ಟೀಮ್ ಇಂಡಿಯಾ ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲು ಸಜ್ಜಾಗಿದೆ. ವಿಶ್ವಕಪ್‌ನಂಥಾ ದೊಡ್ಡ ವೇದಿಕೆಯಲ್ಲಿ ಬರೊಬ್ಬರಿ ಎರಡು ದಶಕಗಳ ಬಳಿಕ ಈ ಎರಡು ತಂಡಗಳು ಮುಖಾಮುಖಿಯಾಗುತ್ತಿದ್ದು ತೀವ್ರ ಪೈಪೋಟಿಯನ್ನು ನಿರೀಕ್ಷಿಸಲಾಗುತ್ತಿದೆ. ಎರಡು ತಂಡಗಳು ಕೂಡ ಸಾಕಷ್ಟು ಮ್ಯಾಚ್‌ವಿನ್ನರ್‌ಗಳನ್ನು ಹೊಂದಿದೆ. ಹೀಗಾಗಿ ಯಾವ ತಂಡ ಈ ಫೈನಲ್ ಪಂದ್ಯದ ದಿನದಂದು ತನ್ನ ಅತ್ಯುತ್ತಮ ಪ್ರದರ್ಶನ ನೀಡಲಿದೆ ಎನ್ನುವುದು ಕುತೂಹಲ.
ಇನ್ನು ಟೀಮ್ ಇಂಡಿಯಾ ಸುದೀರ್ಘ ಕಾಲದಿಂದ ಐಸಿಸಿ ಟ್ರೋಫಿಯ ಬರವನ್ನು ಎದುರಿಸುತ್ತಿದೆ. ಕೊನೆಯ ಹಂತದಲ್ಲಿ ಹಲವು ಸಂದರ್ಭಗಳಲ್ಲಿ ಟ್ರೋಫಿಯನ್ನು ಕೈಚೆಲ್ಲಿದೆ. ಹೀಗಾಗಿ ಈ ಬಾರಿ ಹಾಗಾಗಬಾರದು ಎನ್ನುವುದು ಅಭಿಮಾನಿಗಳ ಆಶಯ. ಇದೇ ಹಿನ್ನೆಲೆಯಲ್ಲಿ ಭಾರತ ತಂಡದ ಮಾಜಿ ವೇಗದ ಬೌಲರ್, ಭಾರತದ ಮಾಜಿ ಬೌಲಿಂಗ್ ಕೋಚ್ ಕೂಡ ಆಗಿರುವ ವೆಂಕಟೇಶ್ ಪ್ರಸಾದ್ ಭಾರತ ತಂಡಕ್ಕೆ ಎಚ್ಚರಿಕೆಯೊಂದನ್ನು ನೀಡಿದ್ದಾರೆ.

ಟೀಮ್ ಇಂಡಿಯಾ ಈ ವಿಶ್ವಕಪ್ ಟೂರ್ನಿಯುದ್ದಕ್ಕೂ ಅದ್ಭುತವಾದ ಲಯವನ್ನು ಪ್ರದರ್ಶಿಸಿದೆ. ಈ ಮೂಲಕ ಅತ್ಯಂತ ಅತ್ಮವಿಶ್ವಾಸದಲ್ಲಿದೆ ರೋಹಿತ್ ಶರ್ಮಾ ಪಡೆ. ಆದರೆ ಆಸ್ಟ್ರೇಲಿಯಾ ತಂಡದ ಓರ್ವ ಬೌಲರ್‌ನ ಬಗ್ಗೆ ಭಾರತೀಯ ಬ್ಯಾಟರ್‌ಗಳು ಹೆಚ್ಚು ಎಚ್ಚರಿಕೆ ವಹಿಸಬೇಕು ಎಂದಿದ್ದಾರೆ ವೆಂಕಟೇಶ್ ಪ್ರಸಾದ್.
ಆಸ್ಟ್ರೇಲಿಯಾದ ಬಲಿಷ್ಠ ವೇಗದ ಬೌಲಿಂಗ್ ಪಡೆಯನ್ನು ಉದ್ದೇಶಿಸಿ ವೆಂಕಟೇಶ್ ಪ್ರಸಾದ್ ಪ್ರತಿಕ್ರಿಯೆ ನೀಡಿದ್ದಾರೆ. ಸ್ಟಾರ್ಕ್ ಮತ್ತು ಹೇಜಲ್‌ವುಡ್ ಅವರಿಂದ ಬರಬಹುದಾದ ಕಠಿಣ ಸವಾಲನ್ನು ಬೊಟ್ಟು ಮಾಡಿದ್ದಾರೆ. ಸ್ಟಾರ್ಕ್ ಅವರ ಎಡಗೈ ಸೀಮಿಂಗ್ ಸಾಮರ್ಥ್ಯಗಳು ಮತ್ತು ಹೇಜಲ್‌ವುಡ್‌ನ ನಿಖರವಾದ ಟೆಸ್ಟ್ ಪಂದ್ಯದ ಲೈನ್ ಮತ್ತು ಲಂತ್ ಜೊತೆಗೆ ಬೌನ್ಸ್ ಕೂಡ ಇರಲಿದೆ ಎಂದು ಎಚ್ಚರಿಸಿದ್ದಾರೆ.
"ಅವರಲ್ಲಿ ಎಡಗೈ ವೇಗಿಯಾಗಿ ಸ್ಟಾರ್ಕ್ ಇದ್ದಾರೆ. ಅವರು ಆರಂಭದಲ್ಲಿಯೇ ಒಂದೆರಡು ವಿಕೆಟ್‌ಗಳನ್ನು ಕಬಳಿಸಿದರೆ ಭಾರತದ ಬ್ಯಾಟಿಂಗ್ ವಿಭಾಗಕ್ಕೆ ಮೊದಲ ಹತ್ತು ಓವರ್‌ಗಳಲ್ಲಿಯೇ ದೊಡ್ಡ ಸವಾಲು ಎದುರಾಗಲಿದೆ" ಎಂದಿದ್ದಾರೆ ಕನ್ನಡಿಗ ಮಾಜಿ ವೇಗದ ಬೌಲರ್ ವೆಂಕಟೇಶ್ ಪ್ರಸಾದ್.
ಇನ್ನು ಈ ಸಂದರ್ಭದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಆಡಂ ಜಂಪಾ ಅವರಿಂದ ಅತ್ಯುತ್ತಮ ಪ್ರದರ್ಶನ ಬರಬೇಕಾದ ಅನಿವಾರ್ಯತೆಯಿದೆ ಎಂದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಸೆಮಿಫೈನಲ್‌ನಲ್ಲಿ ಜಂಪಾ ಸರಿಯಾದ ಜಾಗವನ್ನು ಗುರುತಿಸಲು ವಿಫಲವಾಗಿಹಿನ್ನಡೆ ಅನುಭವಿಸಿದರು ಎಂದಿದ್ದಾರೆ. ಶೇನ್ ವಾರ್ನ್ ರೀತಿ ಚೆಂಡನ್ನು ತೀಕ್ಷ್ಣವಾಗಿ ಮಧ್ಯದಿಂದ ಅಂತಾ ಲೆಗ್‌ಸ್ಟಂಪ್‌ನಿಂದ ಅಫ್‌ಸ್ಟಂಪ್ ಕಡೆಗೆ ತಿರುಗಿಸುವ ಕೊರತೆಯಿದೆ ಎಂದಿದ್ದಾರೆ.
ಟೀಮ್ ಇಂಡಿಯಾ: ರೋಹಿತ್ ಶರ್ಮಾ(ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್(ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಇಶಾನ್ ಕಿಶನ್, ಪ್ರಸೀದ್ ಕೃಷ್ಣ
ಆಸ್ಟ್ರೇಲಿಯಾ: ಟ್ರಾವಿಸ್ ಹೆಡ್, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಮಾರ್ನಸ್ ಲ್ಯಾಬುಶೇನ್, ಗ್ಲೆನ್ ಮ್ಯಾಕ್ಸ್‌ವೆಲ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್ (ನಾಯಕ), ಆಡಮ್ ಜಂಪಾ, ಜೋಶ್ ಹ್ಯಾಜಲ್‌ವುಡ್, ಶಾನ್ ಅಬಾಟ್, ಮಾರ್ಕಸ್ ಸ್ಟೊಯಿನಿಸ್, ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್