ಮೆಲ್ಬೋರ್ನ್, ಫೆ.26: ದಾಖಲೆಯ 400ನೇ ಏಕದಿನ ಪಂದ್ಯವಾಡುತ್ತಿರುವ ಕುಮಾರ್ ಸಂಗಕ್ಕಾರ ಹಾಗೂ ಸ್ಫೋಟಕ ಆರಂಭಿಕ ಬ್ಯಾಟ್ಸ್ ಮನ್ ತಿಲಕರತ್ನೆ ದಿಲ್ಶನ್ ಅವರ ಶತಕಗಳ ನೆರವಿನಿಂದ ಬಾಂಗ್ಲಾದೇಶ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಶ್ರೀಲಂಕಾ 92ರನ್ ಗಳ ಸುಲಭ ಜಯ ಸಾಧಿಸಿದೆ.
ಮೆಲ್ಬೋರ್ನ್ ಮೈದಾನದಲ್ಲಿ ಎ ಗುಂಪಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡ ಲಹಿರು ತಿರುಮನ್ನೆ (52) ವಿಕೆಟ್ ಕಳೆದುಕೊಂಡ ಮೇಲೆ 210ರನ್ ಗಳ ಅಜೇಯ ಜೊತೆಯಾಟ ಸಾಧಿಸಿತು. ದಿಲ್ಶನ್ 161ರನ್ (21ನೇ ಶತಕ) ಹಾಗೂ ಸಂಗಕ್ಕಾರ 105ರನ್ (22ನೇ ಶತಕ)ಗಳಿಸಿ ತಂಡದ ಮೊತ್ತವನ್ನು 50 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 332 ರನ್ ಗೇರಿಸಿದರು.
ಶ್ರೀಲಂಕಾದ ನೀಡಿರುವ ಬೃಹತ್ ಮೊತ್ತದ ಸವಾಲು ಸ್ವೀಕರಿಸಿದ ಬಾಂಗ್ಲಾದೇಶ ತಂಡ 26 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 118ರನ್ ಗಳಿಸಿ ಸಂಕಷ್ಟದ ಸ್ಥಿತಿಯಲ್ಲಿತ್ತು. ಕೊನೆಗೆ 47 ಓವರ್ ಗಳಲ್ಲಿ 240ಕ್ಕೆ ಆಲೌಟ್ ಆಗಿದೆ.
ಬಾಂಗ್ಲಾದೇಶ ಪರ ಶಕೀಲ್ ಅಲ್ ಹಸನ್ 46ರನ್ ಗಳಿಸಿದರೆ, ಶಬ್ಬೀರ್ ರಹ್ಮನ್ 53ರನ್ ಗಳಿಸಿ ಪ್ರತಿರೋಧ ಒಡ್ಡಿದರು. ಮಾಲಿಂಗ 35 ಕ್ಕೆ 3 ಹಾಗೂ ದಿಲ್ಶನ್ 35ಕ್ಕೆ 2 ವಿಕೆಟ್ ಗಳಿಸಿ ಲಂಕಾ ಜಯಕ್ಕೆ ತಮ್ಮ ಕೊಡುಗೆ ನೀಡಿದರು.
ಮಹೇಲ ಜಯವರ್ಧನೆ ಹಾಗೂ ಸನತ್ ಜಯಸೂರ್ಯ ನಂತರ 400 ಏಕದಿನ ಪಂದ್ಯಗಳನ್ನಾಡಿದ ಶ್ರೀಲಂಕಾದ ಮೂರನೇ ಆಟಗಾರರಾಗಿ ಕುಮಾರ್ ಸಂಗಕ್ಕಾರ ಸಾಧಕರ ಪಟ್ಟಿ ಸೇರಿದ್ದಾರೆ. ಶ್ರೀಲಂಕಾ ಎಂಸಿಜಿ ಆಡಿದ್ದ 17 ಏಕದಿನಗಳ ಪೈಕಿ 6 ರಲ್ಲಿ ಗೆಲುವು ಸಾಧಿಸಿತ್ತು.ಈಗ ಮತ್ತೊಮ್ಮೆ ಗೆಲುವು ಇದಕ್ಕೆ ಸೇರ್ಪಡೆಯಾಗಿದೆ.