ಟೀಮ್ ಇಂಡಿಯಾ ಈ ಬಾರಿಯ ವಿಶ್ವಕಪ್‌ನಲ್ಲಿ ಅಜೇಯ ಓಟವನ್ನು ಮುಂದುವರಿಸಿದ್ದು ಫೈನಲ್‌ಗೆ ಲಗ್ಗೆಯಿಟ್ಟಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಅಮೋಘ ಪ್ರದರ್ಶನ ನೀಡಿದ ಭಾರತ ತಂಡ ಬೃಹತ್ ಗೆಲುವಿನೊಂದಿಗೆ ಫೈನಲ್‌ಗೆ ಲಗ್ಗೆಯಿಟ್ಟಿದೆ. ಟೀಮ್ ಇಂಡಿಯಾದ ಈ ಪ್ರದರ್ಶನದ ಬಗ್ಗೆ ಮಾತನಾಡುತ್ತಾ ಇಂಗ್ಲೆಂಡ್ ಮಾಜಿ ನಾಯಕ ನಾಸಿರ್ ಹುಸೇನ್ ಓರ್ವ ಕ್ರಿಕೆಟಿಗನ ಬಗ್ಗೆ ವಿಶೇಷ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಆತನೇ ಭಾರತ ತಂಡದ ನಿಜವಾದ ಹೀರೋ ಎಂದಿದ್ದಾರೆ ನಾಸಿರ್ ಹುಸೇನ್.
ಅಂದಹಾಗೆ ನಾಸಿರ್ ಹುಸೇನ್ ಹೀಗೆ ಮುಕ್ತಕಂಠದಿಂದ ಹೊರಗಳಿದ್ದು ಬೇರೆ ಯಾರನ್ನೂ ಅಲ್ಲ. ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅವರನ್ನು. ನಾಯಕ ರೋಹಿತ್ ಶರ್ಮಾ ಸಂಪೂರ್ಣ ಭಾರತ ತಂಡದ ಆಟದ ವಿಧಾನವನ್ನು ಬದಲಾಯಿಸಿದರು ಎಂದಿದ್ದಾರೆ ನಾಸಿರ್ ಹುಸೇನ್.

2021ರ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ನಿಧಾನಗತಿಯ ಬ್ಯಾಟಿಂಗ್ ವಿಧಾನದಿಂದಾಗಿ ಸಾಕಷ್ಟು ಟೀಕೆಗೆ ಒಳಗಾಗಿತ್ತು. 2021ರ ಟಿ20 ವಿಶ್ವಕಪ್‌ನಲ್ಲಿ ಭಾರತ ಸೂಪರ್ 12 ಹಂತಕ್ಕೆ ಪ್ರವೇಶ ಪಡೆಯಲು ಕೂಡ ವಿಫಲವಾಗಿತ್ತು. ಬಳಿಕ 2022ರಲ್ಲಿ ನಡೆದ ಟಿ20 ವಿರ್ಶವಕಪ್‌ನಲ್ಲಿ ಭಾರತ ಸೆಮಿಫೈನಲ್‌ನಲ್ಲಿ ನಿರ್ಗಮಿಸಿತ್ತು.
