ವಿಶ್ವಕಪ್ ಇತಿಹಾಸದಲ್ಲಿನ ಹ್ಯಾಟ್ರಿಕ್-ವಿಕೆಟ್‌ಗಳ ದಾಖಲೆಗಳಿವು!

ಬೆಂಗಳೂರು, ಮೇ 28: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಎಂದಾಕ್ಷಣ ತಕ್ಷಣಕ್ಕೆ ನೆನಪಾಗುವುದು ಬ್ಯಾಟ್ಸ್‌ಮನ್‌ಗಳ ಅಬ್ಬರವೇ. ಆದರೆ, ಜಾಗತಿಕ ಕ್ರಿಕೆಟ್ ಕದನಗಳಲ್ಲಿ ಬೌಲರ್‌ಗಳು ಕೂಡ ಹಲವು ಅವಿಸ್ಮರಣೀಯ ಸಾಧನೆ ಮೆರೆದಿದ್ದಾರೆ.
2019ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂನರ್ನಿಯ ಲೇಟೆಸ್ಟ್ ಸುದ್ದಿಗಳು
ಶ್ರೀಲಂಕಾ ತಂಡದ ವೇಗಿ ಲಸಿತ್ ಮಾಲಿಂಗ ವಿಶ್ವಕಪ್ ಅಂಗಣದಲ್ಲಿ ಹ್ಯಾಟಿಕ್ ವಿಕೆಟ್ ಸಾಧನೆಯನ್ನು ಎರಡು ಬಾರಿ ಮಾಡಿರುವ ಏಕಮಾತ್ರ ಬೌಲರ್ ಎಂಬುದು ವಿಶೇಷ. ಅಂದಹಾಗೆ 1975ರಲ್ಲಿ ಆರಂಭಗೊಂಡ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಗಳಲ್ಲಿ ಈವರೆಗೆ ಒಟ್ಟು 9 ಬಾರಿ ಹ್ಯಾಟ್ರಿಕ್-ವಿಕೆಟ್‌ಗಳ ಸಾಧನೆಯಾಗಿದೆ.
ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಸಾಧನೆ ಮೂಡಿಬರುವುದು ಅಪರೂಪವೇ ಸರಿ. ಅದರಲ್ಲೂ ವಿಶ್ವಕಪ್ ಟೂರ್ನಿಗಳಲ್ಲಿ ಇಂಥದ್ದೊಂದು ದಾಖಲೆಗಳು ತೀರಾ ವಿರಳ. ಅಂದಹಾಗೆ 11 ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ಮೂಡಿ ಬಂದಿರುವ ಒಟ್ಟು 9 ಹ್ಯಾಟ್ರಿಕ್ ಸಾಧನೆಗೆ ಸಂಪೂರ್ಣ ವಿವರ ಇಲ್ಲಿದೆ.

ಚೇತನ್ ಶರ್ಮಾ
ತಂಡ: ಭಾರತ
ಎದುರಾಳಿ: ನ್ಯೂಜಿಲೆಂಡ್
ಆವೃತ್ತಿ: 1987
ಭಾರತ ತಂಡದ ಮಾಜಿ ವೇಗದ ಬೌಲರ್ ಚೇತನ್ ಶರ್ಮಾ, ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಹ್ಯಾಟ್ರಿಕ್ ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. 1987ರಲ್ಲಿ ಭಾರತದಲ್ಲಿ ನಡೆದ ನಾಲ್ಕನೇ ಆವೃತ್ತಿಯ ವಿಶ್ವಕಪ್ ಟೂರ್ನಿಯಲ್ಲಿನ್ಯೂಜಿಲೆಂಡ್ ವಿರುದ್ಧ ನಾಗ್ಪುರದಲ್ಲಿ ನಡೆದ ಪಂದ್ಯದಲ್ಲಿ ವೇಗಿ ಚೇತನ್ ಶರ್ಮಾ ವಿಶ್ವಕಪ್ ಇತಿಹಾಸದ ಚೊಚ್ಚಲ ಹ್ಯಾಟಿಕ್ ಸಾಧನೆ ಮೆರೆದರು. ಗ್ರೂಪ್ ಹಂತದಲ್ಲಿ ಭಾರತ ತಂಡದ ಅಂತಿಮ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಕೆನ್ ರುದರ್‌ಫೋರ್ಡ್, ಇಯಾನ್ ಸ್ಮಿತ್ ಮತ್ತು ಈವೆನ್ ಚಾಟ್‌ಫೀಲ್ಡ್ ಅವರ ವಿಕೆಟ್ ಪಡೆದ ಚೇತನ್ ಈ ಹೆಗ್ಗಳಿಕೆ ಸಂಪಾದಿಸಿದರು. ಅಂದಹಾಗೆ ಈ ಮೂವರು ಬ್ಯಾಟ್ಸ್‌ಮನ್‌ಗಳು ಕ್ಲೀನ್ ಬೌಲ್ಡ್ ಆಗಿದ್ದರು ಎಂಬುದು ವಿಶೇಷ.

