ವಿಶ್ವಕಪ್‌ನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಐರ್ಲೆಂಡ್ ತಂಡ ಮೊದಲ ಗೆಲುವು ಸಾಧಿಸಿದೆ. ಲೀಗ್ ಹಂತದ ಮೊದಲ ಮೂರು ಪಂದ್ಯಗಳಲ್ಲಿಯೂ ಐರ್ಲೆಂಡ್ ತಂಡ ಸೋಲು ಅನುಭವಿಸಿದ್ದು ಸೂಪರ್ ಸಿಕ್ಸರ್‌ಗೆ ಪ್ರವೇಶಿಸುವ ಅರ್ಹತೆಯನ್ನು ಈಗಾಗಲೇ ಕಳೆದುಕೊಂಡಿತ್ತು. ಹೀಗಾಗಿ ಭಾರತದಲ್ಲಿ ನಡೆಯಲಿರುವ ವಿಶ್ವಕಪ್‌ನ ಮುಖ್ಯ ಘಟ್ಟದಲ್ಲಿ ಆಡುವ ಅವಕಾಶವನ್ನು ಈಗಾಗಲೇ ಐರ್ಲೆಂಡ್ ಕಳೆದುಕೊಂಡಿದೆ. ಆದರೆ ಟೂರ್ನಿಯಲ್ಲಿ ಒಂದು ಗೆಲುವು ಸಾಧಿಸುವ ಮೂಲಕ ಗೆಲುವಿನ ರುಚಿ ಕಂಡು ಅಭಿಯಾನ ಮುಕ್ತಾಯಗೊಳಿಸಿದೆ.
ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ನಡೆಸಿದ ಐರ್ಲೆಂಡ್ ತಂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿತು. ಅದರಲ್ಲೂ ಎರಡನೇ ವಿಕೆಟ್‌ಗೆ ಜೊತೆಯಾದ ಪಾರ್ಲ್ ಸ್ಟಿರ್ಲಿಂಗ್ ಹಾಗೂ ನಾಯಕ ಆಂಡ್ರ್ಯೋ ಬಲ್ಬರ್ನೈ ಎರಡನೇ ವಿಕೆಟ್‌ಗೆ 184 ರನ್‌ಗಳ ಜೊತೆಯಾಟ ನೀಡಿದರು. ನಂತರ ಬಂದ ಹ್ಯಾರಿ ಟಕ್ಟರ್ ಕೂಡ ಅರ್ಧ ಶತಕ ಸಿಡಿಸಿ ಅಬ್ಬರಿಸಿದರು.

ಪಾಲ್ ಸ್ಟಿರ್ಲಿಂಗ್ ಈ ಪಂದ್ಯದಲ್ಲಿ 134 ಎಸೆತಗಳನ್ನು ಎದುರಿಸಿದ್ದು 162 ರನ್‌ಗಳನ್ನು ಬಾರಿಸಿ ಅಬ್ಬರಿಸಿದರು. ಬಲ್ಬರ್ನೈ 66 ಹಾಗೂ ಟೆಕ್ಟರ್ 57 ರನ್‌ಗಳ ಕೊಡುಗೆ ನೀಡಿದ್ದಾರೆ. ಈ ಮೂಲಕ ನಿಗದಿತ 50 ಓವರ್‌ಗಳಲ್ಲಿ ಐರ್ಲೆಂಡ್ ತಂಡ 4 ವಿಕೆಟ್‌ಗಳನ್ನು ಕಳೆದುಕೊಂಡು 349 ರನ್‌ಗಳನ್ನು ಕಲೆಹಾಕಿತು. ಈ ಮೂಲಕ ಯುಎಇ ತಂಡಕ್ಕೆ ಭಾರಿ ದೊಡ್ಡ ಗುರಿಯನ್ನು ನಿಗದಿಪಡಿಸಿತು.
ಈ ಬೃಜತ್ ಮೊತ್ತವನ್ನು ಬೆನ್ನಟ್ಟಿದ ಯುಎಇ ತಂಡಕ್ಕೆ ಉತ್ತಮ ಆರಂಭವೇ ದೊರೆಯಿತಾದರೂ ನಂತರ ಉತ್ತಮ ಜೊತೆಯಾಟ ಬಾರಲಿಲ್ಲ. ತಂಡದ ಪರವಾಗಿ ಯಾರಿಂದಲೂ ಅರ್ಧ ಶತಕದ ಕೊಡುಗೆ ನೀಡ ನೀಡಲು ಸಾಧ್ಯವಾಗಲಿಲ್ಲ. ಹೀಗಾಗಿ 39 ಓವರ್‌ಗಳಲ್ಲಿ ಯುಎಇ ಎಲ್ಲಾ ವಿಕೆಟ್ ಕಳೆದುಕೊಂಡು 211 ರನ್‌ಗಳನ್ನು ಮಾತ್ರವೇ ಗಳಿಸಿತು. ಈ ಮೂಲಕ ಐರ್ಲೆಂಡ್ ತಂಡ 138 ರನ್‌ಗಳ ಬೃಹತ್ ಅಂತರದಿಂದ ಗೆಲುವು ಸಾಧಿಸಿದೆ.
ಐರ್ಲೆಂಡ್ ಆಡುವ ಬಳಗ: ಪಾಲ್ ಸ್ಟಿರ್ಲಿಂಗ್, ಆಂಡಿ ಮ್ಯಾಕ್‌ಬ್ರೈನ್, ಆಂಡ್ರ್ಯೂ ಬಾಲ್ಬಿರ್ನಿ (ನಾಯಕ), ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್ (ವಿಕೆಟ್ ಕೀಪರ್), ಕರ್ಟಿಸ್ ಕ್ಯಾಂಫರ್, ಜಾರ್ಜ್ ಡಾಕ್ರೆಲ್, ಗರೆಥ್ ಡೆಲಾನಿ, ಮಾರ್ಕ್ ಅಡೇರ್, ಬ್ಯಾರಿ ಮೆಕಾರ್ಥಿ, ಜೋಶುವಾ ಲಿಟಲ್
ಬೆಂಚ್: ಬೆಂಜಮಿನ್ ವೈಟ್, ಕ್ರೇಗ್ ಯಂಗ್, ಪೀಟರ್ ಮೂರ್, ಗ್ರಹಾಂ ಹ್ಯೂಮ್
ಯುಎಇ: ಮುಹಮ್ಮದ್ ವಸೀಮ್ (ನಾಯಕ), ಆರ್ಯನ್ಶ್ ಶರ್ಮಾ (ವಿಕೆಟ್ ಕೀಪರ್), ವೃತ್ಯ ಅರವಿಂದ್, ಎಥಾನ್ ಡಿಸೋಜಾ, ಬಾಸಿಲ್ ಹಮೀದ್, ಅಲಿ ನಾಸೀರ್, ಅಯಾನ್ ಅಫ್ಜಲ್ ಖಾನ್, ಸಂಚಿತ್ ಶರ್ಮಾ, ಕಾರ್ತಿಕ್ ಮೆಯ್ಯಪ್ಪನ್, ಜುನೈದ್ ಸಿದ್ದಿಕ್, ಮುಹಮ್ಮದ್ ಜವಾದುಲ್ಲಾ
ಬೆಂಚ್: ರೋಹನ್ ಮುಸ್ತಫಾ, ಆಸಿಫ್ ಖಾನ್, ಜಹೂರ್ ಖಾನ್, ರಮೀಜ್ ಶಹಜಾದ್