"ನಾಳಿನ ಹೆಡ್‌ಲೈನ್ ವಿರಾಟ್ ಕೊಹ್ಲಿ ಬಗ್ಗೆ ಇರಬಹುದು, ಶ್ರೇಯಸ್ ಐಯ್ಯರ್ ಅಥವಾ ಮೊಹಮ್ಮದ್ ಶಮಿ ಬಗ್ಗೆ ಇರಬಹುದು. ಆದರೆ ಭಾರತ ತಂಡದಲ್ಲಿ ನಿಜವಾದ ಹೀರೋ ಎಂದರೆ ಭಾರತದ ಬ್ಯಾಟಿಂಗ್ ವಿಧಾನವನ್ನೇ ಬದಲಾಯಿಸಿರುವ ರೋಹಿತ್ ಶರ್ಮಾ ಅವರು. 2022ರ ವಿಶ್ವಕಪ್‌ನಲ್ಲಿ ಅಡಿಲೇಡ್‌ನಲ್ಲಿ ಭಾರತ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದ್ದಾಗ ದಿನೇಶ್ ಕಾರ್ತಿಕ್ ಕೂಡ ಆ ತಂಡದಲ್ಲಿದ್ದರು. ಆ ಸಂದರ್ಭದಲ್ಲಿ ನಿಧಾನಗತಿಯ ಬ್ಯಾಟಿಂಗ್‌ನಿಂದಾಗಿ ಅಗತ್ಯ ರನ್‌ಗಳನ್ನು ಗಳಿಸಲು ಸಾಧ್ಯವಾಗಿರಲಿಲ್ಲ. ಅಲ್ಲಿ ಇಂಗ್ಲೆಂಡ್ ವಿದ್ಧ 10 ವಿಕೆಟ್‌ಗಳ ಅಂತರದಿಂದ ಸೋತಿತ್ತು. ಆ ಸಂದರ್ಭದಲ್ಲಿ ರೋಹಿತ್ ದಿನೇರ್ಶ ಕಾರ್ತಿಕ್ ಬಳಿ ಭಾರತಕ್ಕೆ ಬದಲಾವಣೆಯ ಅಗತ್ಯವಿದೆ ಎಂದಿ ಹೇಳಿಕೊಂಡಿದ್ದರು" ಎಂದು ರೋಹಿತ್ ಶರ್ಮಾ ಅವರನ್ನು ಉಲ್ಲೇಖಿಸಿ ನಾಸಿರ್ ಹುಸೇನ್ ಸ್ಕೈ ಸ್ಪೋರ್ಟ್ಸ್‌ನ ಸಂವಾದಲ್ಲಿ ಭಾಗವಹಿಸಿ ಪ್ರತಿಕ್ರಿಯೆ ನೀಡಿದ್ದಾರೆ.
ನಾಕೌಟ್ ಪಂದ್ಯದಲ್ಲಿಯೂ ರೋಹಿತ್ ಶರ್ಮಾ ಆಡಿದ ವೇಗದ ಬ್ಯಾಟಿಂಗ್ ಶೈಲಿಯ ಬಗ್ಗೆ ಹುಸೇನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ರೋಹಿತ್ ಶರ್ಮಾ ಆರಂಭದಿಂದಲೇ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ಕಿವೀಸ್ ಬೌಲಿಂಗ್ ದಾಳಿಯನ್ನು ಹಿಮ್ಮೆಟ್ಟಿಸಿದ್ದರು. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಕೇವಲ 29 ಎಸೆತಗಳಲ್ಲಿ 47 ರನ್‌ಗಳನ್ನು ಗಳಿಸಿದ್ದಾರೆ.
"ನನ್ನ ಪ್ರಕಾರ ಇಂದಿನ ಪಂದ್ಯದಲ್ಲಿ ನಿಜವಾದ ಹೀರೋ ಎಂದರೆ ಅದು ರೋಹಿತ್ ಶರ್ಮಾ. ಗ್ರೂಪ್ ಹಂತ ಹಾಗೂ ನಾಕೌಟ್ ಹಂತ ವಿಭಿನ್ನವಾಗಿರುತ್ತದೆ. ಆದರೆ ನಾಯಕ ರೋಹಿತ್ ಶರ್ಮಾ ನಿರ್ಭೀಥ ಆಟವನ್ನೇ ನಾವು ಆಡುತ್ತೇವೆ ಎಂದು ಎಲ್ಲರಿಗೂ ತೋರಿಸಿಕೊಟ್ಟರು. ನನ್ನ ಬ್ಯಾಟಿಂಗ್ ಶೈಲಿಯ ಮೂಲಕ ಸ್ಪಷ್ಟವಾದ ಸಂದೇಶವನ್ನು ನಾಯಕ ರವಾನಿಸಿದ್ದಾರೆ" ಎಂದಿದ್ದಾರೆ ನಾಸಿರ್ ಹುಸೇನ್.