ಸಕ್ಲೇನ್ ಮುಷ್ತಾಕ್
ತಂಡ: ಪಾಕಿಸ್ತಾನ
ಎದುರಾಳಿ: ಜಿಂಬಾಬ್ವೆ
ಆವೃತ್ತಿ: 1999
1987ರ ವಿಶ್ವಕಪ್‌ನಲ್ಲಿ ಚೇತನ್ ಶರ್ಮಾ ಅವರ ಹ್ಯಾಟ್ರಿಕ್ ವಿಕೆಟ್ ಬಳಿಕ ವಿಶ್ವಕಪ್ ಅಂಗಣದಲ್ಲಿ ಮತ್ತೊಂದು ಹ್ಯಾಟ್ರಿಕ್ ಸಾಧನೆ ಕಾಣಲು ಬರೋಬ್ಬರಿ 12 ವರ್ಷಗಳನ್ನು ಕಾಯಬೇಕಾಯಿತು. 1999ರಲ್ಲಿ ಇಂಗ್ಲೆಂಡ್ ಆತಿಥ್ಯದಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಆಫ್‌ಸ್ಪಿನ್ನರ್ ಸಕ್ಲೇನ್ ಮುಷ್ತಾಕ್, ಜಿಂಬಾಬ್ವೆ ತಂಡದ ಬ್ಯಾಟಿಂಗ್ ವಿಭಾಗವನ್ನು ಬುಡಮೇಲು ಮಾಡಿಬಿಟ್ಟರು. ಮೊದಲಿಗೆ ಹೆನ್ರಿ ಒಲಾಂಗ ಸ್ಟಂಪ್ ಔಟ್‌ಗೆ ಬಲಿಯಾದರೆ, ಬಳಿಕ ಆಡಮ್ ಹಕಲ್ ಮತ್ತು ಪೋಮಿ ಎಮ್‌ಬಾಂಗ್ವಾ ಅವರನ್ನು ಪೆವಿಲಿಯನ್ ಸೇರಿಸುವ ಮೂಲಕ ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಸಾಧನೆ ಮೆರೆದ ಎರಡನೇ ಹಾಗೂ ಪಾಕಿಸ್ತಾನದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಚಮಿಂಡಾ ವಾಸ್
ತಂಡ: ಶ್ರೀಲಂಕಾ
ಎದುರಾಳಿ: ಬಾಂಗ್ಲಾದೇಶ
ಆವೃತ್ತಿ: 2003
2003ರ ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ತಂಡದ ಅನುಭವಿ ಎಡಗೈ ವೇಗದ ಬೌಲರ್ ಚಮಿಂಡಾ ವಾಸ್, ಬಾಂಗ್ಲಾದೇಶ ಬ್ಯಾಟ್ಸ್‌ಮನ್‌ಗಳಿಗೆ ಸಿಂಹ ಸ್ವಪ್ನವಾದರು. ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ತಮ್ಮ ಸ್ವಿಂಗ್ ಬೌಲಿಂಗ್ ಮೂಲಕ ಮಿಂಚಿದ ವಾಸ್, ಹನಾನ್ ಸರ್ಕಾರ್, ಮೊಹಮ್ಮದ್ ಅಶ್ರಫುಲ್ ಮತ್ತು ಎಹ್ಸಾನುಲ್ ಹಕ್ ಅವರನ್ನು ಔಟ್ ಮಾಡುವ ಮೂಲಕ ವಿಶ್ವಕಪ್ ಇತಿಹಾಸದ ಮೂರನೇ ಹ್ಯಾಟ್ರಿಕ್ ಸಾಧನೆಯನ್ನು ಬರೆದರು. ಕ್ರಿಕೆಟ್ ಇತಿಹಾಸದಲ್ಲಿ ಪಂದ್ಯದ ಮೊದಲ ಮೂರು ಎಸೆತಗಳಲ್ಲೇ ಹ್ಯಾಟ್ರಿಕ್ ವಿಕೆಟ್ ಸಾಧನೆಯಾಗಿದ್ದು ಇದೇ ಮೊದಲ ಬಾರಿ ಕೂಡ. ವಾಸ್ ಪಂದ್ಯದಲ್ಲಿ 25ಕ್ಕೆ 6 ವಿಕೆಟ್‌ಗಳನ್ನು ಉರುಳಿಸಿ ಪಂದ್ಯಶ್ರೇಷ್ಠ ಗೌರವ ಪಡೆದುಕೊಂಡರು.

