ವಿಶ್ವಕಪ್ ಟೂರ್ನಿಯ ಲೀಗ್ ಹಂತದ ಅಂತಿಮ ಪಂದ್ಯದಲ್ಲಿಯೂ ಟೀಮ್ ಇಂಡಿಯಾ ಅಮೋಘ ಗೆಲುವು ಸಾಧಿಸಿದೆ. ನೆದರ್ಲೆಂಡ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಬಳಿಕ ಬೌಲಿಂಗ್‌ನಲ್ಲಿಯೂ ಉತ್ತಮ ಪ್ರದರ್ಶನ ನೀಡಿದ್ದು ಭರ್ಜರಿ 160 ರನ್‌ಗಳ ಅಂತರದಿಂದ ಗೆಲುವು ಸಾಧಿಸಿದೆ. ಈ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಅಜೇಯ ಓಟವನ್ನು ಮುಂದುವರಿಸಿದೆ.
ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನೀಡಿದ 411 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ನೆದರ್ಲೆಂಡ್ಸ್ ತಂಡ ಈ ಪಂದ್ಯದಲ್ಲಿ 250 ರನ್‌ಗಳನ್ನು ಮಾತ್ರವೇ ಗಳಿಸಲು ಶಕ್ತವಾಯಿತು. ಈ ಮೂಲಕ ನಿರೀಕ್ಷೆಯಂತೆಯೇ ಭಾರೀ ಅಂತರದಿಂದ ಸೋಲು ಅನುಭವಿಸಿದೆ. ಹಾಗಿದ್ದರೂ ನೆದರ್ಲೆಂಡ್ಸ್ ತಂಡದ ಕೆಲ ಆಟಗಾರರು ಗಮನಾರ್ಹ ಪ್ರದರ್ಶನ ನೀಡುವಲ್ಲಿ ಯಶಸ್ವುಯಾದರು.

ನೆದರ್ಲೆಂಡ್ಸ್ ತಂಡದ ಪರವಾಗಿ ತೇಜ ನಿಡಮನೂರು 54 ರನ್‌ಗಳಿಸಿದರೆ ಸೈಬ್ರಾಂಡ್ ಎಂಗಲ್‌ಬ್ರೆಕ್ಟ್ 45 ರನ್‌ಗಳನ್ನು ಗಳಿಸಿದರು. ಆರಂಭಿಕ ಆಟಗಾರ ಮ್ಯಾಕ್ಸ್ ಒಡೌಡ್ ಹಾಗೂ ಕೋಲಿನ್ ಆಕರ್‌ಮಾನ್ ಕ್ರಮವಾಗಿ 30 ಹಾಗೂ 35 ರನ್‌ಗಳನ್ನು ಗಳಿಸಿದರು. ಹೀಗಾಗಿ ಈ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡ 250 ರನ್‌ಗಳನ್ನು ಗಳಿಸಲು ಸಾಧ್ಯವಾಯಿತು. ಈ ಮೂಲಕ ಈ ಪಂದ್ಯದಲ್ಲಿ ಭರ್ತಿ 160 ರನ್‌ಗಳ ಅಂತರದಿಂದ ಶರಣಾಗಿದೆ.
ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾಗೆ ಎಂದಿನಂತೆ ಅಬ್ಬರದ ಆರಂಭ ದೊರೆಯಿತು. ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಶುಬ್ಮನ್ ಗಿಲ್ ಮೊದಲ ಪವರ್‌ಪ್ಲೇನಲ್ಲಿ ಎಂದಿನಂತೆಯೇ ಎದುರಾಳೀ ಬೌಲರ್‌ಗಳನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದ್ದರು. ಭರ್ತಿ 100 ರನ್‌ಗಳ ಜೊತೆಯಾಟ ನೀಡಿದ ಈ ಜೋಡಿ ಶುಬ್ಮಬ್ ಗಿಲ್ 51 ರನ್‌ಗಳಿಗೆ ಔಟಾಗುವ ಮೂಲಕ ಬೇರ್ಪಟ್ಟಿತ್ತು.
ಅದಾದ ಬಳಿಕ ರೋಹಿತ್ ಶರ್ಮಾ 61 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ನಂತರ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಐಯ್ಯರ್ ಮತ್ತೊಂದು ಅಮೋಘ ಜೊತೆಯಾಟದಲ್ಲಿ ಭಾಗಿಯಾದರು. ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ 51 ರನ್‌ಗಳಿಗೆ ವಿಕೆಟ್ ಕಳೆದುಕೊಂಡರು. ನಂತರ ಆರಂಭವಾಗಿದ್ದು ಶ್ರೇಯಸ್ ಐಯ್ಯರ್ ಹಾಗೂ ಕೆಎಲ್ ರಾಹುಲ್ ಅವರ ಅಮೋಘ ಜೊತೆಯಾಟ.
