ಐರ್ಲೆಂಡ್ ತಂಡ ಈ ಬಾರಿ ಭಾರತದಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸುವ ಅರ್ಹತೆಯನ್ನು ಕಳೆದುಕೊಂಡಿದೆ. ಜಿಂಬಾಬ್ವೆಯಲ್ಲಿ ನಡೆಯುತ್ತಿರುವ ಅರ್ಹತಾ ಸುತ್ತಿನಲ್ಲಿ ಲೀಗ್ ಹಂತದಿಂದಲೇ ಹೊರಬಿದ್ದಿರುವ ಐರ್ಲೆಂಡ್ ತಂಡ ಹೀನಾಯ ಪ್ರದರ್ಶನ ನೀಡಿ ನಿರಾಸೆ ಅನುಭವಿಸಿದೆ. ಇದರ ಬೆನ್ನಲ್ಲೇ ಐರ್ಲೆಂಡ್ ತಂಡದ ಸೀಮಿತ ಓವರ್‌ಗಳ ನಾಯಕತ್ವದ ಸ್ಥಾನಕ್ಕೆ ಆಂಡ್ರ್ಯೋ ಬಲ್ಬರ್ನೈ ರಾಜೀನಾಮೆ ನೀಡಿದ್ದಾರೆ.
2019ರ ಬಳಿಕ ಐರ್ಲೆಂಡ್ ತಂಡವನ್ನು ಮುನ್ನಡೆಸುತ್ತಿರುವ ಬಲ್ಬಿರ್ನಿ ಮಂಗಳವಾರ ನೇಪಾಳ ವಿರುದ್ಧದ ಕ್ವಾಲಿಫೈಯರ್‌ನಲ್ಲಿ ಐರ್ಲೆಂಡ್‌ನ ಪ್ಲೇಆಫ್ ಪಂದ್ಯದ ನಂತರ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಸದ್ಯ ಹಂಗಾಮಿ ನಾಯಕನಾಗಿ ಪಾಲ್ ಸ್ಟಿರ್ಲಿಂಗ್ ತಂಡವನ್ನು ಮುನ್ನಡೆಸುವ ಜವಾಬ್ಧಾರಿ ವಹಿಸಿಕೊಳ್ಳಲಿದ್ದಾರೆ.
ಐರ್ಲೆಂಡ್‌ನ ಏಕದಿನ ವಿಶ್ವಕಪ್ ಕ್ವಾಲಿಫೈಯರ್ 2023 ಅಭಿಯಾನ ಗ್ರೂಪ್ ಹಂತದಲ್ಲಿ ಕೇವಲ 1 ಪಂದ್ಯದಲ್ಲಿ ಮಾತ್ರವೇ ಗೆಲುವು ಸಾಧಿಸಲು ಸಾಧ್ಯವಾಯಿತು. ಬಿ ಗುಂಪಿನಲ್ಲಿ ಐರ್ಲೆಂಡ್ ತಂಡ ಯುಎಇ ವಿರುದ್ಧ ಮಾತ್ರವೇ ಗೆದ್ದುಕೊಂಡಿದ್ದು ಶ್ರೀಲಂಕಾ, ಸ್ಕಾಟ್ಲೆಂಡ್ ಮತ್ತು ಓಮನ್‌ಗೆ ಸೋತು ಕೊನೆಯಿಂದ ಎರಡನೇ ಸ್ಥಾನ ಪಡೆದುಕೊಂಡಿತು.

ಕೊನೆಯ ಪಂದ್ಯದಲ್ಲಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ ನಂತರ 32 ವರ್ಷದ ಬಲ್ಬಿರ್ನಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. "ಸಾಕಷ್ಟು ಯೋಚನೆ ಮತ್ತು ಚಿಂತನೆ ಡೆಸಿದ ಬಳಿಕ ನಾನು ಏಕದಿನ ಮತ್ತು T20ಐ ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರವನ್ನು ಮಾಡಿದ್ದೇನೆ. ಕಳೆದ ಕೆಲವು ವರ್ಷಗಳಿಂದ ಈ ತಂಡವನ್ನು ಮುನ್ನಡೆಸುವುದು ನನ್ನಗೆ ಸಿಕ್ಕ ದೊಡ್ಡ ಗೌರವ. ಈ ಹಂತದಲ್ಲಿ ನಾನು ಪಡೆದ ಬೆಂಬಲಕ್ಕೆ ತುಂಬಾ ಕೃತಜ್ಞನಾಗಿದ್ದೇನೆ. ಅನೇಕ ಆಟಗಾರರು, ತರಬೇತುದಾರರು, ಕ್ರಿಕೆಟ್ ಐರ್ಲೆಂಡ್ ಮತ್ತು ಐರ್ಲೆಂಡ್ ತಂಡದ ಬೆಂಬಲಿಗರು ಪಿಚ್‌ನ ಒಳಗೆ ಹಾಗೂ ಹೊರಗೆ ನನಗೆ ಬೆಂಬಲ ನೀಡಿದ್ದಾರೆ ಎಲ್ಲರಿಗೂ ಧನ್ಯವಾದಗಳು" ಎಂದು ಬಲ್ಬರ್ನೈ ಹೇಳಿಕೆ ನೀಡಿದ್ದಾರೆ.
"ನನಗೆ ಮತ್ತು ಅದಕ್ಕಿಂತಲೂ ಹೆಚ್ಚಿನದಾಗಿ ತಂಡಕ್ಕಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲು ಇದು ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ. ನಾನು ಈ ತಂಡದ ಪರವಾಗಿ ನನ್ನ ಪ್ರಯತ್ನವನ್ನು ಮುಂದುವರಿಸುತ್ತೇನೆ. ಮುಂದಿನ ವರ್ಷಗಳು ನಮಗೆ ಯಶಸ್ವಿ ಅವಧಿಯಾಗಲಿದೆ ಎಂದು ನಾನು ಭಾವಿಸುವ ನಿಟ್ಟಿನಲ್ಲಿ ಶ್ರಮವಹಿಸುತ್ತೇನೆ" ಎಂದು ಬಲ್ಬರ್ನೈ ಅಭಿಪ್ರಾಯವನ್ನು ಪ್ರಕಟಿಸಿದ್ದಾರೆ.
ಬಲ್ಬಿರ್ನೈ ಅವರು 2019ರ ಅಂತ್ಯದಲ್ಲಿ ಐರ್ಲೆಂಡ್ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಈ ಅವಧಿಯಲ್ಲಿ ನಾಲ್ಕು ಟೆಸ್ಟ್, 33 ಏಕದಿನ ಮತ್ತು 52 ಟಿ20ಐ ತಮ್ಮ ತಂಡವನ್ನು ಮುನ್ನಡೆಸಿದ್ದಾರೆ. ಇನ್ನು ಈ ಹಿಂದೆ 13 ಪಂದ್ಯಗಳಲ್ಲಿ ಐರ್ಲೆಂಡ್ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿರುವ ಸ್ಟಿರ್ಲಿಂಗ್ ಈಗ ನಾಯಕತ್ವದ ಜವಾಬ್ಧಾರಿ ವಹಿಸಿಕೊಂಡಿದ್ದಾರೆ. ನಾಲ್ಕು ಏಕದಿನ ಮತ್ತು ಒಂಬತ್ತು ಟಿ20ಐ ಪಂದ್ಯಗಳಲ್ಲಿ ಸ್ಟಿರ್ಲಿಂಗ್ ಐರಿಶ್ ತಂಡದ ನಾಯಕರಾಗಿದ್ದರು.