ಬ್ರೆಟ್ ಲೀ
ತಂಡ: ಆಸ್ಟ್ರೇಲಿಯಾ
ಎದುರಾಳಿ: ಕೀನ್ಯಾ
ಆವೃತ್ತಿ: 2003
ವಿಶ್ವಕಪ್ ಅಂಗಣದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಆಸ್ಟ್ರೇಲಿಯಾದ ಏಕಮಾತ್ರ ಬೌಲರ್ ಬ್ರೆಟ್ ಲೀ. ತಮ್ಮ ಮಿಂಚಿನ ವೇಗಕ್ಕೆ ಹೆಸರುವಾಸಿಯಾದ ಬ್ರೆಟ್ ಲೀ, 2003ರಲ್ಲಿ ಕೀನ್ಯಾ ವಿರುದ್ಧ ಈ ಸಾಧನೆ ಮಾಡಿದರು. ಕೀನ್ಯಾದ ಆರಂಭಿಕ ಬ್ಯಾಟ್ಸ್‌ಮನ್ ಕೆನಡಿ ಒಟಿಯೇನೊ, ಬ್ರಿಜಲ್ ಪಟೇಲ್ ಮತ್ತು ಡೇವಿಡ್ ಒಬೂಯಾ ಅವರನ್ನು ಔಟ್ ಮಾಡಿದ ಬ್ರೆಟ್ ಲೀ ತಮ್ಮ ಸಿಗ್ನೇಚರ್ ಸೆಲೆಬ್ರೇಷನ್ ಮೂಲಕ ಹ್ಯಾಟ್ರಿಕ್ ಸಂಭ್ರಮವನ್ನು ಆಚರಿಸಿದ್ದರು.
ಲಸಿತ್ ಮಾಲಿಂಗ
ತಂಡ: ಶ್ರೀಲಂಕಾ
ಎದುರಾಳಿ: ದಕ್ಷಿಣ ಆಫ್ರಿಕಾ
ಆವೃತ್ತಿ: 2007
ದ್ವೀಪ ರಾಷ್ಟ್ರ ಶ್ರೀಲಂಕಾದ ಸಾರ್ವಕಾಲಿಕ ಶ್ರೇಷ್ಠ ವೇಗದ ಬೌಲರ್‌ಗಳಲ್ಲಿ ಒಬ್ಬರಾದ ಲಸಿತ್ ಮಾಲಿಂಗ, ವಿಶ್ವಕಪ್ ಇತಿಹಾಸದಲ್ಲಿ ಎರಡು ಹ್ಯಾಟ್ರಿಕ್ ಸಾಧನೆ ಮಾಡಿರುವ ವಿಶ್ವದ ಏಕಮಾತ್ರ ಬೌಲರ್ ಆಗಿದ್ದಾರೆ. ಮೊದಲಿಗೆ 2007ರಲ್ಲಿ ವೆಸ್ಟ್ ಇಂಡೀಸ್‌ನಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸೂಪರ್ 8 ಹಂತದ ಪಂದ್ಯದಲ್ಲಿ ಈ ಸಾಧನೆ ಮೆರೆದರು. ಹರಿಣ ಪಡೆಯ ಶಾನ್ ಪೊಲಾಕ್, ಬಳಿಕ ಆಂಡ್ರೂ ಹಾಲ್ ಮತ್ತು ಜಾಕ್ ಕಾಲಿಸ್ ಅವರನ್ನೂ ಔಟ್ ಮಾಡಿ ಹ್ಯಾಟ್ರಿಕ್ ಹೀರೊ ಎನಿಸಿದರು. ಇಷ್ಟಕ್ಕೆ ಸುಮ್ಮನಾಗದ ಮಾಲಿಂಗ ಮರು ಎಸೆತದಲ್ಲಿ ಮಕಾಯ ಎನ್ಟಿನಿ ವಿಕೆಟ್ ಕೂಡ ಪಡೆದು 4 ಎಸೆತಗಳಲ್ಲಿ 4 ವಿಕೆಟ್ ಉರುಳಿಸಿದ ಸಾಧನೆಯನ್ನೂ ಮಾಡಿದರು. ಆದರೂ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 1 ವಿಕೆಟ್ ಅಂತರದಲ್ಲಿ ಜಯ ದಾಖಲಿಸಿತ್ತು.

