ವಿಶ್ವಕಪ್‌ನಲ್ಲಿ ಇಂದು ದಕ್ಷಿಣ ಆಫ್ರಿಕಾ ತಂಡ ನೆದರ್ಲೆಂಡ್ಸ್ ವಿರುದ್ಧ ಸೆಣಸಾಟಕ್ಕೆ ಇಳಿದಿದೆ. ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೊಸಿಯೇಶನ್ ಕ್ರೀಡಾಂಗಣದಲ್ಲಿ ಈ ಪಂದ್ಯ ಆಯೋಜನೆಯಾಗುತ್ತಿದೆ. ಮಳೆಯಿಂದಾಗಿ ಒಂದು ಗಂಟೆ ತಡವಾಗಿ ಪಂದ್ಯ ಆರಂಭವಾಗಿದ್ದು ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಟಾಸ್ ಗೆದ್ದುಕೊಂಡಿದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ನೆದರ್ಲೆಂಡ್ಸ್ ತಂಡ ಆರಂಭದಲ್ಲಿ ಬ್ಯಾಟಿಂಗ್ ನಡೆಸುವ ಸವಾಲು ಪಡೆದುಕೊಂಡಿದೆ.
ಇನ್ನು ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದಲ್ಲಿ ಒಂದು ಬದಲಾವಣೆ ಮಾಡಿಕೊಳ್ಳಲಾಗಿದೆ. ಗೆರಾಲ್ಡ್ ಕೊಯಿಟ್ಜೀ ಆಡುವ ಬಳಗದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದು ತಬ್ರೈನ್ ಶಂಸಿ ಆಡುವ ಬಳಗದಿಂದ ಹೊರಬಿದ್ದಿದ್ದಾರೆ. ಇನ್ನು ನೆದರ್ಲೆಂಡ್ಸ್ ತಂಡದಲ್ಲಿಯೂ ಒಂದು ಬದಲಾವಣೆಯಾಗಿದ್ದು ರಿಯಾನ್ ಕ್ಲೈನ್ ಬದಲಿಗೆ ಲೋಗನ್ ವಾನ್ ಬೀಕ್ ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾ ತಂಡ ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 102 ರನ್‌ಗಳ ಭರ್ಜರಿ ಗೆಲುವು ಸಾಧಿಸಿದ್ದರೆ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 134 ರನ್‌ಗಳ ಅಂತರದ ಬೃಹತ್ ಗೆಲುವು ಸಾಧಿಸಿತ್ತು. ಮತ್ತೊಂದೆಡೆ ನೆದರ್ಲೆಂಡ್ಸ್ ತಂಡ ಮೊದಲ ಎರಡು ಪಂದ್ಯಗಳಲ್ಲಿಯೂ ಹೀನಾಯ ಸೋಲು ಕಂಡಿದ್ದು ದಕ್ಷಿಣ ಆಫ್ರಿಕಾಗೆ ಶಾಕ್ ನೀಡುವ ಲೆಕ್ಕಾಚಾರದಲ್ಲಿದೆ. ಎಲ್ಲಾ ವಿಭಾಗದಲ್ಲಿಯೂ ಅದ್ಭುತ ಲಯದಲ್ಲಿರುವ ದಕ್ಷಿಣ ಆಫ್ರಿಕಾ ತಂಡಕ್ಕೆ ನೆದರ್ಲೆಂಡ್ಸ್ ತಂಡ ಯಾವ ರೀತಿಯ ಹೋರಾಟ ನೀಡಲಿದೆ ಎನ್ನುವುದಷ್ಟೇ ಈಗ ಕುತೂಹಲ ಕೆರಳಿಸಿದೆ.
ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿನ ಬ್ಯಾಟರ್‌ಗಳಿಗೆ ಹೆಚ್ಚಿನ ನೆರವು ನೀಡುವ ಗುಣ ಹೊಂದಿದೆ. ಆದರೆ ವೇಗಿಗಳಿಗೆ ಇಲ್ಲಿ ಸೀಮ್ ಮತ್ತು ಸ್ವಿಂಗ್ ಚಲನೆಯಿಂದಾಗಿ ನೆರವು ದೊರೆಯುವ ಸಾಧ್ಯತೆಯೂ ಇದೆ. ಹಾಗಾಗಿ ಆರಂಭದಲ್ಲಿ ಬ್ಯಾಟರ್‌ಗಳಿಗೆ ನೆಲೆಯೂರುವುದು ಕಠಿಣವೆನಿಸಬಹುದು. ಆದರೆ ಕ್ರೀಸ್‌ನಲ್ಲಿ ನೆಲೆಯೂರಲು ಸಾಧ್ಯವಾದರೆ ಬಳಿಕ ರನ್ ಸರಾಗವಾಗಿ ಹರಿಸುವ ಅವಕಾಶವಿದೆ. ಇನ್ನು ಇಲ್ಲಿ ಟಾಸ್ ಗೆದ್ದ ತಂಡಗಳು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವುದು ಉತ್ತಮ ನಿರ್ಧಾರವಾಗಲಿದೆ. ಇಲ್ಲಿ ಮೊದಲ ಇನ್ನಿಂಗ್ಸ್‌ನ ಸರಾಸರಿ ಸ್ಕೋರ್ 266 ರನ್.
ಇತ್ತಂಡಗಳ ಸಂಪೂರ್ಣ ಸ್ಕ್ವಾಡ್
ದಕ್ಷಿಣ ಆಫ್ರಿಕಾ: ಟೆಂಬಾ ಬವುಮಾ (ನಾಯಕ), ಜೆರಾಲ್ಡ್ ಕೋಟ್ಜಿ, ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್, ಮಾರ್ಕೊ ಜಾನ್ಸೆನ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್ಗಿಡಿ, ಆಂಡಿಲೆ ಫೆಹ್ಲುಕ್ವಾಯೊ, ಕಗಿಸೊ ರಬಾಡ, ತಬ್ರೈಜ್ ಶಮ್ಸಿ, ರಾಸ್ಸಿ ವಾನ್ ಡೆರ್ ಡಸ್ಸೆನ್, ಲಿಜಾದ್ ವಿಲಿಯಮ್ಸ್.
ನೆದರ್ಲ್ಯಾಂಡ್ಸ್: ಸ್ಕಾಟ್ ಎಡ್ವರ್ಡ್ಸ್ (ನಾಯಕ), ಮ್ಯಾಕ್ಸ್ ಒ'ಡೌಡ್, ಬಾಸ್ ಡಿ ಲೀಡ್, ವಿಕ್ರಮ್ ಸಿಂಗ್, ತೇಜ ನಿಡಮನೂರು, ಪಾಲ್ ವ್ಯಾನ್ ಮೀಕೆರೆನ್, ಕಾಲಿನ್ ಅಕರ್ಮನ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಲೋಗನ್ ವ್ಯಾನ್ ಬೀಕ್, ಆರ್ಯನ್ ದತ್, ರಯಾನ್ ಕ್ಲೈನ್, ವೆಸ್ಲಿ ಬ್ಯಾರೆಸಿ, ಸಾಕಿಬ್ ಜುಲ್ಫಿಕರ್, ಶರೀಜ್ ಅಹ್ಮದ್, ಸೈಬ್ರಾಂಡ್ ಎಂಗಲ್‌ಬ್ರೆಕ್ಟ್.