ಕ್ಯಾನ್ ಬೆರಾ, ಮಾ.3: ವಿಶ್ವಕಪ್ 2015 ದಾಖಲೆಗಳ ಧೂಳಿಪಟ ಮಾಡುವ ಟೂರ್ನಿಯಾಗುತ್ತಿದ್ದು, ಅದರಲ್ಲೂ ದಕ್ಷಿಣ ಆಫ್ರಿಕಾದ ಬ್ಯಾಟ್ಸ್ ಮನ್ ಗಳು ಅಂಕಿ ಅಂಶ ಕಲೆ ಹಾಕುವವರಿಗೆ ಭಾರಿ ಕೆಲಸ ಕೊಡುತ್ತಿದ್ದಾರೆ. ಮನುಕಾ ಓವಲ್ ನಲ್ಲಿ ಮಂಗಳವಾರ ನಡೆದಿರುವ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಹಶೀಂ ಅಮ್ಲಾ ಅವರು ವಿರಾಟ್ ಕೊಹ್ಲಿ ದಾಖಲೆಯನ್ನು ಪಕ್ಕಕ್ಕೆ ಸರಿಸಿದ್ದಾರೆ.
ಐಸಿಸಿ ವಿಶ್ವಕಪ್ 2015 ಟೂರ್ನಿಯ ಬಿ ಗುಂಪಿನ ಪಂದ್ಯದಲ್ಲಿ ಬಲಗೈ ಬ್ಯಾಟ್ಸ್ ಮನ್ ಹಶೀಂ ಆಮ್ಲಾ ಅವರು ಭರ್ಜರಿ ಶತಕ ದಾಖಲಿಸಿ ತಂಡದ ಮೊತ್ತ 411ಕ್ಕೇರುವಂತೆ ಮಾಡಿದರು. 31 ವರ್ಷ ವಯಸ್ಸಿನ ಆಮ್ಲಾ ಅವರು ತಮ್ಮ ವೃತ್ತಿ ಬದುಕಿನ 20ನೇ ಶತಕ ದಾಖಲಿಸುವ ಮೂಲಕ ಕೊಹ್ಲಿ ದಾಖಲೆ ಮುರಿದರು. [ಐರ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ ದಾಖಲೆ ಮೊತ್ತ]
ಏಕದಿನ ಕ್ರಿಕೆಟ್ ನಲ್ಲಿ ವೈಯಕ್ತಿಕ ಗರಿಷ್ಠ ಸ್ಕೋರ್ 159 ರನ್ ಮಾಡಿದ ಆಮ್ಲಾ ಅವರು ಮತ್ತೊಮ್ಮೆ ಕೊಹ್ಲಿ ದಾಖಲೆಗಳ ಹಿಂದೆ ಬಿದ್ದಂತೆ ಕಾಣುತ್ತದೆ. ಈ ಹಿಂದೆ 2014ರಲ್ಲಿ 17ನೇ ಶತಕ ದಾಖಲಿಸಿದಾಗಲೂ ತ್ವರಿತ ಗತಿಯಲ್ಲಿ ಆಮ್ಲಾ ಕೊಹ್ಲಿರನ್ನು ಹಿಂದಕ್ಕೆ ಸರಿಸಿದ್ದರು.

ಆಮ್ಲಾ ಅವರು 20ನೇ ಶತಕ ಸಂಭ್ರಮವನ್ನು ಕೇವಲ 111 ಪಂದ್ಯ(108 ಇನ್ನಿಂಗ್ಸ್) ಗಳಲ್ಲೇ ಆಚರಿಸುವ ಮೂಲಕ ಹೊಸ ಮೈಲಿಗಲ್ಲು ದಾಟಿದರು. ಕೊಹ್ಲಿ ಅವರು 20ನೇ ಶತಕವನ್ನು 133ಇನ್ನಿಂಗ್ಸ್ ನಲ್ಲಿ ದಾಟಿದ್ದರು. ಈಗ ಕೊಹ್ಲಿ ಅವರು 22 ಏಕದಿನ ಕ್ರಿಕೆಟ್ ಶತಕ ಗಳಿಸಿದ್ದಾರೆ.
ಜನವರಿ 2015ರಲ್ಲಿ ಕೊಹ್ಲಿ ಅವರ ಮತ್ತೊಂದು ದಾಖಲೆಯನ್ನು ಹಶೀಂ ಆಮ್ಲಾ ಹಿಂದಕ್ಕೆ ಹಾಕಿದ್ದರು. ಏಕದಿನ ಕ್ರಿಕೆಟ್ ನಲ್ಲಿ ತ್ವರಿತ ಗತಿಯಲ್ಲಿ 5,000ರನ್ ಗಳಿಸಿದ ಕ್ರಿಕೆಟ್ ದಿಗ್ಗಜ ವಿವಿಯನ್ ರಿಚರ್ಡ್ಸ್ (114 ಇನ್ನಿಂಗ್ಸ್) ದಾಖಲೆ ಸಮಕ್ಕೆ ಕೊಹ್ಲಿ (114ಇನ್ನಿಂಗ್ಸ್) ನಿಂತಿದ್ದರು. ಅದರೆ, ಆಮ್ಲಾ 101ಇನ್ನಿಂಗ್ಸ್ ನಲ್ಲೇ 5,000ರನ್ ಕಲೆ ಹಾಕಿ ಮುನ್ನಡೆದಿದ್ದರು.
ಏಕದಿನ ಪಂದ್ಯದಲ್ಲಿ ಸೂಪರ್ ಫಾಸ್ಟ್ ಸೆಂಚುರಿ ಚಚ್ಚಿದ ಧೀರರು:
* ಹಶೀಂ ಆಮ್ಲಾ -108
* ವಿರಾಟ್ ಕೊಹ್ಲಿ- 133
* ಎಬಿ ಡಿ ವಿಲೆಯರ್ಸ್-175
* ಸಚಿನ್ ತೆಂಡೂಲ್ಕರ್-197
* ಸೌರವ್ ಗಂಗೂಲಿ-214
ಒನ್ ಇಂಡಿಯಾ ಸುದ್ದಿ