ಶ್ರೀಲಂಕಾ ವಿರುದ್ಧ ಮತ್ತೊಮ್ಮೆ ಟೀಮ್ ಇಂಡಿಯಾದ ಬೌಲರ್‌ಗಳು ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಕಳೆದ ಏಷ್ಯಾಕಪ್ ಟೂರ್ನಿಯಲ್ಲಿ ದಯನೀಯವಾಗಿ ಸೋತು ಶರಣಾಗಿದ್ದ ಶ್ರೀಲಂಕಾ ವಿಶ್ವಕಪ್ ವೇದಿಕೆಯಲ್ಲಿಯೂ ಅಂಥಾದ್ದೇ ಪ್ರದರ್ಶನ ನೀಡಿದೆ. ಟೀಮ್ ಇಂಡಿಯಾದ ವಿಧ್ವಂಸಕ ಬೌಲಿಂಗ್ ದಾಳಿಗೆ ಉತ್ತರವೇ ಇಲ್ಲದ ಶ್ರೀಲಂಕಾ ತಂಡ ಈ ಪಂದ್ಯದಲ್ಲಿ ಅಂತರದ ಸೋಲು ಅನುಭವಿಸಿ ಮತ್ತೊಮ್ಮೆ ಮುಖಭಂಗಕ್ಕೆ ಒಳಗಾಗಿದೆ.
ಈ ಪಂದ್ಯದಲ್ಲಿ 302 ರನ್‌ಗಳ ಅಂತರದಿಂದ ಶ್ರೀಲಂಕಾ ತಂಡ ಭಾರತಕ್ಕೆ ಶರನಾಗುವ ಮೂಲಕ ವಿಶ್ವಕಪ್ ಇತಿಹಾಸದಲ್ಲಿ ಎರಡನೇ ಅತಿ ದೊಡ್ಡ ಸೋಲು ಕಂಡಂತಾಗಿದೆ. ಇದೇ ಟೂರ್ನಿಯಲ್ಲಿ ಆಸ್ಟ್ರೇಲಿಯಾ ನೆದರ್ಲಂಡ್ಸ್ ತಂಡವನ್ನು 309 ರನ್‌ಗಳ ಅಂತರದಿಂದ ಮಣಿಸಿರುವುದು ಮೊದಲ ಸ್ಥಾನದಲ್ಲಿದೆ.

ಟೀಮ್ ಇಂಡಿಯಾ ನೀಡಿದ 358 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಲು ಕಣಕ್ಕಿಳಿದ ಶ್ರೀಲಂಕಾ ತಂಡಕ್ಕೆ ಮೊದಲ ಎಸೆತದಲ್ಲಿಯೇ ಬೂಮ್ರಾ ಲಂಕಾ ಆರಂಭಿಕ ಆಟಗಾರ ಫಾತುಮ್ ನಿಸ್ಸಾಂಕ ವಿಕೆಟ್ ಕಳೆದುಕೊಂಡಿತ್ತು. ನಂತರ ದಾಳಿಗಿಳಿದ ಮೊಹಮ್ಮದ್ ಸಿರಾಜ್ ಕಳೆದ ಏಷ್ಯಾಕಪ್ ಟೂರ್ನಿಯಲ್ಲಿ ಮಾಡಿದ ಭಯಾನಕ ಬೌಲಿಂಗ್ ದಾಳಿಯನ್ನು ಈ ಪಂದ್ಯದಲ್ಲಿಯೂ ಮುಂದುವರಿಸಿ ಲಂಕಾ ತಂಡಕ್ಕೆ ಮತ್ತಷ್ಟು ಆಘಾತ ನೀಡಿದರು.
ತಮ್ಮ ಓವರ್‌ನ ಮೊದಲ ಎಸೆತದಲ್ಲಿಯೇ ದಿಮುತ್ ಕರುಣರತ್ನೆ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು. ನಂತರ ಅದೇ ಓವರ್‌ನ ಐದನೇ ಎಸೆತದಲ್ಲಿ ಅದೀರ ಸಮರವಿಕ್ರಮ ಕೂಡ ಸಿರಾಜ್‌ಗೆ ವಿಕೆಟ್ ಒಪ್ಪಿಸಿದರು. ನಂತರ ತಮ್ಮ ಎರಡನೇ ಓವರ್‌ನಲ್ಲಿ ಮೊದಲ ಎಸೆತದಲ್ಲಿ ಕುಸಾಲ್ ಮೆಂಡಿಸ್ ಅವರನ್ನು ಬೌಲ್ಡ್ ಮಾಡುವ ಮೂಲಕ ಮತ್ತೊಂದು ವಿಕೆಟ್ ಕಬಳಿಸಿ ಅಬ್ಬರಿಸಿದರು. ಈ ಸಂದರ್ಭದಲ್ಲಿ ಲಂಕಾ ಸ್ಥಿತಿ 3 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಅತ್ಯಂತ ಹೀನಾಯ ಸ್ಥಿತಿಯಲ್ಲಿತ್ತು.
ಮುಂದೆ ಬೌಲಿಂಗ್ ದಾಳಿಗೆ ಇಳಿದವರು ಮೊಹಮ್ಮದ್ ಶಮಿ. ಈ ವಿಶ್ವಕಪ್‌ನಲ್ಲಿ ಅಮೋಘ ದಾಳಿ ನಡೆಸಿರುವ ಶಮಿ ಕುಡ ಲಂಕಾಗೆ ಉಸಿರಾಡುವ ಅವಕಾಶ ನೀಡಲಿಲ್ಲ. ಶಮಿ ಕೂಡ ತಮ್ಮ ಮೊದಲ ಓವರ್‌ನಲ್ಲಿಯೇ ಎರಡು ವಿಕೆಟ್ ಕಬಳಿಸಿ ಅಬ್ಬರಿಸಿದರು. ಈ ಮೂಲಕ ಈ ಮೂಲಕ ಮೊದಲ 10 ಓವರ್ ಮುಗಿಯುವ ವೇಳೆಗೆ ಶ್ರೀಲಂಕಾ ಕೇವಲ 14 ರನ್‌ಗಳನ್ನು ಗಳಿಸಿ 6 ವಿಕೆಟ್ ಕಳೆದುಕೊಂಡು ಅತ್ಯಂತ ಹೀನಾಯ ಸ್ಥಿತಿಗೆ ತಲುಪಿತ್ತು.
ಮೊಹಮ್ಮದ್ ಶಮಿ ಭಯಾನಕ ದಾಳಿ ಮತ್ತೆ ಕೂಡ ಮುಂದುವರಿದಿತ್ತು. ಲಂಕಾದ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳನ್ನು ಶಮಿ ನಿರ್ದಯವಾಗಿ ಫೆವಿಲಿಯನ್‌ಗೆ ಅಟ್ಟಲು ಆರಂಭಿಸಿದರು. ಮತ್ತೊಂದು ಐದು ವಿಕೆಟ್‌ಗೆ ಗೊಂಚಲು ಪಡೆದು ಭಾರತದ ಪರವಾಗಿ ದಾಖಲೆ ಬರೆದಿದ್ದಾರೆ ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ.
ಈ ಪಂದ್ಯದಲ್ಲಿ ಐದು ಓವರ್‌ಗಳ ಬೌಲಿಂಗ್ ದಾಳಿ ನಡೆಸಿದ ಶಮಿ ಕೇವಲ 18 ರನ್‌ಗಳನ್ನು ನೀಡಿ ಐದು ವಿಕೆಟ್ ಕಬಳಿಸಿದ್ದಾರೆ. ಇನ್ನು ಮತ್ತೊಂದೆಡೆ ಸಿರಾಜ್ 7 ಓವರ್‌ಗಳಲ್ಲಿ 3 ವಿಕೆಟ್ ಕಬಳಿಸಿ ಅಬ್ಬರಿಸಿದರು. ಜಸ್ಪ್ರೀತ್ ಬೂಮ್ರಾ ಹಾಗೂ ರವೀಂದ್ರ ಜಡೇಜಾ ತಲಾ ಒಂದು ವಿಕೆಟ್ ಪಡೆದರು.
ಇನ್ನು ಇದಕ್ಕೂ ಮುನ್ನ ಬ್ಯಾಟಿಂಗ್‌ನಲ್ಲಿ ಭಾರತ ಅಬ್ಬರದ ಪ್ರದರ್ಶನ ನೀಡಿತ್ತು. ಟೀಮ್ ಇಂಡಿಯಾದ ಅನುಭವಿ ಆಟಗಾರ ವಿರಾಟ್ ಕೊಹ್ಲಿ, ಶುಬ್ಮನ್ ಗಿಲ್ ಹಾಗೂ ಶ್ರೇಯಸ್ ಐಯ್ಯರ್ ಅವರ ಅಮೋಘ ಆಟದಿಂದಾಗಿ ಟೀಮ್ ಇಂಡಿಯಾ ಬೃಹತ್ ಮೊತ್ತವನ್ನು ಕಲೆಹಾಕಿತ್ತು
ಟೀಮ್ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್
ಶ್ರೀಲಂಕಾ: ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಸಲ್ ಮೆಂಡಿಸ್ (ನಾಯಕ & ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಏಂಜೆಲೊ ಮ್ಯಾಥ್ಯೂಸ್, ದುಶನ್ ಹೇಮಂತ, ಮಹೇಶ್ ತೀಕ್ಷಣ, ಕಸುನ್ ರಜಿತ, ದುಷ್ಮಂತ ಚಮೀರ, ದಿಲ್ಶನ್ ಮಧುಶಂಕ
ಬೆಂಚ್: ಧನಂಜಯ ಡಿ ಸಿಲ್ವಾ, ಚಾಮಿಕಾ ಕರುಣಾರತ್ನೆ, ದುನಿತ್ ವೆಲ್ಲಲಾಗೆ, ಕುಸಲ್ ಪೆರೇರಾ