ಮೂರನೇ ವಿಕೆಟ್ ರೂಪದಲ್ಲಿ ವಿರಾಟ್ ವಿಕೆಟ್ ಕಳೆದುಕೊಂಡಾಗ ಟೀಮ್ ಇಂಡಿಯಾ 28.4 ಓವರ್‌ಗಳಲ್ಲಿ 200 ರನ್‌ಗಳನ್ನು ಗಳಿಸಿತ್ತು. ಅದಾದ ಬಳಿಕ ಐಯ್ಯರ್ ಹಾಗೂ ಕೆಎಲ್ ರಾಹುಲ್ ನೆದರ್ಲೆಂಡ್ಸ್ ಬೌಲರ್‌ಗಳನ್ನು ನಿರ್ದಯವಾಗಿ ದಂಡಿಸಿದ್ದಾರೆ. ಶ್ರೇಯಸ್ ಐಯ್ಯರ್ 94 ಎಸೆತಗಳಲ್ಲಿ 128 ರನ್‌ಗಳನ್ನು ಗಳಿಸಿ ಅಜೇಯವಾಗುಳಿದರೆ ಕೆಎಲ್ ರಾಹುಲ್ 64 ಎಸೆತಗಳಲ್ಲಿ 102 ರನ್ ಬಾರಿಸಿದ್ದು ವಿಶ್ವಕಪ್‌ನಲ್ಲಿ ಭಾರತದ ಪರವಾಗಿ ಅತ್ಯಂತ ವೇಗವಾಗಿ ಶತಕ ಸಿಡಿಸಿದ ದಾಖಲೆ ಬರೆದಿದ್ದಾರೆ. ಇನ್ನಿಂಗ್ಸ್‌ನ ಒಂದು ಎಸೆತ ಬಾಕಿಯಿರುವಾಗ ರಾಹುಲ್ ವಿಕೆಟ್ ಕಳೆದುಕೊಂಡರು. ಇನ್ನು ಟೀಮ್ ಇಂಡಿಯಾದ ಬ್ಯಾಟರ್‌ಗಳ ಈ ಅಬ್ಬರದ ಪ್ರದರ್ಶನದಿಂದಾಗಿ ಭಾರತ ಈ ಪಂದ್ಯದಲ್ಲಿ ಕೇವಲ ನಾಲ್ಕು ವಿಕೆಟ್ ಕಳೆದುಕೊಂಡು ಬರೊಬ್ಬರಿ 410 ರನ್‌ಗಳನ್ನು ಗಳಿಸಿತು.
ಟೀಮ್ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್
ಬೆಂಚ್: ಪ್ರಸಿದ್ಧ್ ಕೃಷ್ಣ, ರವಿಚಂದ್ರನ್ ಅಶ್ವಿನ್, ಇಶಾನ್ ಕಿಶನ್, ಶಾರ್ದೂಲ್ ಠಾಕೂರ್
ನೆದರ್ಲೆಂಡ್ಸ್: ವೆಸ್ಲಿ ಬ್ಯಾರೆಸಿ, ಮ್ಯಾಕ್ಸ್ ಓಡೌಡ್, ಕಾಲಿನ್ ಅಕರ್‌ಮನ್, ಸೈಬ್ರಾಂಡ್ ಎಂಗಲ್‌ಬ್ರೆಕ್ಟ್, ಸ್ಕಾಟ್ ಎಡ್ವರ್ಡ್ಸ್ (ನಾಯಕ & ವಿಕೆಟ್ ಕೀಪರ್), ಬಾಸ್ ಡಿ ಲೀಡೆ, ತೇಜ ನಿಡಮನೂರು, ಲೋಗನ್ ವ್ಯಾನ್ ಬೀಕ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಆರ್ಯನ್ ದತ್, ಪಾಲ್ ವ್ಯಾನ್ ಮೀಕೆರೆನ್
ಬೆಂಚ್: ಸಾಕಿಬ್ ಜುಲ್ಫಿಕರ್, ವಿಕ್ರಮಜಿತ್ ಸಿಂಗ್, ಶರೀಜ್ ಅಹ್ಮದ್, ನೋಹ್ ಕ್ರೋಸ್