ಕೆಮಾರ್ ರೋಚ್
ತಂಡ: ವೆಸ್ಟ್ ಇಂಡೀಸ್
ಎದುರಾಳಿ: ನೆದರ್ಲೆಂಡ್ಸ್
ಆವೃತ್ತಿ: 2011
ಕ್ರಿಕೆಟ್ ಕೂಸು ನೆದರ್ಲೆಂಡ್ಸ್ ವಿರುದ್ಧ ವೆಸ್ಟ್ ಇಂಡೀಸ್ ತಂಡ ವೇಗದ ಬೌಲರ್ ಕೆಮಾರ್ ರೋಚ್ 2011ರ ವಿಶ್ವಕಪ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಸಾಧನೆ ಮೆರೆದರು.
ಪಂದ್ಯದಲ್ಲಿ 331 ರನ್‌ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ್ದ ನೆದರ್ಲೆಂಡ್ಸ್, ರೋಚ್ ಅಬ್ಬರಕ್ಕೆ ಬೆಚ್ಚಿ 115ಕ್ಕೆ 7 ವಿಕೆಟ್‌ಗಳನ್ನು ಗಳೆದುಕೊಂಡಿತ್ತು. ಪೀಟರ್ ಸೀಲರ್ ಮತ್ತು ಬೆರ್ನಾರ್ಡ್ ಲೂಟ್ಸ್ ಅವರನ್ನು ಎಲ್‌ಬಿ ಬಲೆಗೆ ಬೀಳಿಸಿದ ರೋಚ್, ಬೆರ್ನಾಡ್ ವೆಸ್ಟ್‌ಡಿಕ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ವಿಂಡೀಸ್‌ಗೆ 215 ರನ್‌ಗಳ ಭರ್ಜರಿ ಜಯ ತಂದುಕೊಟ್ಟಿದ್ದರು.

ಮತ್ತೊಮ್ಮೆ ಲಸಿತ್ ಮಾಲಿಂಗ
ತಂಡ: ಶ್ರೀಲಂಕಾ
ಎದುರಾಳಿ: ಕೀನ್ಯಾ
ಆವೃತ್ತಿ: 2011
2003ರ ವಿಶ್ವಕಪ್ ಬಳಿಕ 2011ರ ವಿಶ್ವಕಪ್‌ನಲ್ಲೂ ಎರಡು ಹ್ಯಾಟ್ರಿಕ್ ಸಾಧನೆಗಳು ಮೂಡಿಬಂದವು. ರೌಂಡ್ ಆರ್ಮ್ ಶೈಲಿಯ ವೇಗದ ಬೌಲರ್ ಮಾಲಿಂಗ, ತನ್ಮಯ್ ಮಿಶ್ರಾ ಅವರನ್ನು ಎಲ್‌ಬಿ ಬಲಗೆ ಬೀಳಿಸಿ, ಬಳಿಕ ಪೀಟರ್ ಒಗೊಂಡೊ ಮತ್ತು ಶೆಮ್ ಎನ್‌ಗೋಚೆ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ವಿಶ್ವಕಪ್ ಇತಿಹಾಸದಲ್ಲಿ ಎರಡು ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ ಮಾಡಿರುವ ಏಕಮಾತ್ರ ಬೌಲರ್ ಎನಿಸಿದರು.

