ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ ಈ ಬಾರಿಯ ವಿಶ್ವಕಪ್‌ನಲ್ಲಿ ತನ್ನ ಹೀನಾತ ಪ್ರದರ್ಶನವನ್ನು ಮುಂದುವರಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿಯೂ ಇಂಗ್ಲೆಂಡ್ ತಂಡ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲಿಯೂ ಅತ್ಯಂತ ಹೀನಾಯ ಪ್ರದರ್ಶನ ನೀಡಿದ್ದು ಬರೊಬ್ಬರಿ 229 ರನ್‌ಗಳ ಅಂತರದ ಸೋಲು ಅನುಭವಿಸಿದೆ. ಈ ಮೂಲಕ ಆಡಿದ ನಾಲ್ಕು ಪಂದ್ಯಗಳಲ್ಲಿ ಇಂಗ್ಲೆಂಡ್ ಮೂರನೇ ಸೋಲು ಕಂಡಂತಾಗಿದೆ.
ಟಾಸ್ ಗೆದ್ದ ಇಂಗ್ಲೆಂಡ್ ತಂಡ ಮೊದಲಿಗೆ ದಕ್ಷಿಣ ಆಫ್ರಿಕಾವನ್ನು ಬ್ಯಾಟಿಂಗ್‌ಗೆ ಇಳಿಸಿತ್ತು. ಬೌಲಿಂಗ್‌ನಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡುವಲ್ಲಿ ಇಂಗ್ಲೆಂಡ್ ಸಂಪೂರ್ಣವಾಗಿ ವಿಫಲವಾಯಿತು. ದಕ್ಷಿಣ ಆಪ್ರಿಕಾದ ಬ್ಯಾಟಿಂಗ್ ವಿಭಾಗ ನೀಡಿದ ಬರೊಬ್ಬರಿ 400 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡ ಬ್ಯಾಟಿಂಗ್‌ನಲ್ಲಿಯೂ ಅತ್ಯಂತ ಹೀನಾಯ ಪ್ರದರ್ಶನ ನೀಡಿದೆ. ಬ್ಯಾಟಿಂಗ್ ಸ್ನೇಹಿಯಾಗಿರುವ ಮುಂಬೈನ ವಾಂಖೆಡೆ ಪಿಚ್‌ನಲ್ಲಿ ಇಂಗ್ಲೆಂಡ್ ತಂಡ ಕೇವಲ 170 ರನ್‌ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಭಾರೀ ಸೋಲು ಅನುಭವಿಸಿದೆ.

ವಿಪರ್ಯಾಸವೆಂದರೆ ಇಂಗ್ಲೆಂಡ್ ತಂಡದ 9ನೇ ಕ್ರಮಾಂಕದ ಜೋಡಿ ಗುಸ್ ಅಟ್ಕಿನ್ಸನ್ ಮತ್ತು ಮಾರ್ಕ್ ವುಡ್ 70 ರನ್‌ಗಳ ಜೊತೆಯಾಟ ನೀಡಿದ ಕಾರಣ ತಂಡದ ಮೊತ್ತ 170ರವರೆಗೆ ತಲುಪಿತ್ತು. ಇಲ್ಲವಾದಲ್ಲಿ ಇದಕ್ಕೂ ಹೀನಾಯವಾಗಿ ಇಂಗ್ಲೆಂಡ್ ಸೋಲುವುದು ನಿಶ್ಚಿತವಾಗಿತ್ತು. ಅತ್ಯಂತ ಬಲಿಷ್ಠವಾದ ಬ್ಯಾಟಿಂಗ್ ವಿಭಾಗ ಎನಿಸಿಕೊಂಡಿರುವ ಇಂಗ್ಲೆಂಡ್ ತಂಡದ ಯಾವೊಬ್ಬ ಆಟಗಾರ ಕೂಡ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿದ್ದು ಭಾರೀ ಮುಖಭಂಗಕ್ಕೆ ಒಳಗಾಗಿದೆ.
