ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯಕ್ಕೂ ಮುನ್ನಾದಿನ ಸಂಜೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮಧ್ಯಮಗಳನ್ನುದ್ದೇಶಿಸಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಈ ಬಾರಿಯ ವಿಶ್ವಕಪ್ ಟೂರ್ನಿಯನ್ನು ತಂಡದ ಕೋಚ್ ರಾಹುಲ್ ದ್ರಾವಿಡ್ ಅವರಿಗಾಗಿ ಗೆಲ್ಲಬೇಕು ಎಂದು ಇಡೀ ತಂಡ ಬಯಸಿದೆ ಎಂದಿದ್ದಾರೆ. ನವೆಂಬರ್ 19ರಂದು ಭಾನುವಾರ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ವಿಶ್ವಕಪ್‌ನ ಫೈನಲ್ ಪಂದ್ಯವನ್ನು ಅಹ್ಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಡಲಿದೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ನಾಯಕ ರೋಹಿತ್ ಶರ್ಮಾ, ತಂಡದ ಆಟಗಾರರಲ್ಲಿ ಸ್ಪಷ್ಟತೆ ದೊರೆಯುವಲ್ಲಿ ದ್ರಾವಿಡ್ ಅವರು ಬಹಳ ದೊಡ್ಡ ಪಾತ್ರನಿರ್ವಹಿಸಿದ್ದಾರೆ ಎಂದಿದ್ದಾರೆ. ಈ ವಿಶ್ವಕಪ್ ಟೂರ್ನಿಯಲ್ಲಿ ಈವರೆಗೆ ಆಡಿರುವ ಎಲ್ಲಾ 10 ಪಂದ್ಯಗಳಲ್ಲಿಯೂ ಭಾರತ ಗೆಲುವು ಸಾಧಿಸಿದೆ. ಹೀಗಾಗಿ ಆತ್ಮವಿಶ್ವಾಸದಲ್ಲಿರುವ ಭಾರತ ತಂಡ ಮೂರನೇ ಬಾರಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸುವ ಆತ್ಮವಿಶ್ವಾಸದಲ್ಲಿದೆ.

"ಕೋಚ್ ದ್ರಾವಿಡ್ ಅವರ ಪಾತ್ರ ಬಹಳ ದೊಡ್ಡದು. ಆಟಗಾರರಿಗೆ ತಮ್ಮ ಜವಾಬ್ಧಾರಿಗಳ ಕುರಿತಾಗಿ ಸ್ಪಷ್ಟತೆಯನ್ನು ಹೊಂದುವಲ್ಲಿ ಅವರು ಬಹಳ ಪ್ರಮುಖ ಪಾತ್ರವಹಿಸಿದ್ದಾರೆ. ನನ್ನಲ್ಲಿನ ಕೆಲ ವಿಚಾರಗಳಿಗೆ ಕೋಚ್ ಒಪ್ಪದಿದ್ದರೆ ಎನ್ನುವುವುದು ನಮ್ಮ ನಮಸ್ಸಿನಲ್ಲಿ ಇರುತ್ತದೆ. ಆದರೆ ರಾಹುಲ್ ದ್ರಾವಿಡ್ ಅವರು ಹೇಗೆ ಕ್ರಿಕೆಟ್ ಆಡಿದ್ದಾರೆ ಹಾಗೂ ನಾನು ಇತ್ತೀಚೆಗೆ ಹೇಗೆ ಆಡುತ್ತಿದ್ದೇನೆ ಎನ್ನುವುದನ್ನು ನೋಡುತ್ತಿದ್ದೀರಿ. ಸಹಜವಾಗಿಯೇ ಅದು ಭಿನ್ನವಾಗಿದೆ. ನಾವು ನಮ್ಮ ಆಟವನ್ನು ಆಡಲು ಸ್ವತಂತ್ರವಾಗಿ ಬಿಡುವುದನ್ನು ಅವರು ಬಯಸುತ್ತಾರೆ. ಅವರ ಬಗ್ಗೆ ಹೇಳಲು ಬಹಳಷ್ಟಿದೆ" ಎಂದಿದ್ದಾರೆ ನಾಯಕ ರೋಹಿತ್ ಶರ್ಮಾ.
ವಿಶ್ವಕಪ್‌ನಂಥಾ ದೊಡ್ಡ ಟೂರ್ನಿಯಲ್ಲಿ ಭಾಗಿಯಾಗುವುದನ್ನು ರಾಹುಲ್ ಬಯಸುತ್ತಾರೆ ಎಂದು ರೋಹಿತ್ ಶರ್ಮಾ ಹೇಳಿದ್ದು ಅವರಿಗಾಗಿ ಇಡೀ ತಂಡ ಈ ಪಟ್ಟವನ್ನು ಗೆಲ್ಲಲು ಬಯಸುತ್ತಿದೆ ಎಂದಿದ್ದಾರೆ. 2003ರಲ್ಲಿ ಭಾರತ ವಿಶ್ವಕಪ್ ಫೈನಲ್‌ಗೆ ಪ್ರವೇಶಿಸಿದ್ದ ತಂಡದ ಭಾಗವಾಗಿದ್ದರು ರಾಹುಲ್ ದ್ರಾವಿಡ್. ಆದರೆ ಆ ಸಂದರ್ಭದಲ್ಲಿ ಭಾರತ ತಂಡ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ.
"ಅವರು(ದ್ರಾವಿಡ್) ಕಷ್ಟದ ಸಂದರ್ಭದಲ್ಲಿ ಆಟಗಾರರ ಬೆನ್ನಿಗೆ ನಿಂತ ರೀತಿ, ವಿಶೇಷವಾಗಿ ಟಿ20 ವಿಶ್ವಕಪ್ ಸಂದರ್ಭದಲ್ಲಿ ನಾವು ಸೆಮಿಫೈನಲ್‌ವರೆಗೂ ಅದ್ಭುತವಾಗಿ ಆಡಿ ಆ ಹಂತದಲ್ಲಿ ಸೋತಿದ್ದೆವು. ಅಂಥಾ ಸಂದರ್ಭದಲ್ಲಿ ಅವರು ಸ್ಪಂದಿಸಿದ ರೀತಿ ಮತ್ತು ಆಟಗಾರರೊಂದಿಗೆ ಸಂಬವಹನ ನಡೆಸಿದ ರೀತಿ ಬಹಳ ಸಹಕಾರಿಯಾಗಿದೆ. ಅವರು ಇಂಥಾ ದೊಡ್ಡ ಸಂದರ್ಭದ ಭಾಗಿಯಾಗಬೇಕು ಎಂದುಕೊಂಡಿದ್ದವರು. ಈಗ ಇದನ್ನು ಅವರಿಗಾಗಿ ಸಾಧಿಸುವುದು ನಮ್ಮ ಜವಾಬ್ಧಾರಿ" ಎಂದಿದ್ದಾರೆ ರೋಹಿತ್ ಶರ್ಮಾ.
ಇನ್ನು ಭಾರತ ತಂಡ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್‌ಗೆ ಪ್ರವೇಶಿಸುವ ಮೂಲಕ ನಾಲ್ಕನೇ ಬಾರಿಗೆ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್‌ನಲ್ಲಿ ಆಡಿದಂತಾಗಲಿದೆ. ಇನ್ನು ಆಸ್ಟ್ರೇಲಿಯಾ ತಂಡ 8ನೇ ಬಾರಿಗೆ ಈ ವಿಶ್ವಕಪ್ ಟೂರ್ನಿಯ ಫೈನಲ್ ಆಡಲಿದೆ.