ಟೀಮ್ ಇಂಡಿಯಾ ಈ ಬಾರಿಯ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಣೆಸಾಟ ನಡೆಸಲಿದೆ. ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಎರಡು ಸಮಬಲದ ತಂಡಗಳ ನಡುವೆ ಜಿದ್ದಾಜಿದ್ದಿನ ಕದನ ಏರ್ಪಡುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಇಡೀ ಕ್ರಿಕೆಟ್ ಅಭಿಮಾನಿಗಳು ಈ ಕದನವನ್ನು ಕಣ್ತುಂಬಿಕೊಳ್ಳಳು ಕಾಯುತ್ತಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ಅತ್ಯಂತ ಸಮತೋಲಿತ ಪಡೆಯೊಂದಿಗೆ ಕಣಕ್ಕಿಳಿಯಲಿದೆ. ಚೆನ್ನೈನ ಪಿಚ್ ಎದುರಾಳಿಗಳನ್ನು ಗಮನದಲ್ಲಿಟ್ಟುಕೊಂಡು ಆಡುವ ಬಳಗವನ್ನು ಅಂತಿಒಮಗೊಳಿಸಲಿದೆ. ಹಾಗಾದರೆ ಈ ಪಂದ್ಯದಲ್ಲಿ ಭಾರತದ 15ರ ಬಳಗದಲ್ಲಿ ಆಡುವ ಬಳಗದಿಂದ ಹೊರಗುಳಿಯಬಹುದಾದ ಆ ನಾಲ್ವರು ಆಟಗಾರರು ಯಾರು ಎನ್ನುವ ಕುತೂಹಲ ಇದ್ದೇ ಇದೆ. ಆ ಸಂಭಾವ್ಯ ಆಟಗಾರರ ಮಾಹಿತಿ ಇಲ್ಲಿದೆ.

ಟೀಮ್ ಇಂಡಿಯಾದ ಆರಂಭಿಕ ಆಟಗಾರ ಶುಬ್ಮನ್ ಗಿಲ್ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಪ್ರಾಥಮಿಕ ತಂಡದಲ್ಲಿ ಸ್ಥಾನವನ್ನು ಪಡೆದುಕೊಳ್ಳಬಹುದಾಗಿರುವ ಆಟಗಾರ. ಆದರೆ ಈ ಪಂದ್ಯಕ್ಕೂ ಮುನ್ನ ಗಿಲ್ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಡೆಂಗ್ಯೂ ಜ್ವರಕ್ಕೆ ತುತ್ತಾಗಿರುವ ಗಿಲ್ ಬಹುತೇಕ ಚೇತರಿಸಿಕೊಂಡಿದ್ದಾರೆ. ಹಾಗಿದ್ದರೂ ಈ ಪಂದ್ಯದಲ್ಲಿ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಬಹಳ ಕಡಿಮೆಯಿದೆ. ಗಿಲ್ ಬದಲಿಗೆ ಇಶಾನ್ ಕಿಶನ್ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ.
ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಆಟಗಾರ ಸೂರ್ಯಕುಮಾರ್ ಯಾದವ್ ಆಸ್ಟ್ರೇಲಿಯಾ ವಿರುದ್ಧದ ಈ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿಲ್ಲ. ಶ್ರೇಯಸ್ ಐಯ್ಯರ್ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಅಲ್ಲದೆ ತಾವು ಉತ್ತಮ ಫಾರ್ಮ್‌ನಲ್ಲಿರುವುದನ್ನು ಕೂಡ ಕಳೆದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿಯೇ ಸಾರಿದ್ದಾರೆ. ಇನ್ನು ಅದೇ ಸರಣಿಯಲ್ಲಿ ಸೂರ್ಯಕುಮಾರ್ ಕೂಡ ಉತ್ತಮ ಪ್ರದರ್ಶನ ನೀಡಿದ್ದರಾದರೂ ಈ ಹಂತದಲ್ಲಿ ಆಡುವ ಬಳಗದಲ್ಲಿ ಅವರಿಗೆ ಸ್ಥಾನ ಇಲ್ಲದಂತಾಗಿದೆ.
ಇನ್ನು ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಮೂವರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯುವ ನಿರ್ಧಾರ ತೆಗೆದುಕೊಂಡಿದೆ. ಹಾಗಾಗಿ ವೇಗದ ಬೌಲಿಂಗ್‌ನಲ್ಲಿ ಜಸ್ಪ್ರೀತ್ ಬೂಮ್ರಾ ಹಾಗೂ ಮೊಹಮ್ಮದ್ ಸಿರಾಜ್ ಆಡುವುದು ನಿಶ್ಚಿತ. ಮತ್ತೋರ್ವ ವೇಗಿಯಾಗಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಸಾರ್ಥ ನೀಡಲಿದ್ದಾರೆ. ಹೀಗಾಗಿ ಶಾರ್ದೂಲ್ ಠಾಕೂರ್ ಈ ಪಂದ್ಯದಲ್ಲಿ ಆಡುವ ಅವಕಾಶ ಇಲ್ಲ.
ಅನುಭವಿ ಆಟಗಾರ ಮೊಹಮ್ಮದ್ ಶಮಿ ಯಾವತ್ತಿಗೂ ತಂಡಕ್ಕೆ ಆಸ್ತ್ರವಾಗುವಂಥಾ ಆಟಗಾರ. ಆದರೆ ಬೂಮ್ರಾ ಹಾಗೂ ಸಿರಾಜ್ ಪ್ರಸ್ತುತ ಅಮೋಘ ಲಯದಲ್ಲಿದ್ದು ನಿಸ್ಸಂಶಯವಾಗಿ ಮೊದಲ ಆಯ್ಕೆಯ ವೇಗಿಗಳಾಗಿ ತಂಡದಲ್ಲಿ ಸ್ಥಾನವನ್ನು ಪಡೆದುಕೊಳ್ಳುತ್ತಾರೆ. ಹೀಗಾಗಿ ಶಮಿ ಈ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿಲ್ಲ.