ಸ್ಟೀವನ್ ಫಿನ್
ತಂಡ: ಇಂಗ್ಲೆಂಡ್
ಎದುರಾಳಿ: ಆಸ್ಟ್ರೇಲಿಯಾ
ಆವೃತ್ತಿ: 2015
ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಜಂಟಿ ಆಶ್ರಯದಲ್ಲಿ ಆಯೋಜಿಸಿದ 2015ರ ವಿಶ್ವಕಪ್ ಟೂರ್ನಿಯಲ್ಲೂ ಎರಡು ಹ್ಯಾಟ್ರಿಕ್ ಮೂಡಿಬಂದವು. ಮೊದಲಿಗೆ ಇಂಗ್ಲೆಂಡ್ ತಂಡದ ವೇಗದ ಬೌಲರ್ ಸ್ಟೀವನ್ ಫಿನ್, ಆಸ್ಟ್ರೇಲಿಯಾ ವಿರುದ್ಧ ಎಂಸಿಜಿಯಲ್ಲಿ ನಡೆದ ಪಂದ್ಯದಲ್ಲಿ ಇನಿಂಗ್ಸ್‌ನ ಅಂತಿಮ ಮೂರು ಎಸೆತಗಳಲ್ಲಿ ಹ್ಯಾಟ್ರಿಕ್ ಸಾಧನೆ ಮೆರೆದರು. ಮೊದಲಿಗೆ ಬ್ರಾಡ್ ಹ್ಯಾಡಿನ್ ವಿಕೆಟ್ ಪಡೆದ ಫಿನ್, ಬಳಿಕ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಮಿಚೆಲ್ ಜಾನ್ಸನ್ ಅವರನ್ನೂ ಪೆವಿಲಿಯನ್‌ಗೆ ಸೇರಿಸಿ ವಿಶ್ವಕಪ್‌ಬಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಇಂಗ್ಲೆಂಡ್‌ನ ಮೊದಲ ಬೌಲರ್ ಎನಿಸಿದರು.

ಜೆಪಿ ಡುಮಿನಿ
ತಂಡ: ದಕ್ಷಿಣ ಆಫ್ರಿಕಾ
ಎದುರಾಳಿ: ಶ್ರೀಲಂಕಾ
ಆವೃತ್ತಿ: 2007
ವಿಶ್ವಕಪ್ ಟೂರ್ನಿಗಳಲ್ಲಿ ಹ್ಯಾಟ್ರಿಕ್ ಸಾಧನೆ ಮೆರೆದ ಬೌಲರ್‌ಗಳ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ಏನು ಹಿಂದೆ ಬಿದ್ದಿಲ್ಲ. ತಂಡದ ಆಲ್‌ರೌಂಡರ್ ಜೆ.ಪಿ ಡುಮಿನಿ 2015ರ ವಿಶ್ವಕಪ್‌ನ ಕ್ವಾರ್ಟರ್‌ಫೈನಲ್ಸ್‌ನಲ್ಲಿ ಶ್ರೀಲಂಕಾ ವಿರುದ್ಧ ಈ ಸಾಧನೆ ಮಾಡಿದರು. ಲಂಕಾ ಪಡೆದ ಏಂಜಲೊ ಮ್ಯಾಥ್ಯೂಸ್, ನುವಾನ್ ಕುಲಶೇಖರ ಮತ್ತು ತಾರಿಂದು ಕುಶಲ್ ಅವರನ್ನು ಔಟ್ ಮಾಡುವ ಮೂಲಕ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾಕ್ಕೆ ಮೊದಲ ಹ್ಯಾಟ್ರಿಕ್ ವಿಕೆಟ್ ಸಂಭ್ರಮವನ್ನು ಕೊಡುಗೆಯಾಗಿ ನೀಡಿದರು. ಟೂರ್ನಿಯ ಸೆಮಿಫೈನಲ್ಸ್‌ನಲ್ಲಿ ಹರಿಣ ಪಡೆ ನ್ಯೂಜಿಲೆಂಡ್ ವಿರುದ್ಧ ನಿರಾಸೆ ಅನುಭವಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications