ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಮತ್ತೊಂದು ಪಂದ್ಯಕ್ಕೆ ಅಲಭ್ಯವಾಗಲಿದ್ದಾರೆ. ಇಂದು(ನವೆಂಬರ್ 1) ನಡೆಯುವ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕೂ ಕೇನ್ ಅಲಭ್ತವಾಗುವುದು ದೃಢಪಟ್ಟಿದ್ದು ಮಹಾರಾಷ್ಟ್ರದ ಎಂಸಿಎ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿಯೂ ಟಾಮ್ ಲ್ಯಾಥಮ್ ಅವರೇ ತಂಡವನ್ನು ಮುನ್ನಡೆಸಲಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕೆ ಮಾತ್ರವಲ್ಲದೆ ನಂತರ ನಡೆಯಲಿರುವ ಪಾಕಿಸ್ತಾನ ವಿರುದ್ಧ ಪಂದ್ಯಕ್ಕೂ ಕೇನ್ ವಿಲಿಯಮ್ಸನ್ ಕಣಕ್ಕಿಳಿಯುವುದು ಅನುಮಾನವಾಗಿದೆ. ಸೋಮವಾರ ಕೇನ್ ವಿಲಿಯಮ್ಸನ್ ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸವನ್ನು ನಡೆಸಿದ್ದರಾದರೂ ಸಂಪೂರ್ಣವಾಗಿ ಅವರು ಚೇತರಿಸಿಕೊಂಡಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಗಾಯಕ್ಕೆ ತುತ್ತಾಗಿರುವ ಹೆಬ್ಬೆರಳನ್ನು ಸುತ್ತಿಕೊಂಡಿರುವುದು ಕಂಡುಬಂದಿದೆ.

ಬಾಂಗ್ಲಾದೇಶ ತಂಡದ ವಿರದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದಾಗ ಕೇನ್ ವಿಲಿಯಮ್ಸನ್ ಹೆಬ್ಬೆರಳಿಗೆ ಚೆಂಡು ಬಡಿದು ಗಾಯಕ್ಕೆ ತುತ್ತಾಗಿದ್ದರು. ಉತ್ತಮವಾಗಿ ಬ್ಯಾಟಿಂಗ್ ನಡೆಸುತ್ತಿದ್ದ ಕೇನ್ ವಿಲಿಯಮ್ಸನ್ ರನ್‌ಗಾಗಿ ಓಡುತ್ತಿದ್ದಾಗ ಫೀಲ್ಡರ್ ಎಸೆದ ಚೆಂಡು ಕೇನ್ ವಿಲಿಯಮ್ಸನ್ ಅವರ ಕೈಗೆ ಬಡಿದಿತ್ತು. ಇದು ಮೂಳೆಯಲ್ಲಿ ಸಣ್ಣ ಬಿರುಕುಂಟು ಮಾಡಿತ್ತು. ಹೀಗಾಗಿ ಮುಂದಿನ ಪಂದ್ಯಗಳಿಂದ ಕೇನ್ ವಿಲಿಯಮ್ಸನ್ ಹೊರಗುಳಿಯುವಂತಾಗಿದೆ.
ಇನ್ನು ದುರದೃಷ್ಟವೆಂದರೆ ಸುದೀರ್ಘ ಐದು ತಿಂಗಳ ಕಾಲ ಗಾಯದ ವಿಶ್ರಾಂತಿಯಿಂದ ಬಂದ ಬಳಿಕ ಆಡಿದ ಮೊದಲ ಪಂದ್ಯದಲ್ಲಿಯೇ ಕೇನ್ ವಿಲಿಯಮ್ಸನ್ ಈ ಗಾಯಕ್ಕೆ ತುತ್ತಾಗಿದ್ದರು. ಇದಕ್ಕೂ ಮುನ್ನ ಕಳೆದ ಐಪಿಎಲ್‌ಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಕೇನ್ ಕಾಲಿನ ಗಾಯಕ್ಕೆ ತುತ್ತಾಗಿ ಸುದೀರ್ಘ ಕಾಲ ತಂಡದಿಂದ ಹೊರಗುಳಿಯುವಂತಾಗಿತ್ತು.
ನವೆಂಬರ್ 4 ಶನಿವಾರದಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಾಕಿಸ್ತಾನದ ವಿರುದ್ಧ ನ್ಯೂಜಿಲೆಂಡ್ ಪಂದ್ಯವನ್ನಾಡಲಿದೆ. ಈ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಆಡಲಿದ್ದಾರಾ ಎನ್ನುವುದು ಸ್ಪಷ್ಟವಾಗಿಲ್ಲ. ಸದ್ಯ ವೈದ್ಯಕೀಯ ವಿಭಾಗದ ನಿಗಾದಲ್ಲಿ ಕೇನ್ ವಿಲಿಯಮ್ಸನ್ ಇದ್ದು ಆ ಪಂದ್ಯಕ್ಕೂ ಮುನ್ನ ಪರೀಕ್ಷಿಸಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ.