಬಹುದು ಆದರೆ ಅವರು ಪಂದ್ಯಾವಳಿಯನ್ನು ಉನ್ನತ ಮಟ್ಟದಲ್ಲಿ ಮುಗಿಸಲು ಉತ್ಸುಕರಾಗಿರುತ್ತಾರೆ ಮತ್ತು ಸೆಮಿಸ್‌ನ ಹಾದಿಯನ್ನು ಇತರರಿಗೆ ಕಷ್ಟಕರವಾಗಿಸುತ್ತಾರೆ.
ಭಾರತ ತಂಡದಲ್ಲಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಅನುಪಸ್ಥಿತಿ ಎದ್ದು ಕಾಣುತ್ತಿದೆ. ಇದರಿಂದ ಆಡುವ 11ರ ಬಳಗದಲ್ಲಿ ಸಮತೋಲನ ಇಲ್ಲದಿದ್ದರೂ, ಅದನ್ನು ಸರಿದೂಗಿಸುವ ಆಟಗಾರರು ಇದ್ದಾರೆ. ಮತ್ತೊಮ್ಮೆ ಸೂರ್ಯಕುಮಾರ್ ಯಾದವ್ ಆಡುವ ಅವಕಾಶ ಪಡೆಯಲಿದ್ದಾರೆ.
ಭಾರತ vs ಇಂಗ್ಲೆಂಡ್ ಪಂದ್ಯದ ವಿವರ
ಸ್ಥಳ ಮತ್ತು ದಿನಾಂಕ: ಭಾರತ vs ಇಂಗ್ಲೆಂಡ್ ನಡುವಿನ 2023ರ ಏಕದಿನ ವಿಶ್ವಕಪ್ ಪಂದ್ಯವು ಭಾನುವಾರ, ಅಕ್ಟೋಬರ್ 29ರಂದು ಲಕ್ನೋದ ಏಕನಾ ಸ್ಟೇಡಿಯಂನಲ್ಲಿ ನಡೆಯಲಿದೆ.
ಪಂದ್ಯದ ಸಮಯ: ಭಾರತ vs ಇಂಗ್ಲೆಂಡ್ ನಡುವಿನ 2023ರ ಏಕದಿನ ವಿಶ್ವಕಪ್ ಪಂದ್ಯವು ಭಾರತೀಯ ಕಾಲಮಾನ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದ್ದರೆ, ಟಾಸ್ 1.30ಕ್ಕೆ ನಡೆಯಲಿದೆ.
ಭಾರತ vs ಇಂಗ್ಲೆಂಡ್ ಪಂದ್ಯದ ಟಿವಿ ಮತ್ತು ಲೈವ್ ಸ್ಟ್ರೀಮಿಂಗ್ ವಿವರ
ಭಾರತ vs ಇಂಗ್ಲೆಂಡ್ ನಡುವಿನ 2023ರ ಏಕದಿನ ವಿಶ್ವಕಪ್ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ಗಳಲ್ಲಿ ನೇರಪ್ರಸಾರ ಮಾಡಲಾಗುತ್ತದೆ ಮತ್ತು ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಆಘಿ ವೀಕ್ಷಿಸಬಹುದು.
ಭಾರತ vs ಇಂಗ್ಲೆಂಡ್ ತಂಡಗಳ ಸಂಭಾವ್ಯ ಆಡುವ 11ರ ಬಳಗ
ಭಾರತ ಸಂಭಾವ್ಯ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್/ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ.
ಇಂಗ್ಲೆಂಡ್ ಸಂಭಾವ್ಯ ತಂಡ: ಡೇವಿಡ್ ಮಲಾನ್, ಜಾನಿ ಬೈರ್‌ಸ್ಟೋವ್, ಜೋ ರೂಟ್, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್(ನಾಯಕ/ವಿಕೆಟ್ ಕೀಪರ್), ಲಿಯಾಮ್ ಲಿವಿಂಗ್‌ಸ್ಟೋನ್/ಹ್ಯಾರಿ ಬ್ರೂಕ್, ಮೊಯಿನ್ ಅಲಿ, ಸ್ಯಾಮ್ ಕುರಾನ್, ಡೇವಿಡ್ ವಿಲ್ಲಿ, ಆದಿಲ್ ರಶೀದ್, ಮಾರ್ಕ್ ವುಡ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications