ವಿಶ್ವಕಪ್ ಟೂರ್ನಿಯಲ್ಲಿ ಇಂದು ಶ್ರೀಲಂಕಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಿದೆ. ಹೈಸ್ಕೋರಿಂಗ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಶ್ರೀಲಂಕಾ ವಿರುದ್ಧ 102 ರನ್‌ಗಳ ಅಂತರದ ಬೃಹತ್ ಗೆಲುವು ಸಾಧಿಸಿದೆ. ಈ ಮೂಲಕ ಟೆಂಬಾ ಬವುಮಾ ಪಡೆ ಭರ್ಜರಿ ಆರಂಭವನ್ನು ಪಡೆದುಕೊಂಡಿದೆ. ಮತ್ತೊಂದೆಡೆ ಶ್ರೀಲಂಕಾ ತಂಡ ಈ ಪಂದ್ಯದಲ್ಲಿ ಸೋಲು ಅನುಭವಿಸಿದ ಹೊರತಾಗಿಯೂ ಬ್ಯಾಟಿಂಗ್ ವಿಭಾಗದಲ್ಲಿ ನೀಡಿದ ಹೋರಾಟ ಸಹಜವಾಗಿಯೇ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿರುವುದರಲ್ಲಿ ಅನುಮಾನವಿಲ್ಲ.
ಈ ಪಂದ್ಯದಲ್ಲಿ ದಕ್ಷಿಣ ಆಪ್ರಿಕಾ ತಂಡ ದಾಖಲೆಯ 428 ರನ್‌ಗಳನ್ನು ಗಳಿಸಿತ್ತು. ಈ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ಶ್ರೀಲಂಕಾ ತಂಡ ಆರಂಭಿಕ ವಿಕೆಟನ್ನು ಶೀಘ್ರದಲ್ಲಿಯೇ ಕಳೆದುಕೊಂಡಿತು.ಆದರೆ ಎರಡನೇ ವಿಕೆಟ್‌ಗೆ ಕುಸಲ್ ಮೆಂಡಿಸ್ ಹಾಗೂ ಕುಸಲ್ ಪೆರೆರ ಉತ್ತಮ ಜೊತೆಯಾಟದಲ್ಲಿ ಭಾಗುಯಾದರು. ಕುತೂಹಲಕಾರಿ ಸಂಗತಿಯೆಂದರೆ ಇದರಲ್ಲಿ ಪೆರೆರಾ ಪಾಲು ಕೇವಲ 7 ರನ್ ಮಾತ್ರ. ಈ ಪಂದ್ಯದಲ್ಲಿ ಶ್ರೀಲಂಕಾ ಎರಡನೇ ವಿಕೆಟ್‌ಗೆ ಅರ್ಧ ಶತಕದ ಜೊತೆಯಾಟ ನೀಡಿದ್ದರೂ ಆ ಸಂದರ್ಭದಲ್ಲಿ ಪೆರೆರಾ ಖಾತೆಯನ್ನೇ ತೆರೆದಿರಲಿಲ್ಲ ಎನ್ನುವುದು ಅಚ್ಚರಿಯ ಅಂಶ. ಮೆಂಡಿಸ್ ಅಂಥಾ ಅದ್ಭುತವಾದ ಪ್ರದರ್ಶನ ನೀಡಿದ್ದರು.

ಈ ಪಂದ್ಯದಲ್ಲಿ 42 ಎಸೆತಗಳನ್ನು ಎದುರಿಸಿದ ಮೆಂಡಿಸ್ 76 ರನ್‌ಗಳನ್ನು ಬಾರಿಸಿದ್ದಾರೆ. ಉಳಿದಂತೆ ಚರಿತ ಅಸಲಕಂಕಾ ಕೂಡ 79 ರನ್‌ಗಳ ಕೊಡುಗೆ ನೀಡಿದರು. ಇನ್ನು ನಾಯಕ ದಾಸುನ್ ಶನಕ 68 ರನ್‌ಗಳನ್ನು ಗಳಿಸಿ ತಂಡದ ಹೋರಾಟವನ್ನು ಚಾಲ್ತಿಯಲ್ಲಿರಿಸಿದರು. ಆದರೆ ಆಫ್ರಿಕಾದ ಬೃಹತ್ ಮೊತ್ತದ ಗುರಿಯನ್ನು ಬೆನ್ನಟ್ಟುವುದು ಲಂಕಾ ಪಡೆಗೆ ಅಸಾಧ್ಯವಾಯಿತು. ಅಂತಿಮವಾಗಿ 326 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 102 ರನ್‌ಗಳ ಅಂತರದ ಸೋಲು ಒಪ್ಪಿಕೊಂಡಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡ ಆರಂಭದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಬ್ಯಾಟಿಂಗ್‌ಗೆ ಇಳಿಸಿತು. ಆದರೆ ಆರಂಭಿಕ ಆಟಗಾರ ದಕ್ಷಿಣ ಆಫ್ರಿಕಾ ನಾಯಕ ಟೆಂಬಾ ಬವುಮಾ ಅವರನ್ನು 10 ರನ್‌ಗಳಾಗುವಷ್ಟರಲ್ಲಿ ಔಟ್ ಮಾಡುವಲ್ಲಿ ಯಶಸ್ವಿಯಾಯಿತು. ಆದರೆ ಅದಾದ ಬಳಿಕ ಲಂಕಾ ಬೌಲರ್‌ಗಳಿಗೆ ಆಘಾತದ ಮೇಲೆ ಆಘಾತ ಎದುರಾಗಿತ್ತು.
ಕ್ವಿಂಟನ್ ಡಿಕಾಕ್ ಜೊತೆ ಸೇರಿಕೊಂಡ ವಾನ್ ಡರ್ ಡುಸೆನ್ ಬರೊಬ್ಬರಿ 204 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. 100 ರನ್ ಗಳಿಸಿ ವಿಕೆಟ್ ಕಳೆದುಕೊಂಡ ಬಳಿಕ ಡುಸೆನ್‌ಗೆ ಸಾಥ್ ನೀಡಿದ್ದು ಮಾರ್ಕ್ರಮ್. ವಾಡರ್ ಡುಸೆನ್ ಕೂಡ ಭರ್ಜರಿ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಇನ್ನು ಮತ್ತೊಂದೆಡೆ ಐಡೆನ್ ಮಾರ್ಕ್ರಮ್ ಮತ್ತಷ್ಟು ಆಕ್ರಮಣಕಾರಿಯಾಗಿ ಬ್ಯಾಟಿಂಗ್ ನಡೆಸಿದರು. ಕ್ಲಾಸೆನ್ ಹಾಗೂ ಮಿಲ್ಲರ್ ಜೊತೆಗೆ ಸೇರಿಕೊಂಡು ಅಬ್ಬರದ ಬ್ಯಾಟಿಂಗ್ ನಡೆಸಿದರು. ಕೇವಲ 54 ಎಸೆತಗಳಲ್ಲಿ 106 ರನ್‌ಗಳನ್ನು ಸಿಡಿಸಿ ಈ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಪ್ರಿಕಾ ಪರವಾಗಿ ಶತಕ ಸಿಡಿಸಿದ ಮೂರನೇ ಆಟಗಾರ ಎನಿಸಿಕೊಂಡರು. ಈ ಭರ್ಜರಿ ಪ್ರದರ್ಶನದೊಂದಿಗೆ ದಕ್ಷಿಣ ಆಫ್ರಿಕಾ ತಂಡ 5 ವಿಕೆಟ್ ಕಳೆದುಕೊಂಡು 428 ರನ್‌ಗಳನ್ನು ಕಲೆಹಾಕಿತು.
ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಟೆಂಬಾ ಬವುಮಾ (ನಾಯಕ), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್, ಜೆರಾಲ್ಡ್ ಕೋಟ್ಜಿ, ಕೇಶವ್ ಮಹಾರಾಜ್, ಲುಂಗಿ ಎನ್ಗಿಡಿ, ಕಗಿಸೊ ರಬಾಡ
ಬೆಂಚ್: ಆಂಡಿಲ್ ಫೆಹ್ಲುಕ್ವಾಯೊ, ಲಿಜಾದ್ ವಿಲಿಯಮ್ಸ್, ತಬ್ರೈಜ್ ಶಮ್ಸಿ, ರೀಜಾ ಹೆಂಡ್ರಿಕ್ಸ್
ಶ್ರೀಲಂಕಾ: ಕುಸಾಲ್ ಪೆರೇರಾ, ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕ, ಧನಂಜಯ ಡಿ ಸಿಲ್ವ, ದಸುನ್ ಶನಕ (ಸಿ), ದುನಿತ್ ವೆಲ್ಲಲಗೆ, ಮಥೀಶ ಪತಿರಣ, ದಿಲ್ಶನ್ ಮಧುಶಂಕ, ಕಸುನ್ ರಜಿತ
ಬೆಂಚ್: ದಿಮುತ್ ಕರುಣಾರತ್ನ, ಲಹಿರು ಕುಮಾರ, ದುಶನ್ ಹೇಮಂತ, ಮಹೇಶ್ ತೀಕ್ಷಣ