ಇದಕ್ಕೂ ಮುನ್ನ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ ತಂಡ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿತು. ಹೆನ್ರಿಕ್ ಕ್ಲಾಸೆನ್ ಸ್ಪೋಟಕ ಶತಕ ಸಿಡಿಸಿ ಅಬ್ಬರಿಸಿದ್ದು ಅವರಿಗೆ ಮಾರ್ಕೋ ಜಾನ್ಸನ್ ಕೂಡ ಅದ್ಭುವಾದ ಸಾಥ್ ನೀಡಿದ್ದಾರೆ. ಹೀಗಾಗಿ ನಿಗದಿತ 50 ಓವರ್‌ಗಳಲ್ಲಿ ದಕ್ಷಿಣ ಆಫ್ರಿಕಾ ತಂಡ 399 ರನ್‌ಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿತ್ತು.
ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ದಕ್ಷಿಣ ಆಫ್ರಿಕಾ ತಂಡ ಮೊದಲ ವಿಕೆಟನ್ನು ಎರಡನೇ ಎಸೆತದಲ್ಲಿಯೇ ಕಳೆದುಕೊಂಡಿತ್ತು. ಕ್ವಿಂಟನ್ ಡಿಕಾಕ್ ಅಗ್ಗಕ್ಕೆ ಔಟಾಗುವ ಮೂಲಕ ನಿರಾಸೆ ಅನುಭವಿಸಿದರು. ಆದರೆ ಎರಡನೇ ವಿಕೆಟ್‌ಗೆ ರೀಸ್ ಹೆಂಡ್ರಿಕ್ಸ್ ಹಾಗೂ ರಾಸ್ಸೀ ವಾನ್ ಡರ್ ಡುಸೆನ್ 121 ರನ್‌ಗಳ ಬೃಹತ್ ಜೊತೆಯಾಟ ನೀಡಿದರು. ಡುಸೆನ್ 60 ರನ್‌ಗಳಿಸಿ ವಿಕೆಟ್ ಕಳೆದುಕೊಂಡರೆ ಹೆಂಡ್ರಿಕ್ಸ್ 85 ರನ್‌ಗಳಿಸಿ ಔಟಾದರು.
ನಂತರ ಐಡೆನ್ ಮಾರ್ಕ್ರಮ್ ಹಾಗೂ ಕ್ಲಾಸೆನ್ ಮತ್ತೊಂದು ಉತ್ತಮ ಜೊತೆಯಟದಲ್ಲಿ ಭಾಗಿಯಾದರು. ಮಾರ್ಕ್ರಮ್ 42 ರನ್‌ಗಳಿಗೆ ಔಟಾದರೆ ನಂತರ ಬಂದ ಡೇವಿಡ್ ಮಿಲ್ಲರ್ 5 ರನ್‌ಗಳಿಗೆ ಔಟಾಗಿ ನಿರಾಸೆಯುಂಟು ಮಾಡಿದರು. ಆದರೆ ಬಳಿಕ ಕಣಕ್ಕಿಳಿದ ಮಾರ್ಕೋ ಜಾನ್ಸನ್ ಕ್ಲಾಸೆನ್ ಜೊತೆಗೆ ಅಮೋಘ ಜೆತೆಯಾಟದಲ್ಲಿ ಭಾಗಿಯಾದರು.
ಕ್ಲಾಸೆನ್ ಹಾಗೂ ಜಾನ್ಸನ್ ಜೋಡಿ 76 ಎಸೆತಗಳಲ್ಲಿ ಬರೊಬ್ಬರಿ 151 ರನ್‌ಗಳನ್ನು ಬಾರಿಸಿ ಅಬ್ಬರಿಸಿದ್ದಾರೆ. 67 ಎಸೆತಗಳನ್ನು ಎದುರಿಸಿದ ಕ್ಲಾಸೆನ್ 109 ರನ್‌ಗಳನ್ನು ಬಾರಿಸಿ ಅಂತಿಮ ಓವರ್‌ನಲ್ಲಿ ವಿಕೆಟ್ ಕಳೆದುಕೊಂಡರು. ಇನ್ನು ಮಾರ್ಕೋ ಜಾನ್ಸನ್ 42 ಎಸೆತಗಳಲ್ಲಿ 75 ರನ್ ಬಾರಿಸಿ ಅಜೇಯವಾಗುಳಿಸಿದ್ದಾರೆ. ಈ ಇಬ್ಬರ ಅಬ್ಬರದ ಆಟದಿಂದಾಗಿ ದಕ್ಷಿಣ ಆಫ್ರಿಕಾ 399 ರನ್‌ಗಳನ್ನು ಬಾರಿಸಿತು.